
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಮಕ್ಕಿ ಹಿನಾರಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆ ಒಂದು ಕುಟುಂಬದ ಬದುಕನ್ನೇ ಕ್ಷಣಾರ್ಧದಲ್ಲಿ ಬೀದಿಗೆ ತಂದಿದೆ.
ಮಳೆ ಜೋರಾಗುತ್ತಿದ್ದಂತೆ ಗ್ರಾಮಸ್ಥರು ಮನೆಯೊಳಗೆ ಮಲಗಿದ್ದರು.ಈ ವೇಳೆ ಏಕಾಏಕಿ ಕೇಳಿಬಂದ ಭಾರೀ ಸದ್ದು ಇಡೀ ಊರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಜನರು ಹೊರಗೆ ಓಡಿ ಬಂದಾಗ ಕಂಡ ದೃಶ್ಯ ನಿಜಕ್ಕೂ ಆತಂಕಕಾರಿ ಆಗಿತ್ತು.
ಗ್ರಾಮದ ವನಜಾಕ್ಷಿ ಅವರ ಮನೆಯ ಮೇಲಕ್ಕೆ ಬೃಹತ್ ಗಾತ್ರದ ಮರವೇ ಉರುಳಿ ಬಿದ್ದಿತ್ತು. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದೆ. ಮನೆಯ ಒಳಭಾಗದ ಸಾಮಗ್ರಿಗಳಿಗೂ ಭಾರೀ ಹಾನಿಯಾಗಿದೆ.
ಘಟನೆ ವೇಳೆ ಕುಟುಂಬಸ್ಥರು ಮನೆಯೊಳಗೇ ಇದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕ್ಷಣಾರ್ಧದಲ್ಲಿ ಮನೆ ಹಾನಿಗೊಳಗಾದ ಪರಿಣಾಮ ಕುಟುಂಬ ಬೀದಿಗೆ ಬರುವಂತಾಗಿದೆ.
ಭಾರೀ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಕುಟುಂಬಕ್ಕೆ ನೆರವಾದರು. ನಂತರ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚಿನ ನಿರಂತರ ಮಳೆಯಿಂದಾಗಿ ಪ್ರದೇಶದ ಅನೇಕ ಮರಗಳು ಅಪಾಯಕರ ಸ್ಥಿತಿಯಲ್ಲಿ ನಿಂತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣ ತೆರವುಗೊಳಿಸಿ, ಹಾನಿಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.