*ಯಲಹಂಕ ಸಮೀಪ ನಗರದಲ್ಲಿಯೇ ಅತೀ ದೊಡ್ಡ ಪಾರ್ಕ್
*ತೋಟಗಾರಿಕೆ ಇಲಾಖೆಯ ಯೋಜನೆ ಸಿದ್ಧ: ಪರಿಸರ ಪ್ರೇಮಿಗಳ ವಿರೋಧ
*430 ಎಕರೆ ಪಾರ್ಕ್ಗೆ 75 ಎಕರೆ ಅರಣ್ಯ ಹಸ್ತಾಂತರಿಸಲು ಸರ್ಕಾರಕ್ಕೆ ಪ್ರಸ್ತಾವನೆ
ಬೆಂಗಳೂರು (ಜ. 30): ನೈಸರ್ಗಿಕ ಅರಣ್ಯ ಪ್ರದೇಶಗಳ (Reserve Forest) ಪೈಕಿ ಅತ್ಯಂತ ಪ್ರಮುಖವೆನಿಸಿದ ಯಲಹಂಕ ಸಮೀಪದ ಜಾರಕಬಂಡೆ ಕಾವಲು ಮೀಸಲು (Jarakabande Kaval) ಅರಣ್ಯವನ್ನು ಹಾಳುಗೆಡವಿ, ಜೀವ ಸಂಪತ್ತನ್ನು ಬಲಿಕೊಟ್ಟು ಕಾಂಕ್ರಿಟ್ ನಿರ್ಮಾಣಗಳನ್ನು ಹೊಂದಿರುವ ಉದ್ಯಾನವನ ನಿರ್ಮಾಣಕ್ಕೆ ಮತ್ತೆ ಪ್ರಯತ್ನಗಳು ಸದ್ದಿಲ್ಲದೆ ಆರಂಭಗೊಂಡಿವೆ. ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೆ ಬೆಂಗಳೂರಿನಲ್ಲಿ ಉಳಿದಿರುವ ಕೆಲವೇ ನೈಸರ್ಗಿಕ ಅರಣ್ಯಗಳನ್ನು ಬಲಿ ಕೊಡುವ ಕೆಲಸ ಶುರುವಾಗಿದೆ.
ಜಾರಕಬಂಡೆ ಕಾವಲು ಬಳಿ ಸುಮಾರು 430 ಎಕರೆ ವಿಸ್ತಾರದ ಉದ್ಯಾನವನ್ನು ನಿರ್ಮಾಣ ಮಾಡುವ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ 75 ಎಕರೆ ಭೂಮಿಯನ್ನು ಮೀಸಲು ಅರಣ್ಯದಿಂದ, ಇನ್ನುಳಿದ 355 ಎಕರೆ ಭೂಮಿಯನ್ನು ಕಂದಾಯ ಇಲಾಖೆಯಿಂದ ಹಸ್ತಾಂತರಿಸುವಂತೆ ತೋಟಗಾರಿಕೆ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸದ್ದುಗದ್ದಲವಿಲ್ಲದೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ಈ ಸಂಬಂಧದ ಕಡತವನ್ನು ಅರಣ್ಯ ಮತ್ತು ಕಂದಾಯ ಇಲಾಖೆಗೆ ಈಗಾಗಲೇ ರವಾನಿಸಿದ್ದು, ಈ ಇಲಾಖೆಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಯಲಹಂಕ ಬಳಿಯಿರುವ ಜಾರಕಬಂಡೆ ಕಾವಲ್‌ನಲ್ಲಿ ಉದ್ಯಾನವನ ನಿರ್ಮಾಣ ಮಾಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆಯಲಿದೆ. ಈ ಪ್ರದೇಶ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಆಂಧ್ರಪ್ರದೇಶದ ಗಡಿಗೆ ಹತ್ತಿರದಲ್ಲಿದೆ.
ಇದನ್ನೂ ಓದಿ: Karnataka sandalwood policy ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಹೊಸ ನೀತಿ
ಈ ಭಾಗದಲ್ಲಿ ನಗರದಲ್ಲಿಯೇ ದೊಡ್ಡ ಉದ್ಯಾನವ ನಿರ್ಮಿಸಿದಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಬದಲಾಗಲಿದೆ. ಜೊತೆಗೆ, ಪ್ರವಾಸಿಗರನ್ನು ಆಕರ್ಷಣೀಯ ಕೇಂದ್ರವಾಗಲಿದ್ದು, ಸರ್ಕಾರಕ್ಕೂ ದೊಡ್ಡ ಮೈಲುಗಲ್ಲಿನ ಸಾಧನೆ ಮಾಡಿದಂತಾಗಲಿದೆ ಎಂಬುದು ತೋಟಗಾರಿಕೆ ಇಲಾಖೆಯ ಸಬೂಬು.
