Clock Tower Work: ಬಳ್ಳಾರಿ ನಿತ್ಯ ರಸ್ತೆ ಅಪಘಾತಗಳ ಸವಾರಿ!

By Kannadaprabha News  |  First Published Sep 4, 2022, 1:03 PM IST
  •  ಟವರ್‌ ಕ್ಲಾಕ್‌ ಕಾಮಗಾರಿ; ನಿತ್ಯ ರಸ್ತೆ ಅಪಘಾತಗಳ ಸವಾರಿ!
  • ಜಿಲ್ಲಾಡಳಿತ-ಜಿಲ್ಲಾ ಸಚಿವರ ಅವೈಜ್ಞಾನಿಕ ನಿರ್ಧಾರಕ್ಕೆ ಸಾರ್ವಜನಿಕರು ಆಕ್ರೋಶ
  • ರಸ್ತೆ ಅಗಲೀಕರಣ ಮುನ್ನವೇ ಟವರ್‌ಕ್ಲಾಕ್‌ ನಿರ್ಮಾಣಕ್ಕೆ ಸಾರ್ವಜನಿಕರ ಆಕ್ಷೇಪ.

ಕೆ.ಎಂ. ಮಂಜುನಾಥ್‌

 ಬಳ್ಳಾರಿ (ಸೆ.4) : ನಗರ ಸುಂದರೀಕರಣ ನೆಪದಲ್ಲಿ ಗಡಗಿ ಚೆನ್ನಪ್ಪ ವೃತ್ತದಲ್ಲಿ (ರಾಯಲ್‌ ಸರ್ಕಲ್‌) .7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 140 ಅಡಿ ಎತ್ತರದ ಟವರ್‌ ಕ್ಲಾಕ್‌ ಕಾಮಗಾರಿ ವೇಗ ಪಡೆದುಕೊಂಡಿದೆ. ಆದರೆ, ಈ ಭಾಗದಲ್ಲಿ ರಸ್ತೆ ಅಗಲೀಕರಣಗೊಳಿಸದೆ ಕೆಲಸ ಶುರುಗೊಳಿಸಿರುವ ಜಿಲ್ಲಾಡಳಿತದ ಅವೈಜ್ಞಾನಿಕ ಕ್ರಮದಿಂದಾಗಿ ವಿಪರೀತ ಸಂಚಾರ ದಟ್ಟಣೆಯುಂಟಾಗಿ ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಗಲೀಕರಣ ಮುನ್ನವೇ ಟವರ್‌ಕ್ಲಾಕ್‌ ಕಾಮಗಾರಿ ಶುರು ಮಾಡಿದ್ದು ಎಷ್ಟುಸರಿ ಎಂದು ಜನರು ಆಡಳಿತ ವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ.

Tap to resize

Latest Videos

undefined

ಬಳ್ಳಾರಿಯಲ್ಲಿ ಮಳೆ ಅವಾಂತರ: ನೀರಿನಲ್ಲಿ ತೇಲುತ್ತಿರೋ ಗಣೇಶ ಮೂರ್ತಿಗಳು

ಸುಗಮ ಸಂಚಾರಕ್ಕಿಲ್ಲ ಮಾರ್ಗ: ಬಳ್ಳಾರಿ(Ballari)ಯ ಪ್ರಮುಖ ವೃತ್ತವಾಗಿರುವ ಗಡಗಿಚೆನ್ನಪ್ಪ ವೃತ್ತ(Gadagi Channabasappa Circle) ನಗರದ ಎಲ್ಲ ಮಾರ್ಗಗಳ ಸಂಗಮದಂತಿದೆ. ಜಿಲ್ಲಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ರಸ್ತೆ, ವ್ಯಾಪಾರ ವಹಿವಾಟಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಬೆಂಗಳೂರು ರಸ್ತೆ, ಕೆಸಿ ರಸ್ತೆ, ಬ್ರಾಹ್ಮಣಬೀದಿ, ಡಾ.ರಾಜ್‌ಕುಮಾರ್‌ ರಸ್ತೆಗಳಿಗೆ ತೆರಳಲು ಗಡಗಿಚೆನ್ನಪ್ಪ ವೃತ್ತದ ಮೂಲಕವೇ ಹಾದು ಹೋಗಬೇಕು. ಹೀಗಾಗಿ ಈ ವೃತ್ತ ಸದಾ ದಟ್ಟಣೆಯಿಂದ ಕೂಡಿರುತ್ತದೆ. ಇದೀಗ ಟವರ್‌ಕ್ಲಾಕ್‌ ನಿರ್ಮಿಸುವ ಉದ್ದೇಶದಿಂದ ವೃತ್ತದ ಬಹುತೇಕ ಜಾಗದ ಸುತ್ತ ಬ್ಯಾರಿಕೇಡ್‌ ನಿರ್ಮಿಸಲಾಗಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಬಸ್‌, ಲಾರಿ ಸೇರಿದಂತೆ ಭಾರೀ ವಾಹನಗಳು ಈ ವೃತ್ತದಿಂದ ಸಾಗಲು ಹರಸಾಹಸ ಪಡಬೇಕಾಗಿದೆ. ವಾಹನಗಳ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರಿಂದಲೂ ಸಾಧ್ಯವಾಗದೆ ಕೈ ಚೆಲ್ಲಿ ಕುಳಿತಿರುವುದರಿಂದ ನಿತ್ಯ ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.

