ಕಾಫಿನಾಡಿನ ಕಾಂಗ್ರೆಸ್ ಆಂತರಿಕ ಕಚ್ಚಾಟ ಬೀದಿಗೆ ಬಂತು; ಶಾಸಕಿ ನಯನಾ ಮೋಟಮ್ಮ ವಿರುದ್ಧ ಹಿರಿಯ ನಾಯಕರ ಬಂಡಾಯ!

Published : Jul 15, 2026, 09:46 PM IST
MLA Nayana Motamma vs Senior Leaders

ಸಾರಾಂಶ

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಒಂದು ಅಮಾನತು ಆದೇಶವು ಆಂತರಿಕ ಕಲಹಕ್ಕೆ ಕಿಡಿ ಹೊತ್ತಿಸಿದೆ. ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಮಾಜಿ ಸಚಿವ ಬಿ.ಬಿ. ನಿಂಗಯ್ಯ ನೇತೃತ್ವದಲ್ಲಿ ಸಭೆ ನಡೆಸಿ, ಶಾಸಕಿಯು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವರದಿ-ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.15): ರಾಜಕೀಯವಾಗಿ ಸದಾ ಹೈವೋಲ್ಟೇಜ್ ಕಣವಾಗಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಾಂಗ್ರೆಸ್ ವಲಯದಲ್ಲಿ ಕಳೆದ ಒಂದು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ತೀವ್ರ ಆಂತರಿಕ ಭಿನ್ನಮತ, ಈಗ ಅಧಿಕೃತವಾಗಿ ಬೀದಿಗೆ ಬಂದು ಬಹಿರಂಗ ಸ್ಫೋಟಗೊಂಡಿದೆ. ಸ್ವಪಕ್ಷದ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧವೇ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ತೀವ್ರ ಅಸಮಾಧಾನ ಹೊರಹಾಕುತ್ತಿರುವುದು ಜಿಲ್ಲಾ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.

ಕಿಡಿ ಹೊತ್ತಿಸಿದ್ದು ಒಂದು ಅಮಾನತು ಆದೇಶ!

ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಅವರು ಇತ್ತೀಚೆಗೆ ಹೋಬಳಿ ಅಧ್ಯಕ್ಷ ಶಂಕರ್ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಪಕ್ಷೀಯವಾಗಿ ಅಮಾನತುಗೊಳಿಸಿದ್ದು ಈ ಇಡೀ ಗಲಾಟೆಗೆ ಪ್ರಮುಖ ಕಿಡಿಯಾಗಿದೆ. ಸುರೇಂದ್ರ ಅವರ ಈ ಸರ್ವಾಧಿಕಾರಿ ಆದೇಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಅವರು ಅಮಾನತು ಆದೇಶವನ್ನು ತಡೆಹಿಡಿದು ರದ್ದುಗೊಳಿಸಿದ್ದರೂ ಸಹ, ತಳಮಟ್ಟದ ಕೈ ಕಾರ್ಯಕರ್ತರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿಲುವುಗಳನ್ನು ಉಗ್ರವಾಗಿ ಖಂಡಿಸಿರುವ ನೂರಾರು ಕಾರ್ಯಕರ್ತರು, ಮೂಡಿಗೆರೆ ಪಟ್ಟಣದ ಕಾಂಗ್ರೆಸ್ ಕಚೇರಿ ಮುಂದೆ ಬೃಹತ್ ಮೌನ ಪ್ರತಿಭಟನೆ ನಡೆಸುವ ಮೂಲಕ ಪಕ್ಷದ ವರಿಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ.

ಶಾಸಕಿ ವಿರುದ್ಧ ಹಿರಿಯ ನಾಯಕರ ಗಂಭೀರ ಆರೋಪ:

ಮೂಡಿಗೆರೆಯ ಸ್ಥಳೀಯ ಮಟ್ಟದಲ್ಲಿ ಹೊತ್ತಿಕೊಂಡ ಈ ಶೀತಲ ಸಮರದ ಕಿಡಿ ಈಗ ಕೇವಲ ತಾಲೂಕಿಗೆ ಸೀಮಿತವಾಗಿರದೆ ಜಿಲ್ಲಾ ಕೇಂದ್ರ ಚಿಕ್ಕಮಗಳೂರು ನಗರಕ್ಕೂ ವ್ಯಾಪಿಸಿದೆ. ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಅತ್ಯಂತ ಪ್ರಮುಖ ಹಾಗೂ ತುರ್ತು ಸಭೆಯೊಂದು ಜರುಗಿದ್ದು, ಇದು ಮುಂದಿನ ರಾಜಕೀಯ ಬಿರುಗಾಳಿಗೆ ಮುನ್ನುಡಿ ಬರೆದಿದೆ. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಅವರ ನೇರ ನೇತೃತ್ವದಲ್ಲಿ ನಡೆದ ಈ ಹೈವೋಲ್ಟೇಜ್ ಸಭೆಯಲ್ಲಿ ತಾಲೂಕಿನ 50ಕ್ಕೂ ಹೆಚ್ಚು ಪ್ರಮುಖ ಕೈ ಮುಖಂಡರು ಹಾಗೂ ಹಿರಿಯ ರಾಜಕಾರಣಿಗಳು ಭಾಗವಹಿಸಿದ್ದರು.

