ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆತಂಕ ಹುಟ್ಟಿಸಿದ್ದ ನಿಗೂಢ ಲಘು ವಿಮಾನ ಹಾರಾಟ, ಕೊನೆಗೂ ಸತ್ಯ ಗೊತ್ತಾಯ್ತು

Published : Feb 14, 2026, 12:54 PM IST
 Chikkamagaluru Mystery Flying Aircraft

ಸಾರಾಂಶ

ಚಿಕ್ಕಮಗಳೂರು ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಹಾರಾಡುತ್ತಿದ್ದ ಲಘು ವಿಮಾನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ಇದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ನಡೆಸುತ್ತಿರುವ ಖನಿಜ ನಿಕ್ಷೇಪ ಪತ್ತೆಯ ವೈಜ್ಞಾನಿಕ ಸಮೀಕ್ಷೆಯಾಗಿದೆ.

ಚಿಕ್ಕಮಗಳೂರು: ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಣಿಸಿಕೊಂಡ ಲಘು ವಿಮಾನ ಹಾರಾಟವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಈ ಹಾರಾಟವು ಯಾವುದೇ ಭದ್ರತಾ ಆತಂಕಕ್ಕೆ ಸಂಬಂಧಪಟ್ಟದ್ದಲ್ಲ; ಸಂಪೂರ್ಣವಾಗಿ ವೈಜ್ಞಾನಿಕ ಉದ್ದೇಶದ ಸಮೀಕ್ಷೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಾರ್ಗದರ್ಶನದಲ್ಲಿ ಮಲೆನಾಡು ಪ್ರದೇಶದಲ್ಲಿ ವಾಯುಗಾಮಿ ಭೂಭೌತಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಯ ಉದ್ದೇಶ ಭೂಗತ ಖನಿಜ ನಿಕ್ಷೇಪಗಳ ಪತ್ತೆ, ಭೂಗರ್ಭ ರಚನೆಯ ಅಧ್ಯಯನ ಹಾಗೂ ಜಲ ಸಂಪನ್ಮೂಲಗಳ ಗುರುತಿಸುವಿಕೆ ಆಗಿದೆ. ಸೆಸ್ನಾ ಕಾರವಾನ್ 208 ಬಿ ಮಾದರಿಯ ವಿಮಾನದ ಮೂಲಕ ವಾಯುಗಾಮಿ ಭೂಭೌತಿಕ ಸಮೀಕ್ಷೆ. ವಿಮಾನದ ಹಿಂಭಾಗದ ಸೂಜಿಯಂತಹ ಸಾಧನವೇ 'ಮ್ಯಾಗ್ನೆಟೋಮೀಟರ್ ಸ್ಟಿಂಗರ್' ಆಗಿದೆ. ​ಆಸ್ಟ್ರೇಲಿಯಾ ಮೂಲದ ಸಂಸ್ಥೆಯ ಉಸ್ತುವಾರಿ, ವಿದೇಶಿ ಪೈಲಟ್‌ಗಳಿಂದ ಕಾರ್ಯಾಚರಣೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸರಿಂದಲೂ ಸ್ಪಷ್ಟನೆ

ಕಳೆದ ಒಂದು ವಾರದಿಂದ ಎನ್.ಆರ್.ಪುರ, ಬಾಳೆಹೊನ್ನೂರು ಸೇರಿದಂತೆ‌ ಜಿಲ್ಲೆಯ ವಿವಿಧ ಭಾಗದಲ್ಲಿ ಲಘು ವಿಮಾನ ಹಾರಾಟ ನಡೆಸುತ್ತಿದ್ದು, ಸ್ಥಳೀಯರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿ ಲಘು ವಿಮಾನ ಖನಿಜ ನಿಕ್ಷೇಪಗಳ ಪತ್ತೆಗೆ ಸರ್ವೇ ನಡೆಸಿದೆ ಎಂದು ತಿಳಿಸಲಾಗಿದೆ.

ಭಾರತೀಯ ಭೂವೈಜ್ಞಾನಿಕ ಏರೋ ಜಿಯೋಫಿಸಿಕಲ್ (ವಾಯುಗಾಮಿ ಭೂಭೌತಿಕ) ಸಮೀಕ್ಷೆಯನ್ನು ಮೆಸರ್ಸ್ ಎಕ್ಸ್ಕ್ಯಾಲಿಬರ್ ಮೆಕ್ಫಾರ್ ಪ್ರೈವೇಟ್ ಕಂಪನಿಯಿಂದ ಖನಿಜ ನಿಕ್ಷೇಪಗಳ ಪ್ರದೇಶ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಮೀಕ್ಷೆ ಜುಲೈ 31ರ ವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕೆಲ ದಿನಗಳಿಂದ ಕಡಿಮೆ ಎತ್ತರದಲ್ಲಿ ವೈಮಾನಿಕ ಹಾರಾಟದ ದೃಶ್ಯ ಗೋಚರಿಸಲಿದೆ. ಈ ಬಗ್ಗೆ ಸಾರ್ವಜನಿಕರಲ್ಲಿನ ಗೊಂದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರಿಂದ ಈ ಸ್ಪಷ್ಟೀಕರಣಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರದಲ್ಲಿ 'ಸ್ವಾಮೀಜಿ'ಗೂ ಬಡ್ತಿ ಭಾಗ್ಯ? ಸರ್ಕಾರಿ ಅಧಿಕಾರಿಗಳ ಮಹಾ ಎಡವಟ್ಟು ಬಯಲು!
ಬೆಂಗಳೂರಿನಲ್ಲಿ ಪಾನಿಪುರಿ ಮಾರಿ, ಹಾಸನದಲ್ಲಿ ಡುಪ್ಲೆಕ್ಸ್‌ ಮನೆ ಕಟ್ಟಿದ್ರು: ಪಾನಿಪುರಿ ನಿಲಯವೆಂದೇ ನಾಮಕರಣ