ಚಿತ್ರದುರ್ಗದಲ್ಲಿ ಹೆಚ್ಚಾದ ಕೋಳಿ ಫಾರಂ, ವಾಸನೆ ಹುಡುಕಿ ಬಂದು ದಾಳಿ ಮಾಡುತ್ತಿದೆ ಚಿರತೆ

By Suvarna News  |  First Published Feb 6, 2024, 7:09 PM IST

ಕಳೆದೊಂದು ತಿಂಗಳಿಂದ ಕೋಟೆನಾಡಿನ ಗ್ರಾಮೀಣ ಭಾಗದಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದೆ. ಕಂಡ‌ ಕಂಡಲ್ಲಿ ಜಾನುವಾರುಗಳು ಹಾಗೂ ಮಾನವರ ಮೇಲೆ ದಾಳಿ ಮಾಡ್ತಿರೋ ಚಿರತೆಗಳ ಕಂಡು ಜನರು ಭಯ ಭೀತರಾಗಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.6): ಕಳೆದೊಂದು ತಿಂಗಳಿಂದ ಕೋಟೆನಾಡಿನ ಗ್ರಾಮೀಣ ಭಾಗದಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದೆ. ಕಂಡ‌ ಕಂಡಲ್ಲಿ ಜಾನುವಾರುಗಳು ಹಾಗೂ ಮಾನವರ ಮೇಲೆ ದಾಳಿ ಮಾಡ್ತಿರೋ ಚಿರತೆಗಳ ಕಂಡು ಜನರು ಭಯ ಭೀತರಾಗಿದ್ದಾರೆ. 

Tap to resize

Latest Videos

undefined

ಚಿತ್ರದುರ್ಗ ತಾಲ್ಲೂಕಿನ ಅಲಘಟ್ಟ ಗ್ರಾಮದ ಬಳಿ ನಿನ್ನೆ ತಾನೇ ಚಿರತೆಯೊಂದು ಜಾನುವಾರುಗಳ ಮೇಲೆ ದಾಳಿ ಮಾಡಿ ಪರಾರಿ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಇದೊಂದು ಉದಾಹರಣೆ ಅಷ್ಟೆ, ಕಳೆದೊಂದು ತಿಂಗಳಿಂದಲೂ ಕೋಟೆನಾಡಿನ ಹಲವೆಡೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕಳೆದ ವಾರವಷ್ಟೇ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ‌ ಕೆರೆ ಗ್ರಾಮದಲ್ಲಿ ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿತ್ತು. ಚಿರತೆ ಪ್ರತ್ಯಕ್ಷವಾದ ಮರುಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕ್ಯಾರೇ ಅಂತಿಲ್ಲ. ಎಲ್ಲಾ ಅಧಿಕಾರಿಗಳ ನಿರ್ಲಕ್ಷ್ಯ ತೋರುವ ಪರಿಣಾಮ ಇಂದು ಚಿರತೆಗಳು ಗ್ರಾಮಗಳ ಬಳಿ ಬರ್ತಿವೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಚಿರತೆಗಳ ಹಾವಳಿಗೆ ಮುಖ್ಯ ಕಾರಣ ಏನು ಎನ್ನುವುದನ್ನು ಸ್ವತಃ ಅರಣ್ಯ ಇಲಾಖೆ ಅಧಿಕಾರಿಯನ್ನೇ ವಿಚಾರಿಸಿದ್ರೆ, ಇತ್ತೀಚೆಗೆ ಚಿರತೆ ಸಂತತಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಜನರು ಕೋಳಿ ಫಾರಂ ಮಾಡುವುದರಿಂದ ಸತ್ತ ಕೋಳಿಗಳನ್ನು ಅಲ್ಲಿಯೇ ಅಕ್ಕ ಪಕ್ಕದಲ್ಲಿ ಬಿಸಾಡುವುದಕ್ಕೆ ಚಿರತೆಗಳು ವಾಸನೆ ಹಿಡಿದುಕೊಂಡು ಬಂದು ಭೇಟೆ ಆಡ್ತಿವೆ. ಜೊತೆಗೆ ಬೇಸಿಗೆ ಶುರುವಾಗಿರುವ ಕಾರಣ, ಕಾಡಿನಲ್ಲಿ ನೀರು ಸಿಗದ ಕಾರಣವೂ ನಾಡಿನತ್ತ ಹೆಜ್ಜೆ ಹಾಕ್ತಿವೆ. ಎಲ್ಲೆಲ್ಲಿ ಚಿರತೆಗಳ ಪ್ರತ್ಯಕ್ಷ ಮಾಹಿತಿ ತಿಳಿದು ಬಂದಿದೆ. ಕೂಡಲೇ ಅಧಿಕಾರಿಗಳನ್ನ ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಗಮನಕ್ಕೆ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.

ಒಟ್ಟಾರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಜಮೀನುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಂತದ್ರಲ್ಲಿ ಚಿರತೆಗಳ ಹಾವಳಿ ಜನರಲ್ಲಿ ಭಯ ಹುಟ್ಟಿಸಿದ್ದು, ಕೂಡಲೇ ಅಧಿಕಾರಿಗಳು ಚಿರತೆಗಳ ಹಾವಳಿ ಕಡಿಮೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

click me!