
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.13): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮೂಲಭೂತ ಸೌಲಭ್ಯಗಳಿಂದ ಅದೆಷ್ಟೋ ಗ್ರಾಮಗಳು ಇಂದಿಗೂ ಕೂಡ ವಂಚಿತವಾಗಿವೆ. ಸಂಪರ್ಕವಾದ ರಸ್ತೆಗೆ ಆಗ್ರಹಿಸಿ ಸಾಲು ಸಾಲು ಪ್ರತಿಭಟನೆಗಳು, ಧರಣಿ ಸತ್ಯಾಗ್ರಹ ನಡೆಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವನ್ನು ವಹಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎನ್ನವಂತೆ ಗುಂಡಿಮಯವಾಗಿರುವ ರಸ್ತೆಯಿಂದ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಗರ್ಭಿಣಿ ಮಹಿಳೆ ಅರ್ಧ ಗಂಟೆಗಳ ಕಾಲ ನಡು ರಸ್ತೆಯಲ್ಲೇ ನರಳಾಟ ನಡೆಸಿರುವ ಮನಕಲಕುವ ಘಟನೆಗೆ ಸಾಕ್ಷಿ ಆಗಿದೆ.
ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಟ:
ತುಮಕೂರಿನಿಂದ ಬೆಂಗಳೂರಿಗೆ ಗರ್ಭಿಣಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಗರ್ಭಿಣಿಗೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗಿ ಹಸುಗೂಸು ಮೃತಪಟ್ಟು, ಇಹಲೋಕವನ್ನು ತ್ಯಜಿಸಿರುವ ಘಟನೆ ಹಸಿಯಾಗಿರುವ ನಡುವೆಯೇ ರಸ್ತೆ ದುಸ್ಥಿತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲೂ ಗರ್ಭಿಣಿ ಮಹಿಳೆ ನರಳಾಟ ನಡೆಸಿರುವ ಘಟನೆ ನಡೆದಿದೆ.
ತುಂಬು ಗರ್ಭಿಣಿಯನ್ನು ಹೆರಿಗೆಗೆಂದು ನಿನ್ನೆ ಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವಾಗ ಕಳಸ ಟು ಬಾಳೆಹೊನ್ನೂರು ಮಾರ್ಗದ ಹಳುವಳ್ಳಿ ಎಂಬಲ್ಲಿ ಗುಂಡಿಮಯವಾಗಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಮಹಿಳೆ ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಡಿದ್ದಾರೆ. ಮಹಿಳೆಯ ಸ್ಥಿತಿಯನ್ನು ಕಂಡು ಅದೇ ದಾರಿಯಲ್ಲೇ ಪ್ರಯಾಣ ಮಾಡುತ್ತಿದ್ದ ಸಹಪ್ರಯಾಣಿಕರ ಕಾರಿನಲ್ಲಿ ಬಾಳೆಹೊನ್ನೂರಿನ ತನಕ ಡ್ರಾಪ್ ಮಾಡಿಲಾಯಿತು. ತದನಂತರ ಬಾಳೆಹೊನ್ನೂರಿನಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ತರಿಸಿ ಗರ್ಭಿಣಿಯನ್ನು ಕೊಪ್ಪಕ್ಕೆ ಕಳಿಸಲಾಯಿತು.ರಸ್ತೆ ದುಸ್ಥಿತಿಯಿಂದ ಮಹಿಳೆ ಪ್ರಾಣಾಪಯದ ಸ್ಥಿತಿಗೂ ಕೂಡ ತಲುಪಿದ್ದರು. ಇದನ್ನು ಕಣ್ಣಾರೆ ಕಂಡ ಸ್ಥಳೀಯರು ಹಾಗೂ ಕುಟುಂಬ ವರ್ಗದಲ್ಲಿ ಹೆಚ್ಚಿನ ಆತಂಕ ಉಂಟಾಗಿತ್ತು.
ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ:
ಬಾಳೆಹೊನ್ನೂರು ಸಮೀಪದ ಮಾಗುಂಡಿಯ 26 ವರ್ಷದ ಶರಣ್ಯ ಎನ್ನುವ ಮಹಿಳೆಯನ್ನು ಹೆರಿಗೆಗೆಂದು ಕೊಪ್ಪದ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ನಲ್ಲಿ ನಿನ್ನೆ ಮಧ್ಯಾಹ್ನ ಕರೆದೊಯ್ಯಲಾಗುತ್ತಿತ್ತು. ಕಳಸ ಟು ಬಾಳೆಹೊನ್ನೂರು ಸಮೀಪದ ಹಳುವಳ್ಳಿ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ಇಳಿದ ಆಂಬ್ಯುಲೆನ್ಸ್ ಮೇಲಕ್ಕೆ ಹತ್ತಿಲ್ಲ. ಗುಂಡಿಗೆ ಇಳಿದ ರಭಸಕ್ಕೆ ವಾಹನದ ಆಕ್ಸೆಲ್ ರಾಡ್ ತುಂಡಾಗಿದೆ. ದುರಸ್ತಿಗಾಗಿ ಆಂಬ್ಯುಲೆನ್ಸ್ ಅನ್ನು ಕಳಸಕ್ಕೆ ಎಳೆದು ತಂದು ತಕ್ಕ ಮಟ್ಟಿಗೆ ಮಾಡಿಸಿಕೊಂಡು ಮತ್ತೆ ಪ್ರಯಾಣ ರಿಪೇರಿ ಆರಂಭಿಸುವಷ್ಟರಲ್ಲಿ ಒಂದು ಗಂಟೆ ಕಳೆದಿದೆ. ರಿಪೇರಿಯಾದ ವಾಹನ ಸ್ವಲ್ಪ ದೂರ ಸಾಗುತ್ತಿದ್ದಂತೆ ಕಳಸದಲ್ಲೇ ಮತ್ತೆ ಕೆಟ್ಟುನಿಂತಿದೆ. ಕೊನೆಗೆ ಗರ್ಭಿಣಿಯನ್ನು ಬಾಳೆಹೊನ್ನೂರಿನಲ್ಲಿ ಮತ್ತೋಂದು ಆಂಬ್ಯುಲೆನ್ಸ್ ಕರೆಸಿ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಆಂಬ್ಯುಲೆನ್ಸ್ ನಲ್ಲಿ ಕೊಪ್ಪ ತಾಲ್ಲೂಕಿನ ಆಸ್ಪತ್ರೆಗೆ ದಾಖಲು ಮಾಡಿದ ತಕ್ಷಣ ಮಹಿಳೆಗೆ ವೈದ್ಯರುಸೂಕ್ತ ಚಿಕಿತ್ಸೆ ನೀಡಿದರು. ಇದರ ಪರಿಣಾಮ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದು ತಾಯಿ, ಮಗು ಆರೋಗ್ಯವಾಗಿದ್ದಾರೆ.
ತುಮಕೂರಿನಲ್ಲಿ ಚಿಕಿತ್ಸೆಗಾಗಿ ಪರದಾಡಿದ ಗರ್ಭಿಣಿ, ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಹೆರಿಗೆ, ಮಗು ಸಾವು
ಗುಂಡಿಮಯ ರಸ್ತೆಯಲ್ಲಿ ಜನರ ಪರದಾಟ:
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ರಸ್ತೆಯಗಳು ಗುಂಡಿಮಯವಾಗಿದ್ದು ಜನರ ನಿತ್ಯವೂ ಪರದಾಟ ನಡೆಸುವ ಸ್ಥಿತಿಗೆ ಬಂದಿದೆ. ಅದರಲ್ಲೂ ಹೊರನಾಡು, ಕುದುರೆಮುಖಕ್ಕೆ ತೆರಳುವ ಪ್ರವಾಸಿಗರು, ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನದಿಗೆ ತೆರಳುವ ಭಕ್ತರು ಹಿಡಿ ಶಾಪಹಾಕುವ ಮಟ್ಟಿಗೆ ರಸ್ತೆ ದುಸ್ಥಿತಿಗೆ ತಲುಪಿದೆ. ಕನಿಷ್ಟಪಕ್ಷ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚುವಂತೆ ಕೆಲಸಕ್ಕೂ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ,ಇದರ ಪರಿಣಾಮ ನಿತ್ಯವೂ ಇದೇ ರಸ್ತೆಯಲ್ಲಿ ಸಂಚಾರಿಸುವ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ವಾಟ್ಸಾಪ್ ಕಾಲ್ ನೆರವಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು..!
ಕಳಸದಿಂದ ಬಾಳೆಹೊನ್ನೂರು ಮತ್ತು ಕಳಸ- ಕುದುರೆಮುಖ - ಎಸ್.ಕೆ. ಬಾರ್ಡರ್ ಹೋಗುವ ರಸ್ತೆಯ ದುಸ್ಥಿತಿ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಕೇವಲ 12 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚಿನ ಸಮಯ ಬೇಕಿದೆ.ರಸ್ತೆ ದುಸ್ಥಿತಿಯಿಂದ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮವಾಗಿ ಮಹಿಳೆ ಎರಡು ಗಂಟೆಗೂ ಹೆಚ್ಚುಕಾಲ ಕೆಟ್ಟುನಿಂತ ವಾಹನದಲ್ಲೇ ನರಳಾಡಿದ್ದಾರೆ.ಸರ್ಕಾರ, ಜಿಲ್ಲಾಡಳಿತ ,ಜನಪ್ರತಿನಿಧಿಗಳು ಉತ್ಸವಗಳನ್ನು ಮಾಡುವಲ್ಲಿ ತೋರಿಸುವ ಆಸಕ್ತಿಯನ್ನು ಕನಿಷ್ಠ ಪಕ್ಷ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದರೆ ಇಂಥ ಸಮಸ್ಯೆಗಳಿಂದ ಮುಕ್ತಿ ಆದ್ರೂ ಕಾಣಬಹುದು ಎನ್ನುವುದು ಜನರ ಆಗ್ರಹವಾಗಿದೆ.