'ಯಾಕಪ್ಪ ಹೊಡೆಯುತ್ತಿದ್ದೀರಿ...' ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!

Published : Mar 27, 2026, 01:39 PM IST
Pre Wedding Shoot Turns Violent Locals Attack Photographer at Sakleshpur Bettada Bhairaveshwara Temple

ಸಾರಾಂಶ

ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು, ಗಲಾಟೆ ತಾರಕಕ್ಕೇರಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹಾಸನ (ಮಾ. 27): ಪ್ರವಾಸಕ್ಕೆ ಬಂದು ಫೋಟೋ ಶೂಟಿಂಗ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಕೆಲವು ಪುಂಡರು ವಿನಾಕಾರಣ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇಗುಲದ ಆವರಣದಲ್ಲಿ ನಡೆದಿದೆ.

ಪ್ರೀ-ವೆಡ್ಡಿಂಗ್ ಶೂಟ್ ಮಾಡಲು ಬಂದಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರು ಎನ್ನಲಾದ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಸ್ಥಳೀಯ ಪುಂಡರು ಹಲ್ಲೆ ಮಾಡಿದ್ದು ಯಾಕೆ?

ಬೆಳ್ಳಂಬೆಳಗ್ಗೆ ದೇವಸ್ಥಾನದ ಸುಂದರ ಪರಿಸರದಲ್ಲಿ ಫೋಟೋಗ್ರಾಫರ್‌ಗಳು ಪ್ರೀ-ವೆಡ್ಡಿಂಗ್ ಶೂಟಿಂಗ್‌ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಕೆಲವು ಸ್ಥಳೀಯರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ? ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ದೇವಸ್ಥಾನದಲ್ಲಿ ಫೋಟೋ ತೆಗೆಯಲು ಯಾರ ಅನುಮತಿ ಬೇಕು, ಪ್ರವಾಸಕ್ಕೆ ಬಂದಿದ್ದೇವೆ ಫೋಟೋ ತೆಗೆದರೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಫೋಟೋಗ್ರಾಫರ್‌ಗಳ ಮೇಲೆ ಗೂಂಡಾಗಿರಿ

ಮಾತಿನ ಚಕಮಕಿ ತಾರಕಕ್ಕೇರಿದಾಗ ಸ್ಥಳೀಯರು ಎಂದು ಹೇಳಿಕೊಂಡ ಯುವಕರ ಗುಂಪು ಫೋಟೋಗ್ರಾಫರ್‌ಗಳ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. 'ಯಾಕಪ್ಪಾ ಹೊಡೆಯುತ್ತಿದ್ದೀರಿ, ಏನಾಗಿದೆ?' ಎಂದು ಕೇಳಿದರೂ ಫೋಟೋಗ್ರಾಫರ್‌ಗಳಿಗೆ ಮನಬಂದಂತೆ ಥಳಿಸಿದ್ದಾರೆ. ಅವರು ಯಾಕೆ ಹೊಡೆಯುತ್ತಿದ್ದಾರೆಂದೇ ತಿಳಿದಿಲ್ಲ. ಪ್ರಶ್ನಿಸಿದಷ್ಟೂ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಾಣಬಹುದು.

ಶಾಂತಿಯುತವಾಗಿದ್ದ ದೇವಸ್ಥಾನದ ಆವರಣ ಪುಂಡರಿಂದಾಗಿ ಕೆಲಕಾಲ ಪ್ರವಾಸಿಗರಲ್ಲಿ ಆತಂಕ ತರಿಸಿತು. ಪ್ರವಾಸಿಗರ ಮೇಲೆ ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಗೂಂಡಾಗಿರಿ ನಡೆಸುತ್ತಿರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಉಪಕರಣಗಳನ್ನು ಹಾನಿಗೊಳಿಸಲು ಯತ್ನಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ.

ಪೊಲೀಸ್ ಮೆಟ್ಟಿಲೇರಿದ ಪ್ರಕರಣ

ಈ ಗಲಾಟೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡೂ ಕಡೆಯವರು ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವಿನ ಇಂತಹ ಘರ್ಷಣೆಗಳು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರುತ್ತಿವೆ.

PREV
Read more Articles on
click me!

Recommended Stories

5 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆಸ್ಪತ್ರೆ ಮೇಲಿಂದ ಬಿದ್ದು ಸಾವು
ಯಾದಗಿರಿ: ರಸ್ತೆಬದಿ ನವಜಾತ ಗಂಡು ಶಿಶು ಶವಪತ್ತೆ: ತಡರಾತ್ರಿ ಎಸೆದು ಹೋಗಿರುವ ಶಂಕೆ