
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.27): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇದೀಗ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ತಂತ್ರದ ಮೂಲಕ ವಂಚಕರು ಮತ್ತೊಮ್ಮೆ ದೊಡ್ಡ ಮಟ್ಟದ ಮೋಸ ನಡೆಸಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ ನಿವಾಸಿ 71 ವರ್ಷದ ಎ.ಆರ್. ಲೋಕೇಶಪ್ಪ ಅವರು ಈ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 15ರ ಬೆಳಿಗ್ಗೆ ಇವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ.ವೃದ್ದನಿಗೆ 'ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ' ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ಬಳಿಕ ಇನ್ನೂ ಹಲವಾರು ಸಂಖ್ಯೆಯಿಂದ ಕರೆ ಮಾಡಿ, ಲೋಕೇಶಪ್ಪ ಅವರಿಗೆ ಮನೋಭಾವದ ಒತ್ತಡ ತಂದಿದ್ದಾರೆ.ವಂಚಕರು 'ನೀವು ಒಂದು ಕೊಠಡಿಯಿಂದ ಹೊರಗೆ ಬರಬಾರದು, ಯಾರೊಂದಿಗೂ ಮಾತನಾಡಬಾರದು' ಎಂದು ಸೂಚನೆ ನೀಡಿ, ಮಾನಸಿಕವಾಗಿ ಒಂಟಿಯಾಗುವಂತೆ ಮಾಡಿ ವಂಚಿಸಿದ್ದಾರೆ.
ಪರಿಶೀಲನೆ ಮುಗಿಯುವವರೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು’ ಎಂದು ನಂಬಿಸಲಾಗಿದೆ. ಸರ್ಕಾರದ ಸಂಸ್ಥೆಯ ಹೆಸರನ್ನು ಬಳಸಿಕೊಂಡು ವಿಶ್ವಾಸ ಮೂಡಿಸುವ ಮೂಲಕ ವಂಚನೆ ನಡೆದಿದೆ.ಈ ಮಾತುಗಳನ್ನು ನಂಬಿದ ಲೋಕೇಶಪ್ಪ ಅವರು ಹಂತ ಹಂತವಾಗಿ ಒಟ್ಟು 48 ಲಕ್ಷ 50 ಸಾವಿರ ರೂಪಾಯಿಯನ್ನು ವಂಚಕರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನ ಬಂದು ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ, ತಾವು ‘ಡಿಜಿಟಲ್ ಅರೆಸ್ಟ್’ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ.ಪ್ರಸ್ತುತ, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ.