ಕೊರೋನಾ ವೈರಸ್‌ನಿಂದ ಮನುಷ್ಯನ ದೇಹದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಮಕ್ಕಳು, ಯುವಕರು, ವಯ್ಸಸದಾವರಲ್ಲಿ ತೂಕದಲ್ಲಿ ಭಾರೀ ಹೆಚ್ಚಳವಾಗಿದೆ. ಅದರಲ್ಲೂ ಪೊಲೀಸ್ ಡ್ಯೂಟಿ ಮಾಡುವ ಸಿಬ್ಬಂದಿಗಳ ತೂಕ ಹೆಚ್ಚಳವಾಗಿರುವುದರಿಂದ ಇಲಾಖೆ ಪೊಲೀಸರಿಗೆ ಹೊಟ್ಟೆ ಕರಗಿಸಿಕೊಳ್ಳುವ ಟಾಸ್ಕ್ ನೀಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.08): ಕೊರೋನಾ ವೈರಸ್‌ನಿಂದ (Coronavirus) ಮನುಷ್ಯನ ದೇಹದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಮಕ್ಕಳು, ಯುವಕರು, ವಯ್ಸಸದಾವರಲ್ಲಿ ತೂಕದಲ್ಲಿ ಭಾರೀ ಹೆಚ್ಚಳವಾಗಿದೆ. ಅದರಲ್ಲೂ ಪೊಲೀಸ್ (Police) ಡ್ಯೂಟಿ ಮಾಡುವ ಸಿಬ್ಬಂದಿಗಳ ತೂಕ ಹೆಚ್ಚಳವಾಗಿರುವುದರಿಂದ ಇಲಾಖೆ ಪೊಲೀಸರಿಗೆ ಹೊಟ್ಟೆ ಕರಗಿಸಿಕೊಳ್ಳುವ ಟಾಸ್ಕ್ ನೀಡಿದೆ.
ಫಿಟ್ ಆದ್ರೆ ಪೊಲೀಸರಿಗೆ ಸಿಗುತ್ತೆ ಬಹುಮಾನ: ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಫೈನ್ ಆಂಡ್ ಫಿಟ್ ಇರಬೇಕು ಎಂಬ ಕಾರಣಕ್ಕೆ ತೂಕ ಇಳಿಸಿಕೊಳ್ಳುವ ಪೊಲೀಸರಿಗೆ ಬಹುಮಾನವನ್ನೂ ಘೋಷಿಸಲಾಗಿದೆ. ಪೊಲೀಸರೆಂದರೆ ಕಾನೂನು ಪಾಲನೆಯ ಕೆಲಸ ಮಾಡುವವರು. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವವರು. ಕಳ್ಳಕಾಕರನ್ನು ಹಿಡಿದು ಸಮಾಜದಲ್ಲಿ ಕುಟುಂಬಗಳು, ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ನೋಡಿಕೊಳ್ಳುವವರು ಆದರೆ, ಪೊಲೀಸರೇ ಹೊಟ್ಟೆ ಬೆಳೆಸಿಕೊಂಡು, ಆರೋಗ್ಯ ಹಾಳು ಮಾಡಿಕೊಂಡಿದ್ದರೆ ಖಡಕ್ಕಾಗಿ ಕರ್ತವ್ಯ ನಿರ್ವಹಿಸುವುದು ಹೇಗೆ? ಇದಕ್ಕಾಗಿ ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎಚ್. ಅಕ್ಷಯ್ ಅವರು, ಪೊಲೀಸರಿಗೆ ಹೊಟ್ಟೆ ಕರಗಿಸಿಕೊಳ್ಳುವ ಟಾಸ್ಕ್ ಕೊಟ್ಟಿದ್ದಾರೆ.
