ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?

Published : Jul 20, 2026, 10:43 AM IST
dandeli zipline snaps

ಸಾರಾಂಶ

ದಾಂಡೇಲಿಯಲ್ಲಿ ಜಿಪ್ ಲೈನ್ ಆಡುವಾಗ ತಾಂತ್ರಿಕ ದೋಷದಿಂದ 40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕೈ-ಕಾಲುಗಳ ಮೂಳೆಗಳು ಮುರಿದು ಹಾಸಿಗೆ ಹಿಡಿದಿರುವ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್, ಇದೀಗ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಉತ್ತರ ಕನ್ನಡ: ಸುಂದರ ಪ್ರಕೃತಿಯ ನಡುವೆ ಎಂಜಾಯ್ ಮಾಡೋಣ ಎಂದು ದಾಂಡೇಲಿ ಪ್ರವಾಸ ಹೋಗಿದ್ದ ಆ ಯುವಕನ ಬದುಕು ಈಗ ನರಕ ಸದೃಶವಾಗಿದೆ. ಸಾಹಸ ಕ್ರೀಡೆ 'ಜಿಪ್ ಲೈನ್' ಆಡುವಾಗ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ 40 ಅಡಿ ಎತ್ತರದಿಂದ ಬಿದ್ದ ವಿಜಯಪುರದ ಯುವಕ ಕುಬೇರ ಸುರಪುರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆ ಭೀಕರ ಅಪಘಾತದ ನಂತರ ಆತನ ಪರಿಸ್ಥಿತಿ ಹೇಗಿದೆ? ರೆಸಾರ್ಟ್ ಸಿಬ್ಬಂದಿ ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.

40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು?

ಕಳೆದ ಜುಲೈ 3ರಂದು ವಿಜಯಪುರ ನಗರದ ನಿವಾಸಿ ಕುಬೇರ ಸುರಪುರ ತನ್ನ ಸಹೋದರ ಪ್ರಶಾಂತನ ಜೊತೆ ದಾಂಡೇಲಿಯ 'ಸ್ಟರ್ಲಿಂಗ್ ರಿವರ್ ರೆಸಾರ್ಟ್'ಗೆ ತೆರಳಿದ್ದರು. ಅಲ್ಲಿ ಜಿಪ್ ಲೈನ್ ಆಡುವಾಗ ಅರ್ಧ ದಾರಿಯಲ್ಲಿ ಜಿಪ್ ಲೈನ್‌ನ ಲಾಕ್ ಇದ್ದಕ್ಕಿದ್ದಂತೆ ಕಟ್ ಆಗಿದೆ. ಪರಿಣಾಮವಾಗಿ ಕುಬೇರ ಸುಮಾರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಅಪ್ಪಳಿಸಿದ್ದಾರೆ. ಈ ಭೀಕರ ದೃಶ್ಯವನ್ನು ಆತನ ಸಹೋದರ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು. ಕಣ್ಣೆದುರೇ ಅಣ್ಣ ಎತ್ತರದಿಂದ ಬಿದ್ದು ಕಿರುಚಾಡುತ್ತಿದ್ದನ್ನು ಕಂಡು ಸಹೋದರ ಹೌಹಾರಿ ಹೋಗಿದ್ದಾರೆ.

ಈಗ ಕುಬೇರನ ಸ್ಥಿತಿ ಹೇಗಿದೆ?

