ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ

By Kannadaprabha NewsFirst Published Jan 17, 2020, 1:26 PM IST
Highlights

 ನಗರ ಹಾಗೂ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಅಧಿಕಾರಿಗಳ ಸಬೂಬುಗಳಿಗೆ ಒಮ್ಮೆಲೆ ರೊಚ್ಚಿಗೆದ್ದರು. ನಿಮ್ಮ ಕೈಲಿ ಆಗದಿದ್ದರೆ ನಾನೇ ಮಾಡಲಾ ಎಂದು ಕೇಳಿದ್ದಾರೆ. 

ಚಿತ್ರದುರ್ಗ [ಜ.17]:  ನಿಮ್ಮ ಮಾತು ಕೇಳಿ ಕೇಳಿ ಸಾಕಾಗಿ ಹೋಗಿದೆ. ಕಡುಬಡವರಿಗೆ ನಿಮ್ಮ ಕೈಲಿ ನಿವೇಶನ ಕೊಡಲು ಆಗದಿದ್ದರೆ ಹೇಳಿ, ಆ ಕೆಲಸ ನಮ್‌ ತಹಸೀಲ್ದಾರರು ಮಾಡಿ ಮುಗಿಸ್ತಾರೆ.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಗರಂ ಆದ ಬಗೆಯಿದು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಿದ್ದ ನಗರ ಹಾಗೂ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಪಂ ಇಒಗಳ ಸಬೂಬುಗಳಿಗೆ ಒಮ್ಮೆಲೆ ರೊಚ್ಚಿಗೆದ್ದರು. ಭೂಮಿ ಹಂಚಿಕೆ ಕುರಿತಂತೆ ಜಿಪಂ ಮುಖ್ಯ ಯೋಜನಾಧಿಕಾರಿ ಶಶಿಧರ್‌ ನೀಡಿದ ಮಾಹಿತಿ ಡಿಸಿ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಭೆಯಲ್ಲಿ ವಿಷಯ ಮಂಡಿಸಿದ ಶಶಿಧರ್‌, ಜಿಲ್ಲೆಯಲ್ಲಿ ಈವರೆಗೆ 2055 ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ. ಈ ಮೊದಲು 106 ಗ್ರಾಮಗಳಲ್ಲಿ ನಿವೇಶನ ರಹಿತರಿಗಾಗಿ 447 ಎಕರೆ ಭೂಮಿ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 43 ಗ್ರಾಮಗಳ 217.37 ಎಕರೆ ಭೂಮಿ ಒದಗಿಸಲಾಗಿದೆ. ಇನ್ನೂ 63 ಗ್ರಾಮಗಳಿಗಾಗಿ 229 ಎಕರೆ ಭೂಮಿ ಬಾಕಿ ಇದೆ ಎಂದಾಗ ಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ನಾಲ್ಕೈದು ಸಭೆಗಳಿಂದಲೂ ಇದೇ ವರದಿಯನ್ನು ನೀಡುತ್ತಿದ್ದೀರಿ. ಬಾಕಿ ಇರುವ ಗ್ರಾಮ ಹಾಗೂ ಭೂಮಿ ನೀಡಲಾಗಿರುವ ಗ್ರಾಮಗಳು ಯಾವುವು, ಹಕ್ಕುಪತ್ರ ನೀಡಿಕೆ ಕುರಿತಂತೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಪ್ರತಿ ಸಭೆಗಳಿಗೂ ಇದೇ ರೀತಿ ಉತ್ತರ ನೀಡುತ್ತಿದ್ದೀರಿ. ಹೀಗಾದರೆ, ಭೂಮಿ ನೀಡುವುದು ಹಾಗೂ ಹಕ್ಕು ಪತ್ರ ವಿತರಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಮನೆ ಮನೆಗಳ ಮುಂದೆಯೂ CAA ವಿರೋಧಿ ಕರಪತ್ರ : ಕಾಣದ ಕೈವಾಡ.

ತಾಪಂ ಇಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾಡಳಿತದಿಂದ ಜಮೀನು ನೀಡಲಾಗಿದ್ದರೂ, ಭೂಮಿ ವಶಕ್ಕೆ ಪಡೆದು, ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಗುಡಿಸಲು ವಾಸಿಗಳಾಗಿರುವ ಜನರು ಇನ್ನೂ ಗುಡಿಸಲುಗಳಲ್ಲೇ ವಾಸಿಸಬೇಕೇ? ಹಕ್ಕುಪತ್ರ ಕೊಡಿ ಎಂದು ಹಲವೆಡೆಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಜನ ಪದೇ ಪದೇ ಬರುತ್ತಾರೆ. ಅವರಿಗೆ ಏನೆಂದು ಉತ್ತರ ಹೇಳಬೇಕು. ತಾಪಂ ಇಒ ಅವರ ಕೈಯಲ್ಲಿ ಆಗುವುದಿಲ್ಲ ಎಂದು ತಿಳಿಸಿದರೆ, ತಹಸಿಲ್ದಾರರಿಂದಲೇ ಈ ಕಾರ್ಯ ಪೂರ್ಣಗೊಳಿಸುತ್ತೇನೆ ಎಂದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಸತ್ಯಭಾಮ, ಗ್ರಾಪಂಗಳ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಹಾಗೂ ಅವಶ್ಯವಾಗಿರುವ ಭೂಮಿಯ ವಿವರ ಪರಿಷ್ಕರಣೆಯಾಗಿದ್ದು, ಇದೀಗ ಜಿಲ್ಲೆಯ 1040 ಗ್ರಾಮಗಳಲ್ಲಿ ಸುಮಾರು 22 ಸಾವಿರ ನಿವೇಶನ ರಹಿತರಿಗಾಗಿ 1742 ಎಕರೆ ಭೂಮಿ ಬೇಕಾಗಿದೆ. ಈಗಾಗಲೇ ಪರಿಷ್ಕೃತ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟತಹಸೀಲ್ದಾರ್‌ ಹಾಗೂ ತಾಪಂ ಇಒಗಳಿಗೂ ವಿವರ ನೀಡಲಾಗಿದೆ ಎಂದರು.

