
ಬೆಂಗಳೂರು (ಮಾ.10): ಕೇರಳದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ ಆದೇಶ ಮಾರ್ಪಡಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಿ ಫೆ.18ರಂದು ಜಿಲ್ಲಾಧಿಕಾರಿ (ದಕ್ಷಿಣ ಕನ್ನಡ) ಹೊರಡಿಸಿದ ಆದೇಶ ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ.ಸುಬ್ಬಯ್ಯ ರೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ವಾದ-ಪ್ರತಿವಾಗ ಆಲಿಸಿದ ಬಳಿಕ, ಕಾಸರಗೋಡು ಜಿಲ್ಲೆಯಿಂದ ಮಾತ್ರ ಪ್ರವೇಶ ನಿರ್ಬಂಧ ಹೇರಿರುವುದಕ್ಕೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿ ವಿಚಾರಣೆ ಮಾ.18ಕ್ಕೆ ಮುಂದೂಡಿತು.
ಅರ್ಜಿಯು ಮಾ.5ರಂದು ವಿಚಾರಣೆಗೆ ಬಂದಾಗ ರಾಜ್ಯ ಸರ್ಕಾರಿ ವಕೀಲರು, ನಿರ್ಬಂಧ ಆದೇಶ ಮಾರ್ಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಮಾರ್ಪಡಿಸಿದ ಆದೇಶ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದ್ದರು. ಅದನ್ನು ಒಪ್ಪಿದ್ದ ಹೈಕೋರ್ಟ್, ಆದೇಶ ಮಾರ್ಪಡಿಸಲು ಮೂರು ದಿನ ಕಾಲಾವಕಾಶ ನೀಡಿತ್ತು.
ಅರ್ಜಿ ಮಂಗಳವಾರ ಮತ್ತೆ ವಿಚಾರಣೆಗೆ ಬಂದಾಗ, ಮಾರ್ಪಡಿಸಿದ ಆದೇಶವನ್ನು ಸರ್ಕಾರಿ ವಕೀಲರು ಸಲ್ಲಿಸಲಿಲ್ಲ. ಆದರೆ, ಇದೇ ವಿಚಾರವಾಗಿ ಮಾ.8ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯ ನಡಾವಳಿ ಕುರಿತ ಮೆಮೋ ಸಲ್ಲಿಸಿದರು.
ಮೆಮೋ ಪರಿಶೀಲಿಸಿದ ಹೈಕೋರ್ಟ್, ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸಲು 25 ಪ್ರವೇಶ ಮಾರ್ಗಗಳು ಇವೆ. ಅವುಗಳಲ್ಲಿ 4 ಮಾರ್ಗಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಕ್ರಮ ಕೇಂದ್ರ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ. ಫೆ.18ರ ಆದೇಶ ಮಾರ್ಪಾಡು ಮಾಡುವ ಕುರಿತು ಮಾ.8ರ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕೇರಳದಿಂದ ದಕ್ಷಿಣ ಕನ್ನಡಕ್ಕೆ ನಾಲ್ಕು ಮಾರ್ಗ ಹೊರತುಪಡಿಸಿ, ಉಳಿದೆಲ್ಲಾ ಮಾರ್ಗ ಮುಚ್ಚಿರುವುದನ್ನು ಹಾಗೇ ಮುಂದುವರಿಸಲಾಗಿದೆ. ಯಾವ ಕಾನೂನಿನಡಿ ಈ ರೀತಿ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಶ್ನಿಸಿತು.
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೋನಾ ಅಬ್ಬರ. ಇಲ್ಲಿದೆ ಮಾ.9ರ ಅಂಕಿ-ಸಂಖ್ಯೆ ...
ಅರ್ಜಿದಾರರ ಪರ ವಕೀಲರು, ಕೇರಳದ ಇತರೆ ಜಿಲ್ಲೆಗಳಿಂದ ಕರ್ನಾಟಕ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೇವಲ ಕಾಸರಗೋಡಿನಿಂದ ಪ್ರವೇಶ ಮಾಡಲು ನಿರ್ಬಂಧ ಹೇರಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರದ ಈ ನಡೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಇನ್ನು ಫೆ.18ರ ಸರ್ಕಾರದ ಆದೇಶದಲ್ಲಿ ಕರ್ನಾಟಕ-ಕೇರಳ ಸಂಪರ್ಕಿಸುವ ಮಾರ್ಗಗಳನ್ನು ಮುಚ್ಚಲು ಎಲ್ಲಿಯೂ ಹೇಳಿಲ್ಲ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮ ಕೇವಲ ಒಂದು ಜಿಲ್ಲೆಗೆ ಸಂಬಂಧಪಟ್ಟಂತೆ ಇದೆ. ಆದ್ದರಿಂದ ಕಾಸರಗೋಡು ಜಿಲ್ಲೆಯಿಂದ ಮಾತ್ರ ಪ್ರವೇಶ ನಿರ್ಬಂಧ ಹೇರಿರುವುದಕ್ಕೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿ ವಿಚಾರಣೆ ಮಾ.18ಕ್ಕೆ ಮುಂದೂಡಿತು.