Bengaluru: ರಸ್ತೆ ದುರಸ್ತಿಗೂ ಮುನ್ನ ಚರಂಡಿ ಸ್ವಚ್ಛಗೊಳಿಸಿ: ತುಷಾರ್‌ ಗಿರಿನಾಥ್‌

By Kannadaprabha News  |  First Published Oct 21, 2022, 2:36 PM IST

ಡಾಂಬರೀಕರಣದ ವೇಳೆ ರಸ್ತೆ ಇಬ್ಬದಿಯ ಚರಂಡಿಯಲ್ಲಿ ಹೂಳು ತೆರವುಗೊಳಿಸಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. 


ಬೆಂಗಳೂರು (ಅ.21): ಡಾಂಬರೀಕರಣದ ವೇಳೆ ರಸ್ತೆ ಇಬ್ಬದಿಯ ಚರಂಡಿಯಲ್ಲಿ ಹೂಳು ತೆರವುಗೊಳಿಸಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. ರಾಜರಾಜೇಶ್ವರಿ ನಗರ ವಲಯದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನೀರುಗಾಲುವೆಗಳಲ್ಲಿ ಹೂಳು ತುಂಬಿಕೊಂಡು ರಸ್ತೆಯಲ್ಲಿ ನೀರು ಹರಿಯುವುದರಿಂದ ರಸ್ತೆ ಬೇಗ ಹಾಳಾಗಲಿದೆ. ಹಾಗಾಗಿ, ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವುದಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆ ದುರಸ್ತಿ ಕಾಮಗಾರಿ ಯೋಜನೆ ರೂಪಿಸುವಾಗ ಚರಂಡಿ ಸ್ವಚ್ಛಗೊಳಿಸುವುದನ್ನು ಸೇರ್ಪಡೆ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಅಮಾನತು ಎಚ್ಚರಿಕೆ: ಪ್ರತಿ ದಿನ ಒಂದೊಂದು ವಲಯಕ್ಕೆ ಭೇಟಿ ನೀಡಿ ಕೆಲವು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಆದರೆ, ಪಶ್ಚಿಮ ವಲಯದ ಅಧಿಕಾರಿಗಳು ನೀಡಿದ ನಿರ್ದೇಶವನ್ನು ಪಾಲನೆ ಮಾಡಿಲ್ಲ. ಅವರಿಗೆ ಬುಧವಾರ ಸಂಜೆ ಒಳಗಾಗಿ ವರದಿ ನೀಡಬೇಕು. ಒಂದು ವೇಳೆ ನೀಡದಿದ್ದರೆ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

Tap to resize

Latest Videos

Bengaluru: ಫುಟ್‌ಪಾತ್‌ನಲ್ಲಿ ನಿರ್ಮಿಸಿದ್ದ ಶೆಡ್‌ ತೆರವುಗೊಳಿಸಿದ ಮುಖ್ಯ ಆಯುಕ್ತ ತುಷಾರ್‌

ಶೆಡ್‌ ತೆರವು: ಬಿಇಎಂಎಲ್‌ ಕಾಂಪ್ಲೆಕ್ಸ್‌ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪಾದಚಾರಿ ಮಾರ್ಗದ ಮೇಲೆ ನಿರ್ಮಿಸಿದ್ದ ಎರಡು ತಾತ್ಕಾಲಿಕ ಶೆಡನ್ನು ಮುಖ್ಯ ಆಯುಕ್ತರು ಮುಂದೆ ನಿಂತು ಜೆಸಿಬಿ ಮೂಲಕ ತೆರವುಗೊಳಿಸಿದರು. ಜತೆಗೆ ಸ್ವಚ್ಛವಾಗಿಡದ ಖಾಲಿ ನಿವೇಶನಗಳನ್ನು ಪತ್ತೆ ಮಾಡಿ ಅದನ್ನು ಬಿಬಿಎಂಪಿಯಿಂದ ಸ್ವಚ್ಛಗೊಳಿಸಬೇಕು, ನಿವೇಶನ ಮಾಲಿಕರಿಗೆ ಅದಕ್ಕೆ ತಗಲುವ ವೆಚ್ಚದ ಜತೆಗೆ ದಂಡ ವಿಧಿಸುವಂತೆ ಸೂಚಿಸಿದರು. ಈ ವೇಳೆ ವಲಯ ಆಯುಕ್ತ ಡಾ. ರಾಮ್‌ಪ್ರಸಾತ್‌ ಮನೋಹರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್‌, ವಲಯ ಜಂಟಿ ಆಯುಕ್ತ ನಾಗರಾಜ್‌, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌, ವಲಯ ಮುಖ್ಯ ಎಂಜಿನಿಯರ್‌ ವಿಜಯ್‌ಕುಮಾರ್‌ ಇದ್ದರು.

Bengaluru: ಡಾ.ರಾಜ್‌ ರಸ್ತೆ ದುರಸ್ತಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಸೂಚನೆ

4 ಕಿ.ಮೀ ಹೆಜ್ಜೆ: ರಾಜರಾಜೇಶ್ವರಿ ನಗರ ವಲಯದ ಜಯಣ್ಣ ವೃತ್ತ, ನಿಮಿಷಾಂಬದೇವಿ ವೃತ್ತ, ಬಸವೇಶ್ವರ ವೃತ್ತದವರೆಗೆ ಗುರುವಾರ ಬಿಬಿಎಂಪಿ ಮುಖ್ಯಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ಕಟ್ಟಡ ನಿರ್ಮಾಣ ಸಾಮಗ್ರಿ, ಮರದ ಕೊಂಬೆ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದರು. ಬೀದಿ ದೀಪಗಳಿಲ್ಲದೆ ಕಡೆ ಕೂಡಲೇ ಅಳವಡಿಸಿ, ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ರಸ್ತೆ ಬದಿಯಲ್ಲಿ ಶೇಖರಣೆಯಾದ ಮಣ್ಣು-ಕಲ್ಲು ತೆರವುಗೊಳಿಸಿ. ರಸ್ತೆ ಮೇಲೆ ಬೀಳುವ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿ. ರಸ್ತೆ ಗುಂಡಿ ಮುಚ್ಚುವಂತೆ ತುಷಾರ್‌ ಗಿರಿನಾಥ್‌ ನಿರ್ದೇಶಿಸಿದರು.

click me!