ನಾಲ್ಕು ವರ್ಷಗಳ ಹಿಂದೆ 68 ಎಕರೆ ಹೆಚ್ಚುವರಿ ಭೂಮಿಯನ್ನು ಪಡೆಯಲಾಗಿತ್ತು. ಇದರಲ್ಲಿ ಚಳ್ಳಕೆರೆಯಲ್ಲಿ 54 ಎಕರೆ ಭೂಮಿ ಒತ್ತುವರಿ ಕಂಡುಬಂದಿದ್ದು, ಇದನ್ನು ತೆರವುಗೊಳಿಸಿ ಜಿಪಂ ವಶಕ್ಕೆ ನೀಡಲು ತಿಳಿಸಲಾಗಿತ್ತು. ಆದರೆ, ಇನ್ನೂ ತೆರವು ಕಾರ್ಯ ನಡೆದಿಲ್ಲ. ಈ ಹಿಂದಿನ ವರದಿಯನ್ವಯ ಭೂಮಿ ಮಂಜೂರಾತಿಗೆ ಬಾಕಿ ಇರುವ ಗ್ರಾಮಗಳು ಹಾಗೂ ಈಗಾಗಲೇ ಹಕ್ಕುಪತ್ರ ನೀಡಲಾಗಿರುವ ಗ್ರಾಮಗಳ ವಿವರವನ್ನು ಮೂರ್ನಾಲ್ಕು ದಿನಗಳೊಳಗಾಗಿ ನೀಡಲಾಗುವುದು ಎಂದು ಸತ್ಯಭಾಮ ಹೇಳಿದರು.

ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ...

ತಾಪಂ ಇಒಗಳು, ನಗರಸಭೆ, ಪುರಸಭೆ, ಪಪಂಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆ

ಪ್ರಧಾನಮಂತ್ರಿ ಆವಾಸ್‌ (ನಗರ) ಯೋಜನೆಯಡಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಪಂ ವ್ಯಾಪ್ತಿಯಲ್ಲಿ 26958 ಜನರಿಗೆ ಜಿ+2 ಮನೆಗಳನ್ನು ನಿರ್ಮಿಸಿ ಒದಗಿಸಲು ಸಮೀಕ್ಷೆ ಕೈಗೊಳ್ಳಲಾಗಿದೆ. ಫಲಾನುಭವಿಗಳು ಮೊದಲಿಗೆ ಅರ್ಜಿಯೊಂದಿಗೆ 10 ಸಾವಿರ ರು.ಗಳನ್ನು ತಮ್ಮದೇ ಹೆಸರಿಗೆ ಫಿಕ್ಸೆಡ್‌ ಡಿಪಾಸಿಟ್‌ ಮಾಡಿ ದಾಖಲೆ ಸಲ್ಲಿಸಬೇಕು. ಚಳ್ಳಕೆರೆಯಲ್ಲಿ 3120 ಅರ್ಹ ಫಲಾನುಭವಿಗಳ ಪಟ್ಟಿಸಿದ್ಧವಿದ್ದು, ಫಲಾನುಭವಿ ವಂತಿಕೆ ಭರಿಸಲು ತಿಳಿಸಲಾಗಿದೆ. ಚಿತ್ರದುರ್ಗದಲ್ಲಿ 7252 ಫಲಾನುಭವಿಗಳನ್ನು ಗುರುತಿಸಲಾಗಿದೆ. ಹಿರಿಯೂರಿನಲ್ಲಿ 4150 ಅರ್ಜಿ ಸ್ವೀಕೃತಗೊಂಡಿದ್ದು, ಈವರೆಗೆ 2351 ಫಲಾನುಭವಿಗಳನ್ನು ಗುರುತಿಸಿದೆ. ಜಿಲ್ಲೆಯ ಉಳಿದೆಡೆ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ 126 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ಫಲಾನುಭವಿಗಳು ವಂತಿಕೆ ಭರಿಸುವ ಕುರಿತು ಮನವೊಲಿಸಿ, ಅರಿವು ಮೂಡಿಸುವ ಕಾರ್ಯ ಆಗಬೇಕು. ಸಾಧ್ಯವಾದಲ್ಲಿ ಫಲಾನುಭವಿಗಳೊಂದಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದರು

click me!