ನರಭಕ್ಷಕ ಹುಲಿ ಹತ್ಯೆ ಮಾಡಲು ಆಗದಿದ್ದರೆ ಹೇಳಿ, ನಾವೇ ಕೋವಿ ಹಿಡಿದು ಹುಲಿ ಹೊಡಿತೀವಿ. ಹೀಗಂತ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸರ್ಕಾರವನ್ನು ಆಗ್ರಹಿಸಿದ ಘಟನೆ ಸದನದಲ್ಲಿ ನಡೆಯಿತು.
ವಿಧಾನಸಭೆ (ಮಾ.10): ರಾಜ್ಯ ಸರ್ಕಾರದಿಂದ ನರಭಕ್ಷಕ ಹುಲಿ ಹತ್ಯೆ ಮಾಡಲು ಆಗದಿದ್ದರೆ ಹೇಳಿ, ನಾವೇ ಕೋವಿ ಹಿಡಿದು ಹುಲಿ ಹೊಡಿತೀವಿ...
- ಹೀಗಂತ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸರ್ಕಾರವನ್ನು ಆಗ್ರಹಿಸಿದ ಘಟನೆ ಸದನದಲ್ಲಿ ನಡೆಯಿತು.
undefined
ಶೂನ್ಯ ವೇಳೆಯಲ್ಲಿ ಕೆ.ಜಿ. ಬೋಪಯ್ಯ ಅವರು ಈ ವಿಷಯ ಪ್ರಸ್ತಾಪಿಸಿದರು. ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ವಿರಾಜಪೇಟೆಯಲ್ಲಿ ಈಗಾಗಲೇ ನಾಲ್ವರು ಕಾರ್ಮಿಕರನ್ನು ಬಲಿ ಪಡೆದಿದೆ. 25ಕ್ಕೂ ಹೆಚ್ಚು ಹಸು, ಜಾನುವಾರುಗಳು ಅಸು ನೀಗಿವೆ. ಕಾಫಿತೋಟದೊಳಗೆ ಹೋಗಲು ಜನ ಭಯಬೀಳುತ್ತಿದ್ದಾರೆ. ಸರ್ಕಾರವೇನೋ ಹುಲಿ ಕೊಲ್ಲಲು ಆದೇಶ ಮಾಡಿದೆ. ಆದರೆ, ಅಧಿಕಾರಿಗಳು ಆನೆ ಮೇಲೆ ಕೂತು ಕಾಡಿನೊಳಗೆ ಸಂಚರಿಸಿದರೆ ಹುಲಿ ಸಿಗುವುದಿಲ್ಲ. ಸರ್ಕಾರದ ಕೈಯಲ್ಲಿ ಆಗದಿದ್ದರೆ ಹುಲಿ ಕೊಲ್ಲಲು ನಮಗೆ ಅನುಮತಿ ಕೊಡಿ. ನಾವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಆನೆಗಳನ್ನು ಬಳಸಿ ಹುಲಿ ಕಾರ್ಯಾಚರಣೆ ನಡೆಸುವ ರೋಚಕ ಸಾಹಸವಿದು..!
ಅಪ್ಪಚ್ಚು ರಂಜನ್ ಮಾತನಾಡಿ, ಆದಷ್ಟುಬೇಗ ಹುಲಿ ಹತ್ಯೆಗೆ ಕ್ರಮ ಕೈಗೊಳ್ಳಿ. ಇಲ್ಲ ನಮಗೇ ಅನುಮತಿ ಕೊಡಿ ಖುದ್ದು ನಾನೇ ಕೋವಿ ಹಿಡಿದು ಕಾಡಿಗೆ ಇಳಿಯುತ್ತೇವೆ ಎಂದರು.
ಇದಕ್ಕೆ ಉತ್ತರ ನೀಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಕಾನೂನಲ್ಲಿ ಇದಕ್ಕೆ ಅವಕಾಶವಿಲ್ಲ. ಈಗಾಗಲೇ ನರಭಕ್ಷಕ ಹುಲಿ ಕಂಡಲ್ಲಿ ಗುಂಡು ಹಾರಿಸಲು ಅರಣ್ಯಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಕೆಲ ದಿನಗಳ ಹಿಂದೆ ಹೆಣ್ಣು ಹುಲಿ ಸಿಕ್ಕಿದೆ. ಆದರೆ, ದಾಳಿ ನಡೆಸುತ್ತಿರುವುದು ಗಂಡು ಹುಲಿ. ಅದನ್ನು ಹೊಡೆಯಲು ಕ್ರಮ ವಹಿಸಲಾಗುತ್ತಿದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.