40 ಅಡಿ ಎತ್ತರದಿಂದ ಬಿದ್ದ ರಭಸಕ್ಕೆ ಕುಬೇರನ ದೇಹ ಅಕ್ಷರಶಃ ಜರ್ಜರಿತವಾಗಿದೆ. ಬಿದ್ದ ರಭಸಕ್ಕೆ ಕುಬೇರನ ಎರಡೂ ಕೈಗಳು ಮತ್ತು ಎರಡೂ ಕಾಲುಗಳ ಎಲುಬುಗಳು ಮುರಿದು ಪುಡಿಯಾಗಿವೆ. ಕಾಲು ಮತ್ತು ಕೈಗಳ ನರಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, ದೇಹದ ಕೆಳಭಾಗ ಸಂವೇದನೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಅಂದು ಉತ್ಸಾಹದಿಂದ ಓಡಾಡುತ್ತಿದ್ದ 24 ವರ್ಷದ ಯುವಕ ಇಂದು ಏಳಲಾರದ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ. ದಿನನಿತ್ಯದ ಕೆಲಸಗಳಿಗೂ ಪರಾವಲಂಬಿಯಾಗುವಂತಾಗಿದೆ. ಈಗಾಗಲೇ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳು ನಡೆದಿವೆ. ಸಂಪೂರ್ಣ ಗುಣಮುಖರಾಗಲು ಇನ್ನೂ ಹಲವಾರು ಶಸ್ತ್ರಚಿಕಿತ್ಸೆಗಳು ಬೇಕಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ರೆಸಾರ್ಟ್‌ನಿಂದ ನಂಬಿಕೆ ದ್ರೋಹ

ಅಪಘಾತ ಸಂಭವಿಸಿದ ಕೂಡಲೇ ರೆಸಾರ್ಟ್ ಆಡಳಿತ ಮಂಡಳಿಯು ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿತ್ತು. ಈಗ ಚಿಕಿತ್ಸಾ ವೆಚ್ಚ ಲಕ್ಷಾಂತರ ರೂಪಾಯಿ ದಾಟುತ್ತಿದ್ದಂತೆ ರೆಸಾರ್ಟ್ ಮ್ಯಾನೇಜ್‌ಮೆಂಟ್ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಸರಿಯಾದ ಸುರಕ್ಷತಾ ಕ್ರಮಗಳಿಲ್ಲದ ಕಾರಣ ನನ್ನ ಮಗನ ಬದುಕು ಹಾಳಾಗಿದೆ, ಈಗ ರೆಸಾರ್ಟ್‌ನವರು ಸಹಾಯಕ್ಕೂ ಬರುತ್ತಿಲ್ಲ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ರೆಸಾರ್ಟ್ ಮ್ಯಾನೇಜರ್ ಹೇಳುವುದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಇದು ನಮ್ಮ ನಿರ್ಲಕ್ಷ್ಯವಲ್ಲ, ಬದಲಿಗೆ ಆಕಸ್ಮಿಕವಾಗಿ ನಡೆದ ಘಟನೆ. ನಾವು ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಕುಟುಂಬದವರ ಜೊತೆ ಮಾತುಕತೆ ನಡೆಸಿ, ಚಿಕಿತ್ಸೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ. ದಾಂಡೇಲಿಯಂತಹ ಪ್ರವಾಸಿ ತಾಣಗಳಲ್ಲಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರವಿರಲಿ. ರೆಸಾರ್ಟ್‌ಗಳ ನಿರ್ಲಕ್ಷ್ಯಕ್ಕೆ ಅಮಾಯಕ ಪ್ರವಾಸಿಗರ ಬದುಕು ಮೂರಾಬಟ್ಟೆಯಾಗುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಕುಬೇರ ಮತ್ತೆ ಮೊದಲಿನಂತೆ ಓಡಾಡುವಂತಾಗಲಿ ಎಂಬುದೇ ಎಲ್ಲರ ಆಶಯ.

PREV
Read more Articles on
click me!

Recommended Stories

Karwar: 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಹೊಂದಿರೋ ಕನ್ನಡದ ಒಂದೇ ಶಾಸನ ಪತ್ತೆ
ಉತ್ತರ ಕನ್ನಡದಲ್ಲಿ ಮತ್ತೆ ನೆನಪಿಸಿದ ಶಿರೂರು ದುರಂತ.. ನೂರಾರು ವಿದ್ಯಾರ್ಥಿಗಳು ಜಸ್ಟ್ ಮಿಸ್