
ಚಿಕ್ಕಮಗಳೂರು (ಜೂ.24): ಕಾಫಿನಾಡಿನಲ್ಲಿ ವಿವಾಹಿತ ಮಹಿಳೆಯೊಬ್ಬಳ ವಿಚಾರಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಅಂತ್ಯಗೊಂಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಮಹಿಳೆಗಾಗಿ ನಡೆದ ಈ ಜಗಳದಲ್ಲಿ ವ್ಯಕ್ತಿಯೊಬ್ಬನ ಹಸ್ತವು ಸಂಪೂರ್ಣವಾಗಿ ತುಂಡಾಗಿ ಬಿದ್ದಿದೆ.
ಗಂಡನಿಂದ ದೂರವಾಗಿ ನೆಲೆಸಿದ್ದ ನಾಗರತ್ನ ಎಂಬ ಮಹಿಳೆಯ ವಿಚಾರದಲ್ಲಿ ಶೇಷಗಿರಿ (40) ಹಾಗೂ ಅರುಣ್ (35) ಎಂಬುವರ ನಡುವೆ ಕಳೆದ ಕೆಲವು ದಿನಗಳಿಂದ ಮನಸ್ತಾಪವಿತ್ತು ಎನ್ನಲಾಗಿದೆ. ಈ ವಿಚಾರವು ವಿಕೋಪಕ್ಕೆ ತಿರುಗಿ, ಶೇಷಗಿರಿಯು ಅರುಣ್ ಮೇಲೆ ಲಾಂಗ್‌ನಿಂದ (ಮಚ್ಚು) ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಅರುಣ್ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾನೆ. ಈ ದಾಳಿಯಿಂದಾಗಿ ಅರುಣ್ ಅವರ ಹಸ್ತವು ಮಣಿಕಟ್ಟಿನಿಂದ ಸಂಪೂರ್ಣವಾಗಿ ಕಟ್ ಆಗಿ ನೆಲಕ್ಕೆ ಬಿದ್ದಿದೆ.
ದಾಳಿಯ ತೀವ್ರತೆಗೆ ಅರುಣ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಗಮನಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹಸ್ತವನ್ನು ಮರುಜೋಡಿಸುವ ಸಾಧ್ಯತೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶೇಷಗಿರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿ ಅಥವಾ ಅಕ್ರಮ ಸಂಬಂಧದ ಕಿಚ್ಚು ಹೇಗೆ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಡಿಗೆಬೈಲು ಗ್ರಾಮದಲ್ಲಿ ಈ ಘಟನೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.