ಈ ಸಭೆಯಲ್ಲಿ ಮಾತನಾಡಿದ ನಾಯಕರು ಕ್ಷೇತ್ರದ ಶಾಸಕಿಯ ವಿರುದ್ಧ ಅತ್ಯಂತ ಗಂಭೀರ ಸ್ವರೂಪದ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 733 ಮತಗಳ ಅತ್ಯಂತ ಅಲ್ಪ ಅಂತರದಿಂದ ಮೊದಲ ಬಾರಿಗೆ ಜಯಗಳಿಸಿರುವ ಶಾಸಕಿ ನಯನಾ ಮೋಟಮ್ಮ ಅವರು, ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಮುಖಂಡರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಯನಾ ಮೋಟಮ್ಮ ಪ್ರತಿಕ್ರಿಯೆ ಏನು?

ಇತ್ತ ತಮ್ಮ ವಿರುದ್ಧ ಸ್ವಪಕ್ಷದ ನಾಯಕರಿಂದಲೇ ಕೇಳಿಬರುತ್ತಿರುವ ಈ ಸಾಲು ಸಾಲು ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾಧ್ಯಮಗಳ ಮುಂದೆ ತೀಕ್ಷ್ಣವಾಗಿ ಹಾಗೂ ರಾಜತಾಂತ್ರಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಮುಖಂಡರು ನನ್ನ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವುದು ಮತ್ತು ಅಪಪ್ರಚಾರ ನಡೆಸುತ್ತಿರುವುದು ನಿಜ. ಆದರೆ ಪಕ್ಷದ ಆಂತರಿಕ ಶಿಸ್ತನ್ನು ಗೌರವಿಸಿ ಈ ಕುರಿತು ಸದ್ಯಕ್ಕೆ ಯಾವುದೇ ವೈಯಕ್ತಿಕ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ನೀಡಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಇಡೀ ವಿದ್ಯಮಾನ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈಗಾಗಲೇ ಜಿಲ್ಲಾಧ್ಯಕ್ಷರ ಗಮನಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರೇ ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಬೇಕು ಅಥವಾ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳ ಮೂಲಕವೇ ಹೈಕಮಾಂಡ್ಗೆ ಇಂಚಿಂಚೂ ವಿಷಯ ತಲುಪಿರುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಮೂಡಿಗೆರೆ ಕಾಂಗ್ರೆಸ್ನಲ್ಲಿ ಸೃಷ್ಟಿಯಾಗಿರುವ ಈ ಬಿರುಗಾಳಿ ಬಹುದೊಡ್ಡ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಿರಿಯ ನಾಯಕರ ಬಂಡಾಯ ಒಂದೆಡೆಯಾದರೆ, ಶಾಸಕಿಯ ಹೈಕಮಾಂಡ್ ನಡೆ ಮತ್ತೊಂದೆಡೆ ತೀವ್ರ ಕುತೂಹಲ ಮೂಡಿಸಿದೆ. ಕೆಪಿಸಿಸಿ ಈ ಭಿನ್ನಮತವನ್ನು ಶಮನಗೊಳಿಸುತ್ತಾ ಅಥವಾ ಕಾಫಿನಾಡ ಕೈ ಪಾಳಯ ಮತ್ತಷ್ಟು ಹೋಳಾಗುತ್ತಾ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

PREV
Read more Articles on
click me!

Recommended Stories

ಧಾರವಾಡ ವೈದ್ಯ ಪತಿ ಕೊಂದ ವೈದ್ಯೆ ಪತ್ನಿ; ರಕ್ತ ಹರಿದು ಒದ್ದಾಡುತ್ತಿದ್ದ ಮಗನ ಪಕ್ಕ ಕೂತು ರೀಲ್ಸ್ ನೋಡ್ತಿದ್ದ ತಾಯಿ!
ಇನ್ನು ಪಾರಸಿಕ ಜೈನರುದ್ಯಾನ ಮಾತ್ರವಲ್ಲ, ಬೌದ್ಧರುದ್ಯಾನವೂ ಕೂಡಾ: ನಾಡಗೀತೆ ಬಗ್ಗೆ ಮಹದೇವಪ್ಪ ಹೇಳಿದ್ದೇನು?