‘ಬಿಜೆಪಿ ಸರ್ಕಾರಕ್ಕೆ ಜನಾದೇಶ : ಸೋತ ವಿಶ್ವನಾಥ್‌ಗೂ ಪಕ್ಷದಿಂದ ಸಿಗುತ್ತೆ ಸ್ಥಾನ’

By Suvarna NewsFirst Published Dec 9, 2019, 12:04 PM IST
Highlights

ರಾಜ್ಯದಲ್ಲಿ ಬಿಜೆಪಿ ಸ್ಥಿರ ಸರ್ಕಾರಕ್ಕೆ ಜನರು ಮತ ನೀಡಿದ್ದಾರೆ. ಸೋತವರಿಗೂ ಇಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿದೆ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ. 

ಚಿಕ್ಕಮಗಳೂರು (ಡಿ.09): ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿದೆ. ಕಾಂಗ್ರೆಸ್-ಜೆಡಿಎಸ್ ಕಿಚುಡಿ ಸರ್ಕಾರ ಬೇಡ ಎಂದು ಜನರು ತಮ್ಮ ಆದೇಶ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದರು. ಕೆಲವರು ನಾನೇ ಮುಖ್ಯಮಂತ್ರಿ ಎಂದು ಕೋಟು ಸೂಟು ಹೊಲಿಸಿಕೊಳ್ಳಲು ತಯಾರಾಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ. 

ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮತದಾರರು ತಪರಾಕಿ ಕೊಟ್ಟಿದ್ದಾರೆ. ಸ್ಥಿರ ಸರ್ಕಾರಕ್ಕೆ ಮತ ಹಾಕಿದ್ದಾರೆ. ಜನರ ದೃಷ್ಟಿಯಲ್ಲಿ ಅನರ್ಹ ಶಾಸಕರು ಈಗ ಅರ್ಹರಾಗಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ನವರಿಗೆ ಅನರ್ಹರು ಎಂದು ಫಲಿತಾಂಶ ನೀಡಿದ್ದಾರೆ ಎಂದರು. 

ಬೈ ಎಲೆಕ್ಷನ್ ರಿಸಲ್ಟ್: ಹಾರಿದ ಕಾಗೆ, ಮತ್ತೆ 'ಶ್ರೀಮಂತ'

ಈ ಫಲಿತಾಂಶ  ನೋಡಿದರೆ ಸಿದ್ದರಾಮಯ್ಯ ಹುಲಿಯಾ ಅಲ್ಲ ಇಲಿಯಾ ಎಂದು ಎನಿಸುತ್ತದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸ್ಥಿರವಾಗಿರಬೇಕು ಎಂದು ಜನರು ನೀಡಿದ ಜನಾದೇಶ ಇದು ಎಂದರು. 

ಇನ್ನು ಖಾತೆ ಹಂಚಿಕೆ ಬಗ್ಗೆಯೂ ಪ್ರಸ್ತಾಪಿಸಿದ ಸಿ.ಟಿ.ರವಿ  ಖಾತೆ ಹಂಚಿಕೆಯು ಮುಖ್ಯಮಂತ್ರಿಗಳ ಪರಮಾಧಿಕಾರಿ. ಅವರಿಗೆ  ಹೆಚ್ಚಿನ ಅನುಭವ ಇದ್ದು, ಸವಾಲನನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಸೋತ ಅಭ್ಯರ್ಥಿಗಳಿಗೂ ಕೆಲಸ ನೀಡುತ್ತೇವೆ. ಹಿರಿಯ ರಾಜಕಾರಣಿ ವಿಶ್ವನಾಥ್ ಸೋಲು ಕಂಡಿದ್ದು ಅವರನ್ನು ಸೂಕ್ತ ರೀತಿಯಲ್ಲಿಯೇ ನಡೆಸಿಕೊಳ್ಳಲಾಗುತ್ತದೆ ಎಂದರು. 

click me!