ಭೂಮಿ ಸ್ವಾಧೀನಕ್ಕೆ ಪಡೆದ ಬಳಿಕ ಉದ್ಯಾನವನಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ವಾಸ್ತುಶಿಲ್ಪಿಗಳ ನೆರವಿನಲ್ಲಿ ಯೋಜನೆ ಸಿದ್ಧಪಡಿಸಲಾಗುವುದು. ಬಳಿಕ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂ ಸ್ವಾಧೀನಕ್ಕೆ ರೂ. 800 ಕೋಟಿ: ಉದ್ಯಾನವನ ನಿರ್ಮಾಣಕ್ಕಾಗಿ ಒಟ್ಟು 430 ಎಕರೆ ಗುರುತಿಸಲಾಗಿದೆ. ಇದರಲ್ಲಿ 75 ಎಕರೆ ಅರಣ್ಯ ಭೂಮಿಯಾಗಿದೆ. ಇದನ್ನು ಹೊರತು ಪಡಿಸಿದರೆ ಇನ್ನುಳಿದದ್ದು, ಕಂದಾಯ ಮತ್ತು ಹಿಡುವಳಿ ಭೂಮಿಯಾಗಿದೆ. ಇದನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ರೈತರು ಮತ್ತು ಭೂಮಾಲಿಕರಿಗೆ ನೀಡಲು ಅಂದಾಜು ರೂ.800 ಕೋಟಿ ಅಗತ್ಯವಿದೆ ಎಂದು ಸರ್ಕಾರವನ್ನು ಕೋರಲಾಗಿದೆ. ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ರವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mekedatu ಯೋಜನೆಯಿಂದ ಅರಣ್ಯ ನಾಶ: ಡ್ಯಾಮ್‌ಗೆ ಮೇಧಾ ಪಾಟ್ಕರ್ ವಿರೋಧ
ನಗರಕ್ಕೆ ಸಮೀಪದ ಏಕೈಕ ಲಂಗ್ ಸ್ಪೇಸ್: ಉದ್ಯಾನ ನಗರಿಯಲ್ಲಿ ಅಳಿದುಳಿರುವ ಕೆಲವೇ ಮೀಸಲು ಅರಣ್ಯಗಳಲ್ಲಿ ಜಾರಕಬಂಡೆ ಅರಣ್ಯ ಪ್ರದೇಶವೂ ಮಹತ್ವದ್ದು. ಅಷ್ಟೇ ಅಲ್ಲ. ಜಾರಕಬಂಡೆ ಬೆಂಗಳೂರು ಉತ್ತರದಲ್ಲಿರುವ ಮತ್ತು ನಗರಕ್ಕೆ ಅತ್ಯಂತ ಹತ್ತಿರದಲ್ಲಿರುವ ಏಕೈಕ ಲಂಗ್ ಸ್ಪೇಸ್ ಆಗಿದೆ. 1896ರಲ್ಲಿ ಬ್ರಿಟೀಷ್ ಸರ್ಕಾರ ಮೀಸಲು ಅರಣ್ಯವೆಂದು ಘೋಷಣೆ ಮಾಡಿತ್ತು. 1900ರಲ್ಲಿ ಮೈಸೂರು ಸಂಸ್ಥಾನ ಮತ್ತು 1963ರಲ್ಲಿ ರಾಜ್ಯ ಸರ್ಕಾರವೂ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದೆ. ಈ ಅರಣ್ಯದಲ್ಲಿ 56 ಜಾತಿಯ (ಹಲಸು, ಗೂಸ್ ಬೆರೆ, ನೀಲಗಿರಿ, ತೇಗದ ಮರ ಸೆರಿ) 50 ವರ್ಷಕ್ಕೂ ಹಳೆಯದಾದ ಬೃಹತ್ ಮರಗಳಿವೆ.
120ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, ಹಲವು ಜಾತಿಯ ಹಾವುಗಳು ಮತ್ತು ಕೀಟಗಳು ಇಲ್ಲಿ ನೆಲೆಸಿವೆ. ಜೊತೆಗೆ, ಕಾಡು ಹಂದಿಗಳು, ನರಿಗಳು, ಮೊಲಗಳು ಹಾಗೂ ಸುಮಾರು 800ಕ್ಕೂ ಹೆಚ್ಚು ನವಿಲುಗಳಿವೆ. ಈ ಎಲ್ಲ ಪ್ರಾಣಿ, ಪಕ್ಷಿಗಳು ಪರಿಸರ ಸಮತೊಲನವನ್ನು ಕಾಪಾಡುತ್ತಿವೆ. ಅಲ್ಲದೆ, ಪ್ರಸ್ತುತ ಸಾರ್ವಜನಿಕರಿಗೆ ವಾಯುವಿಹಾರಕ್ಕೂ ಅವಕಾಶ ನೀಡಲಾಗಿದೆ. ಹೀಗಿರುವಾಗ ಕಾಡು ಕಡಿದು ಉದ್ಯಾನ ನಿರ್ಮಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಪರಿಸರ ಪ್ರಿಯರ ಆಗ್ರಹವಾಗಿದೆ.
ಈಗಾಗಲೇ ಸಭೆ ನಡೆಸಲಾಗಿದೆ: ಜಾರಕಬಂಡೆ ಕಾವಲ್‌ನಲ್ಲಿ ಉದ್ಯಾನ ನಿರ್ಮಾಣ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ. ಮೀಸಲು ಅರಣ್ಯದಿಂದ ಪಡೆದುಕೊಳ್ಳುವ ಭೂಮಿಗೆ ಬದಲಾಗಿ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದ ಆನೆ ಕಾರಿಡಾರ್ ಬಳಿಯ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಗುರುತಿಸಲಾಗಿದೆ. ಈ ಭಾಗದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದ್ದಾರೆ.
ರಮೇಶ್ ಬನ್ನಿಕುಪ್ಪೆ, ಕನ್ನಡಪ್ರಭ ವಾರ್ತೆ