ಕಾಫಿನಾಡಿನಲ್ಲಿ ಚುರುಕುಗೊಂಡ ಕೃಷಿ ಕಾರ್ಯ: ಮಲೆನಾಡು, ಬಯಲು ಸೀಮೆಯಲ್ಲೂ ಬಿತ್ತನೆ ಕಾರ್ಯ
ಕೊರೋನಾ ಡ್ಯೂಟಿ, ವೈರಸ್ ಕಾಟದಿಂದ ತೂಕ ಹೆಚ್ಚಳ: ಪೊಲೀಸರಿಗೆ ಎದೆ ಮುಂದಿರಬೇಕು, ಹೊಟ್ಟೆ ಹಿಂದಿರಬೇಕು ಅಂತಾರೆ. ಆದ್ರೆ, ಡ್ಯೂಟಿಗೆಂದೂ ಊರೂರು ಅಲ್ಕೊಂಡು ಸಿಕ್ಸಿಕ್ಕಲ್ಲಿ, ಸಿಕ್ಸಿಕ್ಕಿದ್ ತಿನ್ಕೊಂಡು ಆಕಾರವಿಲ್ಲದಂತಿದ್ದ ಕಾಫಿನಾಡ ಪೊಲೀಸರಿಗೆ ಎಸ್ಪಿ ಅಕ್ಷಯ್ ಭರ್ಜರಿ ಆಫರ್ ಕೊಟ್ಟಿದ್ದಾರೆ. ಕೊರೋನಾ ವೇಳೆ ಹೆಲ್ತ್ ಬಗ್ಗೆ ಗಮನ ನೀಡದೆ ಜನರಿಗಾಗಿ ಡ್ಯೂಟಿ ಮಾಡಿದ್ದರು. ಆದ್ರೆ, ವೀಕ್ಲಿ ಪರೇಡ್ನಲ್ಲಿ ಹೆಚ್ಚಿನ ತೂಕದಲ್ಲಿ ಕಾಣುತ್ತಿದ್ದರು. ಕೆಲಸದ ನಿಮಿತ್ತ ಟೈಂಗೆ ಸರಿಯಾಗಿ ಊಟ ತಿಂಡಿ ಮಾಡಲು ಸಾಧ್ಯವಾಗಲ್ಲ.
ಅದರಿಂದ ಗ್ಯಾಸ್ಟಿಕ್ ಹೆಚ್ಚುವುದರ ಜೊತೆ ವಿವಿಧ ರೀತಿಯ ಖಾಯಿಲೆಗಳು ಕೂಡ ಬರುವ ಸಾಧ್ಯತೆ ಇದೆ. ರೆಗ್ಯುಲರ್ ಮೆಡಿಕಲ್ ಚೆಕ್ಅಪ್ನಲ್ಲೂ ಕೂಡ ಇದನ್ನ ಗಮನಿಸಿದ್ದೇವೆ. ತೂಕ ಹೆಚ್ಚುವುದರಿಂದ ಕಾಲು ನೋವು, ಊದುವುದನ್ನೂ ನಾವು ಗಮನಿಸಿದ್ದೇವೆ. ಹಾಗಾಗಿ, ಹೆಚ್ಚಿನ ತೂಕ ಇರುವವರು ಒಂದೆರಡು ತಿಂಗಳಲ್ಲಿ ಸೇವೆ ಜೊತೆ ಆರೋಗ್ಯದ ಕಡೆ ಗಮನ ಹರಿಸಿ ಅವರ ದೇಹಕ್ಕೆ ತಕ್ಕಂತೆ ತೂಕವನ್ನ ಇಳಿಸಿಕೊಂಡರೆ ಅಂತವರನ್ನ ಗುರುತಿಸಿ ಅವರಿಗೆ ಬಹುಮಾನ ಕೂಡ ನೀಡಲಾಗುವುದು ಎಂದು ಸ್ವತಃ ಚಿಕ್ಕಮಗಳೂರು ಎಸ್ಪಿಯೇ ಪೊಲೀಸರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.
