ಪುನರ್ವಸು ಮಳೆಗೆ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ; ಕೃಷಿ ಚುಟುವಟಿಕೆ ಚುರುಕು

Published : Jul 20, 2026, 11:46 AM IST
chikmagaluru

ಸಾರಾಂಶ

ಶೃಂಗೇರಿ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಯ ನಡುವೆಯೂ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಚಿಕ್ಕಮಗಳೂರು:  ಶೃಂಗೇರಿ ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆ ಆರ್ಭಟ ಭಾನುವಾರವೂ ಮುಂದುವರಿದಿತ್ತು.

ಗುರುವಾರದಿಂದ ಅಬ್ಬರಿಸುತ್ತಿರುವ ಪುನರ್ವಸು ಮಳೆ ಶುಕ್ರವಾರ, ಶನಿವಾರವೂ ಹಗಲು ರಾತ್ರಿ ಎಡಬಿಡದೆ ನಿರಂತರವಾಗಿ ಮುಂದುವರಿದಿತ್ತು. ತುಂಗಾ ನದಿ ಉಗಮ ಸ್ಥಾನವಾದ ಪಶ್ಚಿಮ ಘಟ್ಟಗಳ ತಪ್ಪಲು ಗಂಗಾಮೂಲ ಎಸ್.ಕೆ ಬಾರ್ಡರ್, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಮೀನು, ತೋಟಗಳು ಮುಳುಗಡೆಯಾಗಿವೆ. ಮಳೆ ಮುಂದುವರಿದಲ್ಲಿ ಪ್ರವಾಹದ ಭೀತಿ ಉಂಟಾಗಲಿದೆ.

ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ, ಭೂಕುಸಿತ ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 169 ರ ಮಂಗಳೂರು ಶೃಂಗೇರಿ ಶಿವಮೊಗ್ಗ ಸಂಪರ್ಕ ಕಲ್ಪಿಸುವ ಶೃಂಗೇರಿ ಸಮೀಪದ ಆನೆಗುಂದ ಬಳಿ ಗುಡ್ಡದ ಮಣ್ಣು ಕುಸಿದು ರಸ್ತೆಯತ್ತ ಬರುತ್ತಿದೆ. ತ್ಯಾವಣ ಕೆಎಸ್ಆರ್‌ಟಿಸಿ ಡಿಪೋ ಬಳಿ ಗುಡ್ಡ ಕುಸಿದು ಮಣ್ಣು ರಸ್ತೆ ಮೇಲೆ ಬೀಳುತ್ತಿದೆ. ತ್ಯಾವಣ ಶಾಲೆ ಸಮೀಪ ರಸ್ತೆ ಪಕ್ಕದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಯತ್ತ ಬೀಳುತ್ತದೆ. 

ಮಳೆಗೆ ರಸ್ತೆ ಸಂಚಾರಕ್ಕೆ ಅಡ್ಡಿ

ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬೀಳುವ ಆತಂಕವಿದ್ದು, ನೆಮ್ಮಾರು ಸಾಲ್ಮರ ಬಳಿಯೂ ರಾ.ಹೆ.ಪಕ್ಕದ ಗುಡ್ಡ ಕುಸಿದು ಜಾರುತ್ತಿದೆ. ಗಿಡ ಮರಗಳು ಸಹಿತ ಮಣ್ಣು ರಸ್ತೆಯ ಮೇಲೆ ಬೀಳುತ್ತಿದ್ದು ಮಳೆಗೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಗಾಳಿ ಆರ್ಭಟವಿಲ್ಲದೇ ಮಳೆ ಮಾತ್ರ ಅಬ್ಬರಿಸುತ್ತಿದೆ. ನರಸಿಂಹ ಪರ್ವತಗಳ ತಪ್ಪಲು ಸಿಂದೋಡಿ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತಿದೆ. ಹಳ್ಳ,ಕೆರೆಗಳಲ್ಲಿಯೂ ನೀರು ತುಂಬಿದೆ. ಮಳೆಯಿಂದ ಈವರೆಗೆ ಯಾವುದೇ ಹಾನಿಯಾದ ವರದಿಯಾಗಿಲ್ಲ.

