ಗಣಪತಿ ಎತ್ತರ: ಪೇಚಿಗೆ ಸಿಲುಕಿದ್ದ ಡಿಸಿ ಬಚಾವ್‌..!

By Kannadaprabha NewsFirst Published Aug 31, 2019, 4:18 PM IST
Highlights

ಗಣೇಶಮೂರ್ತಿ ಎತ್ತರದ ವಿಚಾರದಲ್ಲಿ ಪೌರಾಡಳಿತ ಇಲಾಖೆ ನೀಡಿದ್ದ ಸೂಚನೆಯಿಂದಾಗಿ ಪೇಚಿಗೆ ಸಿಲುಕಿದ್ದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಒಂದಿಷ್ಟುನಿರಾಳರಾಗಿದ್ದಾರೆ. ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಲಾಗಿದ್ದ ಗರಿಷ್ಠ 5ಅಡಿ ಎತ್ತರದ ಮಿತಿಯನ್ನು ತೆರವುಗೊಳಿಸಲಾಗಿದೆ.

ಚಿತ್ರದುರ್ಗ(ಆ.31): ಗಣೇಶಮೂರ್ತಿ ಎತ್ತರದ ವಿಚಾರದಲ್ಲಿ ಪೌರಾಡಳಿತ ಇಲಾಖೆ ನೀಡಿದ್ದ ಸೂಚನೆಯಿಂದಾಗಿ ಪೇಚಿಗೆ ಸಿಲುಕಿದ್ದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಒಂದಿಷ್ಟುನಿರಾಳಭಾವಕ್ಕೆ ಮರಳಿದ್ದಾರೆ.

ಗೌರಿ, ಗಣೇಶನ ಹಬ್ಬದ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಗಣೇಶನ ಮೂರ್ತಿ ಎತ್ತರದ ಬಗ್ಗೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸರಿಗೆ ಖಡಕ್‌ ಎಚ್ಚರಿಕೆ ನೀಡಿದ್ದ ಅವರು, 5 ಅಡಿಗೂ ಮೇಲ್ಪಟ್ಟಎತ್ತರದ ಯಾವುದೇ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು. ಸರ್ಕಾರದ ಆದೇಶ ಪಾಲನೆ ಮಾಡಬೇಕೆಂದು ಎಚ್ಚರಿಸಿದ್ದರು.

ಅಧಿಕಾರಿಗಳಿಗೆ ವಿವಾದದ ಭೀತಿಯೂ ಇತ್ತು:

ಜಿಲ್ಲಾಧಿಕಾರಿ ಈ ರೀತಿ ಹೇಳುವಾಗ ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಹಿಂದೂ ಮಹಾಗಣಪತಿ ಎತ್ತರದ ಬಗ್ಗೆ ಮಾಹಿತಿ ಪಡೆದುಕೊಂಡಿರಲಿಲ್ಲ. ಸುಮಾರು 14 ಅಡಿ ಎತ್ತರದ ಹಿಂದೂ ಮಹಾಗಣಪತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ತಯಾರಿಸಿ ಗುರುವಾರ ತಾನೇ ಚಿತ್ರದುರ್ಗಕ್ಕೆ ತರಲಾಗಿತ್ತು. ಎತ್ತರದ ವಿಚಾರದಲ್ಲಿ ಜಿಲ್ಲಾಧಿಕಾರಿ ನೀಡಿದ ಖಡಕ್‌ ಸೂಚನೆ ಅಧಿಕಾರಿಗಳ ಇಕ್ಕಟ್ಟಿಗೆ ಸಿಲುಕಿತ್ತು. ಹಿಂದೂ ಮಹಾಗಣಪತಿ ವಿಚಾರವಾಗಿ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಪರಿಸ್ಥಿತಿಯೂ ಇರಲಿಲ್ಲ. ಹಾಗೊಂದು ವೇಳೆ ಮುಂದಾಗಿದ್ದರೆ ರಾಜ್ಯವ್ಯಾಪಿ ವಿವಾದವಾಗುವ ಸಾಧ್ಯತೆ ಇತ್ತು.