ಅಕ್ಕಪಕ್ಕದ ಸ್ಟೇಷನ್ಗೆ ಟ್ರಾನ್ಸ್‌ಫರ್ ಎನ್ನುವ ಕುತೂಹಲ: ಎಸ್ಪಿ ಆ ಮಾತನ್ನ ಹೇಳಿದ್ದೇ ತಡ. ಈಗ ಶುರುವಾಗಿದೆ ನೋಡಿ ಅಸಲಿ ಆಟ. ಹೆಚ್ಚಿನ ತೂಕ ಇರುವವರು ಟೈಂ ಸಿಕ್ಕಾಗೆಲ್ಲಾ ವಾಕಿಂಗು, ರನ್ನಿಂಗು ಅಂತ ದೇಹಕ್ಕೆ ಕೆಲಸ ಕೊಟ್ಟಿದ್ದಾರೆ. ಟೈಂಗೆ ಸರಿಯಾಗಿ ಊಟ-ತಿಂಡಿಯತ್ತಲೂ ಗಮನ ಹರಿಸಿದ್ದಾರೆ. ಕೆಲ ಪೊಲೀಸರು ಹೊಸ ಸೈಕಲನ್ನೇ ಖರೀದಿಸಿದ್ದಾರೆ. ಸಿಕ್ಕಲ್ಲಿ ಸಿಕ್ಕಿದ್ದ ತಿನ್ನೋದ್ ಬಿಟ್ಟು ಊಟ-ತಿಂಡಿಗೆ ಮನೆಯನ್ನ ನೆಚ್ಚಿಕೊಂಡಿದ್ದಾರೆ. ಎಸ್ಪಿ ನೀಡುವ ರಿವಾರ್ಡ್ಗಾಗಿ ಪೊಲೀಸರು ತೂಕ ಇಳಿಸಿಕೊಳ್ಳೋದಕ್ಕೆ ತಮ್ಮ ಲೈಫ್ ಸ್ಟೈಲನ್ನೇ ಚೇಂಜ್ ಮಾಡಿಕೊಂಡಿದ್ದಾರೆ. ಇದು ಒಳ್ಳೆ ಬೆಳವಣಿಗೆ ಕೂಡ.
Chikkamagaluru ಕಾರಿಗೆ ಅಪ್ಪಳಿಸಿದ ವಿದ್ಯುತ್ ಕಂಬ, ಕೂದಳೆಲೆ ಅಂತರದಲ್ಲಿ ಪ್ರಯಾಣಿಕರು ಪಾರು
ಆದ್ರೆ, ಎಸ್ಪಿ ಕೂಡ ಯಾರಿಗೆ ಟೈಂ ಬಾಂಡ್ ನೀಡಿಲ್ಲ.ಕೆಲವರು ತಿಂಗಳಿಗೆ ಐದಾರು ಕೆ.ಜಿ. ಕಡಿಮೆ ಮಾಡಬಹುದು. ಕೆಲವರಿಗೆ ಎರಡ್ಮೂರು ಕೆ.ಜಿ. ಇಳಿಸೋದು ಕಷ್ಟವಾಗುತ್ತೆ. ಹಾಗಾಗಿ, ಅವರ ದೇಹದ ಶಕ್ತಿಗನುಗುಣವಾಗಿ ಇಳಿಸಿಕೊಳ್ಳಲಿ ಎಂದಿದ್ದಾರೆ. ಆದ್ರೆ, ಪೊಲೀಸರಿಗೆ ಎಸ್ಪಿ ಏನ್ ರಿವಾರ್ಡ್ ಕೊಡ್ತಾರೋ ಏನೋ ಅನ್ನೋ ಕುತೂಹಲ ಕೂಡ ಶುರುವಾಗಿದ್ದು, ಕೆಲವರು ನಂಗೇ ನಮ್ಮೂರಿನ ಅಕ್ಕಪಕ್ಕದ ಸ್ಟೇಷನ್ಗೆ ಟ್ರಾನ್ಸ್ಫರ್ ಕೊಟ್ರೆ ಸಾಕಪ್ಪಾ ಅಂತಿದ್ದಾರೆ. ಒಟ್ಟಾರೆ, ಪೊಲೀಸರಂದ್ರೆ, ಜನ್ರಿಗೆ ಡೊಳ್ಳೊಟ್ಟೆಯೇ ಕಣ್ಮುಂದೆ ಬರ್ತಿತ್ತು. ಈ ಹೊಟ್ಟೆ ಹೊತ್ಕೊಂಡ್ ಇವ್ರು ಕಳ್ರನ್ನ ಹೇಗ್ ಹಿಡೀತಾರೆ ಅಂತ ಜನ ಆಡ್ಕೊಳ್ತಿದ್ರು. ಆದ್ರೆ, ಇನ್ಮುಂದೆ ಹಾಗನ್ನುವಂತಿಲ್ಲ. ಪೊಲೀಸರು ದೇಹವನ್ನ ದಂಡಿಸೋದ್ರ ಜೊತೆ ವೃತ್ತಿಯಲ್ಲೂ ಕಾರ್ಯಪ್ರವೃತ್ತರಾಗಿದ್ದಾರೆ.