ತಡೆಗೋಡೆ ಕಾಮಗಾರಿ ಚುರುಕು: ಪಟ್ಟಣದ ತಾಲೂಕು ಕಚೇರಿ ಗೋರಿಗುಡ್ಡ ಸಮೀಪದ ನಿರ್ಮಾಣ ಹಂತದ ತಡೆಗೋಡೆ ದುರಸ್ತಿ ಕಾರ್ಯಾಚರಣೆ ಭಾನುವಾರವೂ ನಡೆಯಿತು. ಈಗಾಗಲೇ ತಡೆಗೋಡೆಯೊಳಗೆ ತುಂಬಿಸಿರುವ ಬಹುತೇಕ ಮಣ್ಣನ್ನು ಹಿಟಾಚಿಗಳ ಮೂಲಕ ತೆರವುಗೊಳಿಸಲಾಗಿದೆ. ಕಾಂಕ್ರೀಟ್ ಸ್ಲಾಬ್‌ಗಳನ್ನು ಬಿರುಕು ಬಿಟ್ಟಿರುವ ಭಾಗದವರೆಗೆ ಕಟ್ ಮಾಡಿ ಗುಡ್ಡ ಕುಸಿಯದಂತೆ ಮಳೆಗಾಲ ಮುಗಿಯುವವರೆಗೂ ತಾತ್ಕಾಲಿಕ ವ್ಯವಸ್ಛೆ ಮಾಡಲಾಗಿದೆ.

ಕೃಷಿ ಚುಟುವಟಿಕೆಗಳು ಚುರುಕು

ಮಳೆ ಸುರಿಯುತ್ತಿರುವುದರಿಂದ ಬತ್ತದ ಗೆದ್ದೆಗಳಲ್ಲಿ ನೀರಿನ ಸಂಗ್ರಹವಾಗಿ ಸಸಿ ಅಗಡಿಗಳಲ್ಲಿ ನಾಟಿಗೆ ಸಸಿಗಳನ್ನು ಬೆಳೆಸಲಾಗಿದೆ. ನಾಟಿ ಕಾರ್ಯಕ್ಕೆ ಪೂರ್ವ ಸಿದ್ಧತೆ ಚಟುವಟಿಕೆಗಳು ಆರಂಭಗೊಂಡಿದೆ. ಸಸಿ ಅಗಡಿಗಳು ನೀರಿನಲ್ಲದೇ ಒಣಗಿ ಹೋಗುತ್ತಿದ್ದು, ಕಳೆದೆರೆಡು ದಿನಗಳಿಂದ ಸುರಿದ ಮಳೆಗೆ ಜೀವಕಳೆ ಬಂದಿದೆ. ಈಗಾಗಲೇ ನಾಟಿ ಕಾರ್ಯ ಆರಂಭಗೊಳ್ಳಬೇಕಿತ್ತು. ಆದರೆ ಮಳೆ ಕೊರತೆ, ನೀರಿಲ್ಲದೇ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿತ್ತು.

ಅಡಕೆ ತೋಟಗಳಲ್ಲಿ ಔಷದಿ ಸಿಂಪಡಣೆ ಕೆಲಸ ಕೂಡ ಚುರುಕುಗೊಂಡಿದೆ. ಕೃಷಿ ಕಾರ್ಮಿಕರ ಕೊರತೆ ನಡುವೆ ಚಟುವಟಿಕೆಗಳು ಚುರುಕುಗೊಂಡಿದೆ.

ಪ್ರವಾಸಿಗರ ದಂಡು

ಒಂದೆಡೆ ಮಳೆ ಸುರಿಯುತ್ತಿದ್ದರೆ ಇನ್ನೊಂದೆಡೆ ಶೃಂಗೇರಿಯತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವೀಕೆಂಡ್ ಭಾನುವಾರ ಶೃಂಗೇರಿ ಪಟ್ಠಣ ಶ್ರೀಮಠದಲ್ಲಿ ಪ್ರವಾಸಿಗರ ಗುಂಪು ಕಂಡುಬಂದಿತು. ಶ್ರೀ ಮಠದ ಆವರಣ, ಶಾರದಾಂಬಾ ದೇವಾಲಯ, ನರಸಿಂಹ ವನ ,ಶೃಂಗೇರಿ ಪಟ್ಟಣ, ಭಾರತೀ ಬೀದಿ ಎಲ್ಲೆಡೆ ಬೆಳಿಗ್ಗೆಯಿಂದಲೇ ಜನಜಂಗುಳಿ ಕಂಡುಬಂದಿತು. ವಸತಿ ಗೃಹಗಳು ತುಂಬಿವೆ. ವಾಹನ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನ, ಭಾರತೀ ಬೀದಿಯಲ್ಲಿ ವಾಹನ ದಟ್ಟಣೆಯಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.

PREV
Read more Articles on
click me!

Recommended Stories

Love Breakup: ಪ್ರಿಯತಮೆ ದೂರವಾದ ಕೋಪಕ್ಕೆ ಇಂಥಾ ಕೃತ್ಯ? ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿ ಬಂಧನ
ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!