
ಶಿವಮೊಗ್ಗ (ಅ.31): ಚಿಕ್ಕಮಗಳೂರಿನ ಎನ್‌ಆರ್ ಪುರದಲ್ಲಿ ಗೃಹಿಣಿ ಪೂಜಾ ಅನುಮಾನಾಸ್ಪದ ಸಾವಿನ ಬಗ್ಗೆ ಪೂಜಾಳ ತಂದೆ ಈಶ್ವರಪ್ಪ ಅತ್ತೆ-ಮಾವನ ಮನೆಯವರನ್ನೇ ದೂರಿದ್ದಾರೆ. ಈಗಾಗಲೇ ಪೊಲೀಸರು ಪೂಜಾಳ ಪತಿ ಶರತ್‌ನನ್ನು ಬಂಧಿಸಿದ್ದಾರೆ. ಆದರೆ, ಇದಕ್ಕೆ ಮೂಲ ಕಾರಣರಾಗಿರುವ ಶರತ್‌ನ ಅಮ್ಮ ಹಾಗೂ ಅಕ್ಕನನ್ನು ಬಂಧಿಸಬೇಕು ಎಂದು ಈಶ್ವರ್ ಒತ್ತಾಯಿಸಿದ್ದಾರೆ. ನನ್ನ ಮಗಳನ್ನು ಪ್ರೀತಿಯಿಂದ ಮುದ್ದಾಗಿ ಸಾಕಿದ್ದೆ. ಮದುವೆಗೆ ಈ ಸಂಬಂಧ ಬಂದಾಗ ಕುಟುಂಬ ಚೆನ್ನಾಗಿದೆ. ಆಸ್ತಿ, ಮನೆ ಒಳ್ಳೆಯದಿದೆ. ಮಗಳು ಸುಖವಾಗಿರುತ್ತಾಳೆ ಎಂದುಕೊಂಡು ಮದುವೆ ಮಾಡಿಕೊಟ್ಟೆವು. ಆದರೆ, ಹೀಗಾಗಿದೆ. ಈ ರೀತಿ ಸಾಯುತ್ತಾಳೆ ಎಂದು ಗೊತ್ತಿದ್ದರೆ ಆಕೆಯನ್ನು ನಾನು ಹೊಳೆಗೆ ಹಾಕುತ್ತಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರ್, 'ಎರಡು ವರ್ಷದ ಗಂಡು ಮಗು ಇದೆ. ಅವನಿಗೂ ಸ್ವಲ್ಪ ಆರೋಗ್ಯ ಸರಿಯಿಲ್ಲ. ಎದೆಹಾಲು ಕುಡಿಯದೇ ಅವನು ಮಲಗಿದ್ದೇ ಇಲ್ಲ. ತಾಯಿಯ ಬಿಟ್ಟು ಇದ್ದವನೇ ಅಲ್ಲ. ಅವನನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡ್ತೇನೆ. ದೇವರ ಹತ್ತಿರ ಕೇಳಿಕೊಳ್ಳುತ್ತೇನೆ. ಉಳಿಸೋಕೆ ಆದ್ರೆ ಖಂಡಿತಾ ಉಳಿಸ್ತೀನಿ. ಇಲ್ಲ ಅಂದ್ರೆ ಏನೂ ಮಾಡೋಕೆ ಆಗಲ್ಲ. ನಾನು ಅಜ್ಜ ಆಗಿರುವ ಕಾರಣಕ್ಕೆ ಮಗುವನ್ನ ಕರೆದುಕೊಂಡು ಹೋಗ್ತೇನೆ.ಆದಷ್ಟು ಕಾಪಾಡುತ್ತೇನೆ. ಜೀವಕ್ಕಿಂತ ಹೆಚ್ಚಾಗಿ ನನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತೇನೆ. ಆದ್ರೆ ಅವನನ್ನು ಕಾಯೋನು ದೇವರು' ಎಂದು ಮೊಮ್ಮಗನ ಬಗ್ಗೆ ಹೇಳಿದ್ದಾರೆ.
ಆದರೆ ಮೊಮ್ಮಗನ ವಿಚಾರದಲ್ಲೂ ಬಂದು ಆಕೆಯ ಗಂಡನ ಮನೆಯವರು ಮೋಸ ಮಾಡುತ್ತಾರೆ. ಅದಕ್ಕೂ ಹೇಸುವವರಲ್ಲ ಅವರು. ಅದನ್ನು ಆಸ್ಪತ್ರೆಯಲ್ಲೂ ನೋಡಿದ್ದೇವೆ. ಆಸ್ಪತ್ರೆಯಲ್ಲೇ ಇದ್ದೇ ಆಕೆಯ ಸಾವನ್ನ ನಮಗೆ ಮುಚ್ಚಿಟ್ಟಿದ್ದರು. ಅವರ ಇಡೀ ಜೀವನವೇ ಮೋಸ. ಇದೆಲ್ಲವನ್ನೂ ನನ್ನ ಮಗಳು ಸುಧಾರಿಸಿಕೊಂಡು ಹೋಗಿದ್ದಳು. ಸಂಸಾರವನ್ನು ಬಹಳ ಗುಟ್ಟು ಮಾಡಿಕೊಂಡು ಹೋದಳು. ನಾವೂ ಕೂಡ ಆದಷ್ಟು ಸುಧಾರಿಸಿಕೊಂಡು ಹೋಗುವಂತೆ ಹೇಳಿದ್ದೆವು. ಗಂಡ-ಹೆಂಡ್ತಿ ಚೆನ್ನಾಗಿರಬೇಕು ಅನ್ನೋದೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.