ಪ್ಲಾಸ್ಟಿಕ್‌ ಬಳಸಿದ್ರೆ ಅಂಗಡಿಗೆ ಬೀಗ ಬೀಳುತ್ತೆ ಹುಷಾರ್..!

ಆದರೆ, ಸಂಜೆ ವೇಳೆಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮಾಧಾನಕರ ಸಂಗತಿಯೊಂದು ರವಾನೆಯಾಗಿ ಜಿಲ್ಲಾಧಿಕಾರಿಗಳು ಪೇಚಿಗೆ ಸಿಲುಕುವುದರಿಂದ ಪಾರು ಮಾಡಿತು. ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಲಾಗಿದ್ದ ಗರಿಷ್ಠ 5ಅಡಿ ಎತ್ತರದ ಮಿತಿಯನ್ನು ತೆರವುಗೊಳಿಸಲಾಗಿದೆ ಎಂಬ ಸಂಗತಿ ಇದಾಗಿತ್ತು.

ಇಲಾಖೆಗಳ ನಡುವೆ ಸಾಮ್ಯತೆ ಇಲ್ಲ:

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಣಪತಿ ಎತ್ತರದ ವಿಚಾರದಲ್ಲಿ ಶುಕ್ರವಾರ ಸಂಜೆ ತೀರ್ಮಾನ ಕೈಗೊಂಡಿಲ್ಲ. ಇಂತಹದ್ದೊಂದು ಆದೇಶ ಹೊರಡಿಸಿ 9 ದಿನಗಳಾಗಿವೆ. ಈ ಆದೇಶವನ್ನು ಜಿಲ್ಲಾಡಳಿತದ ಗಮನಕ್ಕೆ ತರದೆ, ಉದಾಸೀನ ತೋರಲಾಗಿದೆ. ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಪೌರಾಡಳಿತ ನಿರ್ದೇಶನಾಲಯದ ಆದೇಶ ಮುಂದಿಟ್ಟುಕೊಂಡು ಗಣೇಶಮೂರ್ತಿ ಎತ್ತರ ಯಾವುದೇ ಕಾರಣದಿಂದ 5 ಅಡಿ ಮೀರುವಂತಿಲ್ಲವೆಂಬ ಖಡಕ್‌ ಸೂಚನೆ ನೀಡಿದ್ದರು. ಇದು ಇಲಾಖೆಗಳ ನಡುವೆ ಸಾಮ್ಯತೆ ಇಲ್ಲವೆಂಬುದನ್ನು ಸಾಬೀತುಪಡಿಸಿದಂತಾಗಿದೆ.

ಮುರುಳೀಧರ ಸ್ಪಷ್ಟನೆ:

ಗೌರಿ-ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಿದ್ದ ಗರಿಷ್ಠ 5 ಅಡಿ ಎತ್ತರದ ಮಿತಿಯನ್ನು ತೆರವುಗೊಳಿಸಲಾಗಿದೆ. ಆದರೆ, ಪಿಒಪಿ ಗಣೇಶಮೂರ್ತಿ ಕೂರಿಸಲು ನಿಷೇಧ ಮುಂದುವರೆದಿದೆ ಎಂದು ಪರಿಸರ ಅಧಿಕಾರಿ ಬಿ.ಎಸ್‌.ಮುರಳೀಧರ್‌ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಯಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಗಣೇಶ ಮೂರ್ತಿಯ ಎತ್ತರವನ್ನು ಗರಿಷ್ಠ 5 ಅಡಿಗೆ ಮಿತಿಗೊಳಿಸಿ, ಈ ಸೂಚನೆಯನ್ನು ಪಾಲಿಸುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇದರ ಅನ್ವಯ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದರು. ಇದೀಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ಆ.21ರಂದು ನೀಡಿರುವ ನಿರ್ದೇಶನದಲ್ಲಿ ಗಣೇಶ ಮೂರ್ತಿಯ ಗರಿಷ್ಠ 5 ಅಡಿ ಎತ್ತರದ ಮಿತಿಯನ್ನು ತೆಗೆದುಹಾಕಿದೆ ಎಂದು ಪರಿಸರ ಅಧಿಕಾರಿ ಬಿ.ಎಸ್‌. ಮುರಳೀಧರ್‌ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

click me!