
ಬಾಗಲಕೋಟೆ (ಏ.14): ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಹಸೆಮಣೆ ಏರಲು ಸಜ್ಜಾಗುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಆತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸಂಭವಿಸಿದೆ. ಉದ್ಯೋಗ ಖಾತ್ರಿ (MNREGA) ಯೋಜನೆಯಲ್ಲಿ ಹೊರಗುತ್ತಿಗೆ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಕುಂಬಾರ (28) ಎಂಬುವವರೇ ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ.
ಮುಧೋಳ ನಗರದ ಕಾಂಬಳೆ ಗಲ್ಲಿಯ ಬಾಡಿಗೆ ಮನೆಯಲ್ಲಿ ಬಸವರಾಜ ವಾಸವಾಗಿದ್ದರು. ಇಂದು ಅವರು ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಅವರು ಮನರೆಗಾ ಯೋಜನೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸೌಮ್ಯ ಸ್ವಭಾವದವರಾಗಿದ್ದ ಬಸವರಾಜ ಇಂತಹ ನಿರ್ಧಾರಕ್ಕೆ ಮುಂದಾಗಿದ್ದು ಕುಟುಂಬದವರಿಗೆ ಭಾರಿ ಆಘಾತ ನೀಡಿದೆ.
ಎಲ್ಲಕ್ಕಿಂತ ಹೆಚ್ಚಾಗಿ ನೋವಿನ ಸಂಗತಿಯೆಂದರೆ, ಬಸವರಾಜ ಅವರಿಗೆ ಇದೇ ಏಪ್ರಿಲ್ 28 ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನು ಕೇವಲ 10-12 ದಿನಗಳಷ್ಟೇ ಬಾಕಿ ಉಳಿದಿತ್ತು. ಮನೆಯಲ್ಲಿ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದವು, ಬಂಧು-ಮಿತ್ರರಿಗೆ ಆಮಂತ್ರಣ ಪತ್ರಿಕೆ ಹಂಚುವ ಕೆಲಸ ನಡೆಯುತ್ತಿತ್ತು. ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಾದ ಯುವ ಇಂಜಿನಿಯರ್, ಮದುವೆಗೆ ಮುನ್ನವೇ ಸಾವಿನ ಹಾದಿ ತುಳಿದಿರುವುದು ಹತ್ತಿರದ ಸಂಬಂಧಿಗಳ ಎದೆಯನ್ನು ಸೀಳುವಂತಿದೆ.
ಬಸವರಾಜ ಅವರ ಆತ್ಮ*ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲಸದ ಒತ್ತಡವೇ? ಅಥವಾ ವೈಯಕ್ತಿಕ ಸಮಸ್ಯೆಗಳೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಮುಧೋಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸವರಾಜ ಅವರ ಮೊಬೈಲ್ ಕರೆಗಳ ವಿವರ (CDR) ಮತ್ತು ಅವರ ಕೊನೆಯ ದಿನಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾವಿನ ಮುನ್ನ ಅವರು ಯಾವುದೇ ಡೆತ್ ನೋಟ್ ಬರೆದಿದ್ದಾರೆಯೇ ಎಂಬ ಬಗ್ಗೆಯೂ ಶೋಧ ನಡೆಸಲಾಗುತ್ತಿದೆ.