ನನ್ನ ಮಗಳನ್ನ ಅವರು ಕೊಂದಿದ್ದಾರೆ. ಇದಕ್ಕೆ ನನಗೆ ನ್ಯಾಯ ಬೇಕು. ಆಕೆ ಎಂಎಸ್‌ಡಬ್ಲ್ಯುವರೆಗೆ ಓದಿದ್ದಾಳೆ. ಇವರಿಗೆ ನನ್ನ ಮಗಳನ್ನು ಕೊಡೋ ಬದಲು ಆಕೆಯನ್ನು ಹೊಳೆಗೆ ಹಾಕಬಹುದಿತ್ತು. ತಪ್ಪು ನಮ್ದೂ ಇದೆ. ಆದ್ರೆ ಯೋಗ. ಅವರು ಬಂದು ಕೇಳಿದರು. ಅನುಕೂಲವಂಥವರು ಆಗಿದ್ದರು. ಆಸ್ತಿ, ಮನೆ ಎಲ್ಲಾ ಇತ್ತು. ಸರಿ ಅಂದ್ಕೊಂಡು ಮದುವೆ ಮಾಡಿ ಕೊಟ್ಟೆವು. ನಾವು ಮದುವೆ ಮಾಡಿಕೊಟ್ಟಿದ್ದು ತಪ್ಪು ಅನ್ನೋದು ಮೂರು ವರ್ಷದೊಳಗೆ ಆತ ತಿಳಿಸಿದ ಎಂದು ತಿಳಿಸಿದ್ದಾರೆ.
ನಾನು ಕೇಳಿಕೊಳ್ಳೋದು ಇಷ್ಟೇ. ಆತನಿಗೆ ತನ್ನ ಮಗ ಅನ್ನೋ ಪ್ರೀತಿಯೇ ಇಲ್ಲ. ಮಗುವಿಗಾದರೂ ಒಂದು ಜೀವನ ಮಾಡಿಕೊಡಿ. ಅವನ ಆರೋಗ್ಯ ಸರಿ ಇಲ್ಲ. ನಿಮಗೆ ಸಾಧ್ಯವಾದರೆ ಅವನಿಗೆ ಏನಾದರೂ ಮಾಡಿ. ಮೊಮ್ಮಗನ ಆರೈಕೆಯನ್ನು ನಾನೇ ಮಾಡುತ್ತಿದ್ದೇನೆ. ಅವನನ್ನು ಅವರು ಕೊಂದು ಬಿಡುತ್ತಾರೆ. ನಿಮ್ಮ ಆಸ್ತಿ-ಪಾಸ್ತಿಯಲ್ಲಿ ಹುಡುಗನಿಗೆ ಏನಾದರೂ ಮಾಡಿ. ನೀವು ಚೆನ್ನಾಗಿರಿ, ನನ್ನ ಮೊಮ್ಮಗನನ್ನು ನೋಡಿಕೊಳ್ಳಿ. ಅವರಿಗೆ ಬೇಕಾಗಿರೋದು ಹಣ ಮಾತ್ರ ಎಂದು ಹೇಳಿದ್ದಾರೆ.
ಶಿವಮೊಗ್ಗ ಮೂಲದ ಪೂಜಾರನ್ನು ಮೂರು ವರ್ಷದ ಹಿಂದೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಆದರೆ, ವಿವಾಹವಾದ ದಿನದಿಂದಲೂ ಆಕೆಗೆ ನಿರಂತರ ಚಿತ್ರಹಿಂಹೆ ನೀಡಿದ್ದರಿಂದ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗಂಡ ಶರತ್ ಮತ್ತು ಆತನ ತಂದೆ, ತಾಯಿ ಹಾಗೂ ಸಹೋದರಿ ಸೇರಿಕೊಂಡು ಮದುವೆಯಾಗಿ ಗಂಡನ ಮನೆ ಸೇರಿದ ದಿನಂದಿಂದಲೆ ಪೂಜಾಳಿಗೆ ದಿನನಿತ್ಯ ಕಿರುಕುಳ ನೀಡಲು ಆರಂಭಿಸಿದ್ದರು.