* ರಾಜ್ಯಾದ್ಯಂತ ಸದ್ದು ಮಾಡ್ತಿರೋ ವ್ಯಾಪಾರದಲ್ಲಿ ಧರ್ಮ ದಂಗಲ್
* ಕೋಟೆನಾಡಿಗೂ ಕಾಲಿಟ್ಟ ಧರ್ಮ ದಂಗಲ್
* ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಏ,12): ರಾಜ್ಯಾದ್ಯಂತ ಸದ್ದು ಮಾಡ್ತಿರೋ ವ್ಯಾಪಾರದಲ್ಲಿ ಧರ್ಮ ದಂಗಲ್ ಕೊನೆಗೂ ಕೋಟೆನಾಡಿಗೆ ಕಾಲಿಟ್ಟಿದೆ. ಹಿಂದೂಪರ ಸಂಘಟನೆಗಳು ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ತೆರಳಿ ಅನ್ಯ ಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡ್ತಿರೋದು, ಅನ್ಯ ಕೋಮಿನ ವ್ಯಾಪಾರಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ....,
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸುಕ್ಷೇತ್ರ ವದ್ದೀಕೆರೆ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆಯು ಏಪ್ರಿಲ್ 14 ರಂದು ಆರಂಭವಾಗಲಿದ್ದೂ, ಏಪ್ರಿಲ್ 18 ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಜಾತ್ರೆ ವೇಳೆ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ಇಲ್ಲ, ಕಠಿಣ ಕಾನೂನು ಪಾಲಿಸಲು ಮುಂದಾದ ಮುಜರಾಯಿ ಇಲಾಖೆ
ಜಾತ್ರೆಗೆ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ದೇಶದ ವಿವಿದೆಡೆಗಳಿಂದ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಆದ್ರೆ ಇದೀಗ ಈ ಜಾತ್ರೆ ಮೇಲೂ ಧರ್ಮ ದಂಗಲ್ ಕಾರ್ಮೋಡ ಕವಿದಿದೆ.
ಚಿತ್ರದುರ್ಗ ಜಿಲ್ಲೆಯ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ರುದ್ರೇಶ್ ನೇತೃತ್ವದಲ್ಲಿ " ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿಗಳ ಅಧಿನಿಯಮ 1997 ರ ನಿಯಮಗಳು 2020ರ ಸಂಖ್ಯೆ 33ರ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ವ್ಯಾಪಾರದ ಗುತ್ತಿಗೆ ನೀಡತಕ್ಕದ್ದಲ್ಲ ಎಂದು ಅಧಿನಿಯಮವಿದೆ.
ಈ ನಿಯಮದ ಪ್ರಕಾರ ತಾಲ್ಲೂಕು ದಂಡಾಧಿಕಾರಿಗಳು ಈ ಆದೇಶವನ್ನು ಗಮನಿಸಿ ಜಾತ್ರಾ ಮಹೋತ್ಸವದಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ಅವಕಾಶ ಕಲ್ಪಿಸಬಾರದು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಅನ್ಯಕೋಮಿನವರಿಗೆ ಭಾಗವಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ನಿಯಮವಿದೆ. ಈ ಪ್ರಕಾರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಜಾತ್ರೆಗಳು ಹಾಗು ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಬೇಕೆಂದು ಹಿಂದು ಪರ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಇನ್ನು ಭವರೋಗ ವೈದ್ಯ ಎನಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿಯು ವೈದ್ಯಕೀಯ ಲೋಕಕ್ಕೆ ಸವಾಲೆನಿಸಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಸರ್ವಧರ್ಮಿಯರ ಸಮಾಗಮ ಈ ಜಾತ್ರೆಯಲ್ಲಾಗುತ್ತದೆ. ಹೀಗಾಗಿ ಹಿಂದು ಪರ ಸಂಘಟನೆಗಳು ಈ ರೀತಿ ದೇವರ ಜಾತ್ರೆಗಳಲ್ಲೂ ವಿಷಬೀಜ ಬಿತ್ತುವುದು ಸರಿಯಲ್ಲ. ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳು ಸಹ ಹೀಗೆ ಧರ್ಮಧರ್ಮ ಗಳ ನಡುವೆ ಪ್ರಚೋದನಕಾರಿ ಸ್ಥಿತಿ ನಿರ್ಮಾಣ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು, ದೇವಸ್ಥಾನಗಳಲ್ಲಿ ಸಾಮರಸ್ಯ ಭಾವ ಉಳಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಒಟ್ಟಾರೆ ಜಿಲ್ಲೆಯ ಮುಜರಾಯಿ ಇಲಾಖೆ ದೇಗುಲಗಳ ಜಾತ್ರೆ ಮೇಲೂ ಧರ್ಮ ದಂಗಲ್ ಪ್ರಭಾ ಬೀರಿದೆ. ಹೀಗಾಗಿ ಭಕ್ತರು ಮತ್ತು ಅನ್ಯ ಧರ್ಮದ ವ್ಯಾಪಾರಿಗಳಲ್ಲಿ ಬಾರಿ ಆತಂಕ ಶುರುವಾಗಿದೆ. ಈ ಬಗ್ಹೆ ಚಿತ್ರದುರ್ಗ ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.