ಟವರ್‌ಕ್ಲಾಕ್‌(Towerclock) ನಿರ್ಮಿಸಲು ಮುಂದಾಗಿರುವಾಗ ಈ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಮೊದಲು ಆದ್ಯತೆ ನೀಡಬೇಕಿತ್ತು. ಸಚಿವರು ಟವರ್‌ಕ್ಲಾಕ್‌ ನಿರ್ಮಾಣದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಗೊಳಿಸುವುದಾಗಿ ಹೇಳಿದ್ದರು. ಆದರೆ, ಕಳೆದ ಹತ್ತಾರು ದಿನಗಳಿಂದ ಕಾಮಗಾರಿ ವೇಗ ಪಡೆದುಕೊಂಡಿದೆಯಾದರೂ ರಸ್ತೆ ಅಗಲೀಕರಣದ ಸುಳಿವು ಎಲ್ಲೂ ಕಂಡು ಬರುತ್ತಿಲ್ಲ.

ಹೇಳೋರಿಲ್ಲ...ಕೇಳೋರಿಲ್ಲ: ಗಡಗಿ ಚೆನ್ನಪ್ಪ ವೃತ್ತದಲ್ಲಿ 1946ರಲ್ಲಿ ಆಂಧ್ರ-ಕರ್ನಾಟಕ ಸೌಹಾರ್ದ ಸಂಕೇತವಾಗಿ ಗಡಿಯಾರ ಗೋಪುರ ನಿರ್ಮಿಸಲಾಯಿತು. 2008ರಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದರು. ಮತ್ತೆ ಅದೇ ಸ್ಥಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಟವರ್‌ಕ್ಲಾಕ್‌ ನಿರ್ಮಿಸಿತು. ಕಾಂಗ್ರೆಸ್‌ ಅವಧಿಯಲ್ಲಿ ನಿರ್ಮಿಸಿದ್ದ ಟವರ್‌ಕ್ಲಾಕ್‌ ತೆರವುಗೊಳಿಸಿ ಬಿಜೆಪಿಯವರು ಸುಮಾರು .7 ಕೋಟಿ ವೆಚ್ಚ ಮಾಡಿ 140 ಅಡಿ ಎತ್ತರದಲ್ಲಿ ಟವರ್‌ಕ್ಲಾಕ್‌ ನಿರ್ಮಾಣ ಮಾಡಲು ಹೊರಟಿದ್ದಾರೆ.

Ballari Accident: ಪೊಲೀಸರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?

ಗಡಗಿಚೆನ್ನಪ್ಪ ವೃತ್ತದಲ್ಲಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಇನ್ನು ಒಂದೂವರೆ ತಿಂಗಳು ಹಿಡಿಯುತ್ತದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪ್ಲಾನ್‌ ಮಾಡಿಕೊಂಡಿದ್ದೇವೆ. ಈಗಾಗಲೇ ಎಸ್ಪಿ ಜೊತೆ ಮಾತನಾಡಿದ್ದೇನೆ. ಅಪಘಾತ ತಪ್ಪಿಸಲು ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳುತ್ತೇವೆ.

ಪವನಕುಮಾರ ಮಾಲಪಾಟಿ, ಜಿಲ್ಲಾಧಿಕಾರಿಗಳು, ಬಳ್ಳಾರಿ.

ರಸ್ತೆ ತೆರವುಗೊಳಿಸದೆ ಟವರ್‌ಕ್ಲಾಕ್‌ ನಿರ್ಮಿಸಲು ಹೊರಟಿರುವುದು ಅತ್ಯಂತ ಅವೈಜ್ಞಾನಿಕ ಕ್ರಮ. ಈಗಾಗಲೇ ನಮ್ಮ ಪಕ್ಷದಿಂದ ಖಂಡಿಸಿದ್ದೇವೆ. ಕೂಡಲೇ ರಸ್ತೆ ತೆರವು ಕಾರ್ಯಾಚರಣೆಗೆ ಒತ್ತಾಯಿಸಿದ್ದೇವೆ. ಟವರ್‌ಕ್ಲಾಕ್‌ ನಿರ್ಮಿಸುವ ಮೊದಲು ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ಲಾನ್‌ ಮಾಡಿಕೊಳ್ಳಬೇಕಿತ್ತು.

ವಿ.ಬಿ.ಮಲ್ಲಪ್ಪ, ಜಿಲ್ಲಾಧ್ಯಕ್ಷರು, ಆಮ್‌ ಆದ್ಮಿ ಪಕ್ಷ, ಬಳ್ಳಾರಿ.

click me!