
ಚಿತ್ರದುರ್ಗ (ಜು.27): ಮಾರಣಾಂತಿಕ ಕಾಯಿಲೆ ಪೀಡಿತನೆಂಬ ಶಂಕೆಯ ಹಿನ್ನೆಲೆಯಲ್ಲಿ, ತನ್ನ ಅಕ್ಕ ಮತ್ತು ಭಾವನಿಂದಲೇ ಯುವಕನೊಬ್ಬ ಹತ್ಯೆಗೊಳಗಾಗಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ದುಮ್ಮಿ ಗ್ರಾಮದ ಮಲ್ಲಿಕಾರ್ಜುನ (23) ಎಂದು ಗುರುತಿಸಲಾಗಿದೆ. ಇತ್ತೀಚೆಗೆ, ಜುಲೈ 23ರಂದು ಹಿರಿಯೂರು ತಾಲೂಕಿನ ಐಮಂಗಲ ಬಳಿಯ ಗರಿಮಾರಿ ರಸ್ತೆಯಲ್ಲಿ ಮಲ್ಲಿಕಾರ್ಜುನ ಅಪಘಾತಕ್ಕೊಳಗಾಗಿದ್ದು, ಗಂಭೀರ ಗಾಯಗಳೊಂದಿಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಅವನಿಗೆ ಮಾರಣಾಂತಿಕ ರೋಗ ಬಂದಿದೆ ಎಂಬ ಮಾಹಿತಿ ವೈದ್ಯಕೀಯ ಪರೀಕ್ಷೆಯಿಂದ ಹೊರಬಿದ್ದಿದೆ.
ಅವನ ಸ್ಥಿತಿ ಗಂಭೀರವಾಗಿದ್ದರಿಂದ ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವ ವೇಳೆ ಮಲ್ಲಿಕಾರ್ಜುನ್ ಉಸಿರುಗಟ್ಟಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ನಂತರದ ಅಂತ್ಯಕ್ರಿಯೆಯಲ್ಲಿ ಮಲ್ಲಿಕಾರ್ಜುನನ ಕತ್ತಿನಲ್ಲಿ ಹಲ್ಲೆಗೊಳಗಾದ ನಿಖರ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ, ಈತನ ಸಾವಿನ ಬಗ್ಗೆ ಶಂಕೆ ಕಂಡುಬಂದಿದೆ. ಮೃತನ ತಂದೆ ನಾಗರಾಜ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ, ಮಲ್ಲಿಕಾರ್ಜುನ್‌ನ ಅಕ್ಕ ನಿಶಾ ಹಾಗೂ ಅವಳ ಪತಿ ಮಂಜುನಾಥ್ ಅವರು ಸೇರಿಕೊಂಡು ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಯಲಿಗೆ ಬಂದಿದೆ.
ಇನ್ನೂ ಮದುವೆಯಾಗದ ಮಲ್ಲಿಕಾರ್ಜುನಗೆ ಮಾರಣಾಂತಿಕ ರೋಗ ಪಾಸಿಟಿವ್ ಪತ್ತೆಯಾಗಿದ್ದಕ್ಕೆ, ಮನೆಯವರು ನೊಂದುಕೊಂಡಿದ್ದಾರೆ. ಈ ವಿಚಾರ ಸಮಾಜದಲ್ಲಿ ಗೊತ್ತಾದರೆ ತಮ್ಮ ಮಾನ, ಮರ್ಯಾದೆ ಹಾಳಾಗುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ, ಗಂಭೀರ ಸ್ಥಿತಿಯಲ್ಲಿದ್ದ ಮಲ್ಲಿಕಾರ್ಜುನಗೆ ನೀನು ಬದುಕಿದರೆ ಮನೆ ಮಾನ ಹರಾಜಾಗುತ್ತದೆ, ಹೀಗಾಗಿ ಸಾಯುವುದೇ ಲೇಸು ಎಂದು ಆತನಿಗೆ ಮಾನಸಿಕವಾಗಿ ಒತ್ತಡ ಹೇರಿದ್ದಾರೆ. ನಂತರ, ಅಕ್ಕ-ಭಾವ ಸೇರಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಮಲ್ಲಿಕಾರ್ಜುನ ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರೆ ಅಲ್ಲಿ ಈಗಾಗಲೇ ಈತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ನಂತರ ಆತನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿ, ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಮಣಿಪಾಲ್ ಆಸ್ಪತ್ರೆಯಿಂದ ಶವವನ್ನು ಊರಿಗೆ ತಂದು ಅಂತ್ಯಕ್ರಿಯೆ ಮಾಡುವಷ್ಟರಲ್ಲಿ ಮರಣೋತ್ತರ ಪರೀಕ್ಷಾ ವರದಿ ಬಂದಿದೆ. ಕೂಡಲೇ ವರದಿಯನ್ನು ಮನೆಯವರಿಗೆ ತಲುಪಿಸಲಾಗಿದೆ. ಕೂಡಲೇ ಯುವಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮೃತನ ಅಕ್ಕ-ಭಾವನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ನಿಶಾ ಮತ್ತು ಮಂಜುನಾಥ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ಇವರು ಕೊಲೆ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿಲ್ಲ. ಕೊನೆಗೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ ಎಂದು ತೋರಿಸಿದಾಗ ಇಬ್ಬರೂ ಭಯ ಬಿದ್ದಿದ್ದಾರೆ. ನಂತರ ವೈದ್ಯಕೀಯ ದಾಖಲೆಗಳನ್ನು ಆಧರಿಸಿ ನೀವೇ ಕೊಲೆ ಮಾಡಿದ್ದೀರಿ ಎಂದು ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಇದೀಗ ಅಕ್ಕ-ಭಾವ ಸೇರಿಕೊಂಡು ಮಾರಣಾಂತಿಕ ರೋಗ ಇರುವ ಯುವಕನನ್ನು ಕೊಲೆ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡ ಬೆನ್ನಲ್ಲಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ಹೊಳಲ್ಕೆರೆ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಮಲ್ಲಿಕಾರ್ಜುನನ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ತಮಗೆಲ್ಲಿ ಈ ಮಾರಣಾಂತಿಕ ಖಾಯಿಲೆ ಬಂದಿದೆಯೋ ಎಂದು ಚಿಂತಿತರಾಗಿದ್ದಾರೆ. ಮದುವೆಗೂ ಮುನ್ನವೇ ಮಲ್ಲಿಕಾರ್ಜುನನಿಗೆ ಈ ರೋಗ ಬಂದಿದ್ದಾದರೂ ಹೇಗೆ ಎಂಬ ಮೂಲವನ್ನು ಪತ್ತೆ ಮಾಡುವುದಕ್ಕೆ ಮನೆಯವರು ತಲೆ ಕೆಡಿಸಿಕೊಂಡಿದ್ದಾರೆ. ಜೊತೆಗೆ, ಕುಟುಂಬ ಸದಸ್ಯರು ಕೂಡ ರಕ್ತ ಪರೀಕ್ಷೆಗೆ ಒಳಗಾಗಲು ವೈದ್ಯರು ಸಲಹೆ ನೀಡಿದ್ದಾರೆ.