ರಾಮಸಾಗರಹಟ್ಟಿಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಭೇಟಿ| ನೂತನ ಪೈಪ್‌ಲೈನ್ ನಿರ್ಮಿಸಿ, ಅಗತ್ಯ ಅನುದಾನ ನೀಡುವೆ ಎಂದ ಡಿಸಿ| ರಾಮಸಾಗರಹಟ್ಟಿಯ ಸುತ್ತಲಿನ ಹಳ್ಳಿಗಳಿಗೆ ವ್ಯಾಪ್ತಿಸಿದ ಕಾಲರಾ|ರಾಮಸಾಗರಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 5 ದಿನಗಳಲ್ಲಿ 170ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡ ವಾಂತಿ-ಭೇದಿ|
ಕೂಡ್ಲಿಗಿ[ಡಿ.04]: ತಾಲೂಕಿನ ರಾಮಸಾಗರಹಟ್ಟಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಂಗಳವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ ಕಾಲರಾ ನಿಯಂತ್ರಣಕ್ಕೆ ತರಬೇಕೆಂದು ವೈದ್ಯರಿಗೆ ಸೂಚಿಸಿದ್ದಾರೆ.
ಕಲುಷಿತ ನೀರಿನಿಂದ ಗ್ರಾಮದ ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಕೂಡಲೇ ಗ್ರಾಮಕ್ಕೆ ಕುಡಿಯುವ ನೀರಿನ ನೂತನ ಪೈಪ್‌ಲೈನ್ ನಿರ್ಮಿಸಿ. ಅಗತ್ಯ ಅನುದಾನ ನೀಡುವುದಾಗಿ ಜಿಲ್ಲಾಧಿಕಾರಿಸ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಲೂಕು ಎಇಇಗೆ ತ್ವರಿತ ಕೆಲಸ ಮಾಡಿಸಬೇಕು ಎಂದು ಎಚ್ಚರಿಕೆ ನೀಡಿದರು. ಪಿಡಿಒಗೆ ಗ್ರಾಮದ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ರೋಗಿಗಳ ಸಂಖ್ಯೆ ಹೆಚ್ಚಳ:
ರಾಮಸಾಗರಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 5 ದಿನಗಳಲ್ಲಿ 170ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ರಾಮಸಾಗರಹಟ್ಟಿಯ ಸುತ್ತಲಿನ ಗ್ರಾಮಗಳಿಗೆ ಕಾಲರಾ ವ್ಯಾಪಿಸಿದ್ದು, ವೈದ್ಯರಿಗೆ ಇದು ಸವಾಲಾಗಿ ಪರಿಣಮಿಸಿದೆ.
ಇಲಾಖೆಯಿಂದ ರೋಗಿಗಳಿಗೆ ಸಮರ್ಪಕವಾಗಿ 5 ದಿನಗಳಿಂದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ವ್ಯಾಪ್ತಿಯಲ್ಲಿರುವ ಈ ಮೊದಲು ರಾಮಸಾಗರಹಟ್ಟಿ 97 ಜನರಿಗೆ ಕಾಣಿಸಿಕೊಂಡ ನಂತರ ಭಾನುವಾರ 30, ಸೋಮವಾರ 27, ಮಂಗಳವಾರ 16 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಸದ್ಯ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮಸಾಗರಹಟ್ಟಿ ನಂತರ ಸುತ್ತಲಿನ ಗ್ರಾಮಗಳಿಗೆ ವ್ಯಾಪಿಸಿದ್ದು, ಎಕ್ಕೆಗೊಂದಿ ಗ್ರಾಮದಲ್ಲಿ 5, ದಿಬ್ಬದಹಳ್ಳಿ 4, ತಿಮ್ಮನಹಳ್ಳಿ 6, ಯರ್ರಗುಂಡಲಹಟ್ಟಿಯಲ್ಲಿ 6 ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡು ಸದ್ಯ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಮಾಹಿತಿ ನೀಡಿದ್ದಾರೆ.
ಕಾಲರಾ ನಿಯಂತ್ರಣ ತಂಡ ಭೇಟಿ:
ಗ್ರಾಮಕ್ಕೆ ಜಿಲ್ಲಾ ಕಾಲರಾ ನಿಯಂತ್ರಣ ತಂಡ ಮಂಗಳವಾರ ಭೇಟಿ ನೀಡಿ ಸ್ವಚ್ಛತೆ ಹಾಗೂ ಕಾಯಿಲೆ ನಿಯಂತ್ರಣ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯ ಮಾಡಿತು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖ ನಾಯ್ಕ, ಕಂದಾಯ ನಿರೀಕ್ಷಕ ಪಾಂಡುರಂಗ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ಪಾಲಯ್ಯ, ಉಪಾಧ್ಯಕ್ಷ ಗಂಟೆ ಬಸವರಾಜ್, ಪಿಡಿಒ ಗೋವಿಂದಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.