
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.14): ಮಲೆನಾಡಿನ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಹದವಾದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದ್ದರಿಂದ ಅನ್ನದಾತರು ಉತ್ಸಾಹದಿಂದ ಭೂಮಿ ಸಿದ್ಧಪಡಿಸಿಕೊಂಡಿದ್ದರು. ಆದರೆ, ಈ ಸಂತಸ ಈಗ ಬಹಳ ದಿನ ಉಳಿಯಲಿಲ್ಲ. ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಕರಿನೆರಳು ಈಗ ಕಾಫಿನಾಡಿನ ರೈತರ ಬದುಕಿನ ಮೇಲೆ ಬಿದ್ದಿದೆ. ರಸಗೊಬ್ಬರದ ತೀವ್ರ ಅಭಾವ ಮತ್ತು ಬೆಲೆ ಏರಿಕೆಯಿಂದಾಗಿ ರೈತರು ಈಗ ಬೀದಿಗೆ ಬೀಳುವಂತಾಗಿದೆ.
ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಕೇಳಿದರೆ ರೈತರು ದಬಾಯಿಸುವಂತಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿನ ಅಶಾಂತಿಯಿಂದಾಗಿ ಕಚ್ಚಾ ವಸ್ತುಗಳ ಆಮದು ಕುಂಠಿತಗೊಂಡಿದ್ದು, ಇದು ನೇರವಾಗಿ ಗೊಬ್ಬರದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ರಸಗೊಬ್ಬರಗಳ ಬೆಲೆ ಸರಾಸರಿ 300 ರೂಪಾಯಿಗಳಷ್ಟು ಏರಿಕೆಯಾಗಿದೆ. ಅದರಲ್ಲೂ ವಿಶೇಷವಾಗಿ ರೈತರು ಹೆಚ್ಚಾಗಿ ಬಳಸುವ 19:19:19 (ನೈನಂಟೀನಾಲ್) ಗೊಬ್ಬರದ ಬೆಲೆ ಬರೋಬ್ಬರಿ 450 ರೂಪಾಯಿಗಳಷ್ಟು ದುಬಾರಿಯಾಗಿದೆ. ಇದು ರೈತರ ಕೃಷಿ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.
ಬೆಲೆ ಏರಿಕೆಯ ನಡುವೆಯೂ ಗೊಬ್ಬರ ಸಿಕ್ಕಿದ್ದರೆ ರೈತರು ಹೇಗೋ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಬೆಳೆಗಳ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಯೂರಿಯಾ ಗೊಬ್ಬರದ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯೂರಿಯಾ ಇಲ್ಲದಿದ್ದರೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಇಳುವರಿಯೂ ಕಡಿಮೆಯಾಗುತ್ತದೆ. ಈ ಆತಂಕದಲ್ಲಿರುವ ರೈತರು, ಕೈಯಲ್ಲಿ ಹಣವಿದ್ದರೂ ಗೊಬ್ಬರವಿಲ್ಲದೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ.
ಗೊಬ್ಬರಕ್ಕಾಗಿ ರೈತರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಹಳ್ಳಿಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದ ಪಟ್ಟಣಗಳಿಗೆ ಟ್ರ್ಯಾಕ್ಟರ್ ಮತ್ತು ಆಟೋಗಳನ್ನು ಬಾಡಿಗೆಗೆ ಮಾಡಿಕೊಂಡು ಬರುತ್ತಿರುವ ರೈತರು, ದಿನವಿಡೀ ಅಲೆದರೂ ಒಂದು ಚೀಲ ಗೊಬ್ಬರ ಸಿಗದೆ ಬರಿಗೈಲಿ ವಾಪಸ್ ಹೋಗುತ್ತಿದ್ದಾರೆ. 'ಮಳೆ ಬಂದಿದೆ, ಗಿಡಗಳಿಗೆ ಈಗ ಗೊಬ್ಬರ ಹಾಕದಿದ್ದರೆ ಮುಂದೆ ಇಳುವರಿ ಬರುವುದಿಲ್ಲ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕು' ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ರೈತರು ಈಗಾಗಲೇ ಸಾಲದ ಸುಳಿಗೆ ಸಿಲುಕಿದ್ದು, ಈಗ ಗೊಬ್ಬರದ ಅಭಾವ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸರಿಯಾದ ಸಮಯದಲ್ಲಿ ಗೊಬ್ಬರ ಪೂರೈಕೆಯಾಗದಿದ್ದರೆ ರೈತರು ಹಾಕಿದ ಬಂಡವಾಳವೂ ಮಣ್ಣು ಪಾಲಾಗುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ರಸಗೊಬ್ಬರದ ಅಕ್ರಮ ದಾಸ್ತಾನು ತಡೆಯಬೇಕು ಮತ್ತು ರೈತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುವಂತೆ ಮಾಡಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ.