Chikkamagaluru: ಅನ್ನದಾತರ ಬದುಕು ಬೀದಿಗೆ! ಮಲೆನಾಡಿಗರ ತಾಳ್ಮೆಯನ್ನ ಪರೀಕ್ಷೆ ಮಾಡ್ತಿದ್ಯಾ ಸರ್ಕಾರ?

Published : Nov 26, 2026, 05:19 PM IST
chikkamgaluru farmers

ಸಾರಾಂಶ

ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ತೋಟ ಮತ್ತು ಗದ್ದೆಗಳು ನಾಶವಾಗಿವೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಜನರಲ್ಲಿ ಆತಂಕ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಸರ್ಕಾರ ಮಲೆನಾಡಿಗರ ತಾಳ್ಮೆಯನ್ನ ಪರೀಕ್ಷೆ ಮಾಡ್ತಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ಒಂದೂವರೆ ಎಕರೆ ಗದ್ದೆ ನಾಶ ಮಾಡಿದ್ದ ಕಾಡಾನೆಗಳ ಹಿಂಡು ಇಂದು ಮತ್ತೆ ಮೂರು ಎಕರೆ ಗದ್ದೆ ಹಾಗೂ ತೋಟವನ್ನ ದ್ವಂಸ ಮಾಡಿವೆ. ಆದರೂ, ಸರ್ಕಾರ ಅವುಗಳ ನ್ಯಾಚುರಲ್ ನಡೆ ಬಗ್ಗೆ ಗಮನ ಹರಿಸಿದೆ. ಅವು ಹೋಗ್ತಿಲ್ಲ. ಸರ್ಕಾರ ಸೂಕ್ತ ಕ್ರಮ ಕೈಗೊಳ್ತಿಲ್ಲ. 39 ಕಾಡಾನೆಗಳು 4 ತಂಡಗಳಾಗಿ ಜನರ ನೆಮ್ಮದಿ ಕಸಿದಿವೆ. ಆದ್ರೆ, ಸರ್ಕಾರ ಹಾಗೂ ಆನೆಗಳ ಮಧ್ಯೆ ಮಲೆನಾಡಿಗರು ಹೈರಾಣಾಗದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಒತ್ತಾಯ

ಕಾಫಿನಾಡ ಮೂಡಿಗೆರೆಯಲ್ಲಿ 39 ಕಾಡಾನೆಗಳ ದಾಂದಲೆ ಮಾಡ್ತಿದೆ. ಮೂರು ಎಕರೆ ಗದ್ದೆ ಸಂಪೂರ್ಣ ನಾಶ. ಮೂರು ಎಕರೆ ಕಾಫಿತೋಟವೂ ಹಾಳು. ತೋಟದ ಸ್ಥಿತಿ ಕಂಡು ಕಣ್ಣೀರಿಡ್ತಿರೋ ರೈತ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಆನೆಗಳ ನ್ಯಾಚುರಲ್ ನಡೆ ಅಂತ ಕಾಯ್ತಿದ್ದಾರೆ. ಹೀಗೆ, ತೋಟದ ಮಧ್ಯೆ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುವ ಈತನ ಹೆಸರು ಪ್ರಹ್ಲಾದ್. ಮೂಡಿಗೆರೆ ತಾಲೂಕಿನ ಕಾರ್ಬೈಲು ನಿವಾಸಿ. ಹೃದ್ರೋಗಿಯಾಗಿರುವ ಪ್ರಹ್ಲಾದ್, ಇದೇ ಮೂರು ಎಕರೆ ತೋಟವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಬೇಲೂರು ಭಾಗದಿಂದ ಬಂದ ಕಾಡಾನೆಗಳ ಹಿಂಡು, ರಾತ್ರೋರಾತ್ರಿ ಇವರ ತೋಟಕ್ಕೆ ದಾಳಿ ಇಟ್ಟು ಇಡೀ ತೋಟವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿವೆ.

ಚಿಕ್ಕಮಗಳೂರಲ್ಲಿ ಕಾಡಾನೆಗಳ ದಾಂಧಲೆ

​ವರ್ಷಗಳ ಕಾಲ ಕಷ್ಟಪಟ್ಟು ಮಕ್ಕಳಂತೆ ಬೆಳೆಸಿದ್ದ ಕಾಫಿ ಗಿಡಗಳು ಹಾಗೂ ಕೈಗೆ ಬಂದಿದ್ದ ಫಸಲು ಆನೆಗಳ ತುಳಿತಕ್ಕೆ ಸಿಲುಕಿ ಸರ್ವನಾಶವಾಗಿದೆ. ಬೆಳಗ್ಗೆ ತೋಟಕ್ಕೆ ಬಂದು ಈ ದೃಶ್ಯ ಕಂಡ ಪ್ರಹ್ಲಾದ್ ಆಘಾತಕ್ಕೆ ಒಳಗಾಗಿದ್ದಾರೆ. ತೋಟವೇ ಹೋದ ಮೇಲೆ ನಾನು ಬದುಕಿ ಏನು ಮಾಡಬೇಕು. ನಾನು ಮತ್ತು ನನ್ನ ಹೆಂಡತಿ ಇಲ್ಲೇ ಇರುತ್ತೇವೆ. ನಮ್ಮ ತೋಟವನ್ನು ತುಳಿದಂತೆ ಆನೆಗಳು ಬಂದು ನಮ್ಮನ್ನೂ ತುಳಿದು ಸಾಯಿಸಲಿ ಎಂದು ಹತಾಶೆಯಿಂದ ತೋಟದಲ್ಲೇ ಪಟ್ಟು ಹಿಡಿದು ಕುಳಿತಿದ್ದಾರೆ.

ಮೂಡಿಗೆರೆಯಲ್ಲಿ ಕಾಡಾನೆಗಳ ಹಾವಳಿ

ಇನ್ನು ಅದೇ ಮೂಡಿಗೆರೆಯ ಮಾಕೋನಹಳ್ಳಿಯ ನಾಗಲಾಪುರದ ಸುಪ್ರಿತ್ ಎಂಬುವರ ಮೂರು ಎಕರೆ ಭತ್ತದ ಗದ್ದೆಯನ್ನೂ ಗಜಪಡೆಗಳು ಸರ್ವ ನಾಶ ಮಾಡಿವೆ. ಇನ್ನೇನು ಫಸಲಿಗೆ ಬಂದಿದ್ದ ಭತ್ತ ಹೀಗೆ ನಾಶವಾಗಿರೋದ್ರಿಂದ ರೈತ‌ ಸುಪ್ರಿತ್ ಗದ್ದೆ ಸ್ಥಿತಿ ನೋಡಿ ಕಣ್ಣೀರಿಟ್ಡಿದ್ದಾರೆ. ಇದು ಮೂಡಿಗೆರೆ ಕಥೆಯಾದರೆ ಎನ್.ಆರ್.ಪುರದಲ್ಲೂ ಕಾಡಾನೆ ಹಾವಾಳಿಗೆ ಹಳ್ಳಿಗರು ಕಂಗಾಲಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಭದ್ರಾ ಅಭಯಾರಣ್ಯದ ಅಂಚಿನ ಗ್ರಾಮ ರಾವೂರಿನ ಬಳಿಯೂ ಕಾಡಾನೆಗಳು ಗ್ರಾಮದ ಪಕ್ಕದಲ್ಲೇ ಬೀಡುಬಿಟ್ಟಿದ್ದು ಜನ ಆತಂಕದಲ್ಲೇ ಬದುಕುತ್ತಿದ್ದಾರೆ.

ಮೂಡಿಗೆರೆ ಆನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಓಡಿಸಿದರೆ ಇಂದಿನ ಮೂಡಿಗೆರೆ ಪರಿಸ್ಥಿತಿ ನಾಳೆ‌ ಎನ್.ಆರ್.ಪುರ ತಾಲೂಕಿನಲ್ಲೂ ಇದೇ‌ ಸಮಸ್ಯೆ ಆಗುತ್ತೆ ಅಂತ ಮಲೆನಾಡಿಗರು ಬೇಲೂರಿನ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವುದಕ್ಕೆ ವಿರೋಧಿಸುತ್ತಿದ್ದಾರೆ. ಹಾಗಾಗಿ, ಇಂದು ಎನ್.ಆರ್.ಪುರ ತಾಲೂಕಿನ ಕಡಬಗೆರೆಯಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಒಟ್ಟಾರೆ, ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದಾಗಿ ರೈತರು ಮತ್ತು ಸಾರ್ವಜನಿಕರು ಕ್ರಮೇಣ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅನ್ನದಾತರ ಬದುಕು ಬೀದಿಗೆ ಬೀಳುತ್ತಿದ್ದರೂ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಾ ದಿನದೂಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಸರ್ಕಾರ ಕಾಡಾನೆಗಳನ್ನ ತತ್ಕೊಳ ಹಾಗೂ ಸಾರಗೋಡು ಅರಣ್ಯಕ್ಕೋ ಅಥವ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಮುಂದಾದರೆ ಮಲೆನಾಡಿಗರ ಹೋರಾಟವನ್ನ ಸರ್ಕಾರ ಊಹಿಸೋದಕ್ಕೂ ಸಾಧ್ಯವಿಲ್ಲ. (ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)

PREV
Read more Articles on
click me!

Recommended Stories

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನದ ಸ್ಮಗ್ಲಿಂಗ್, ಶೌಚಾಲಯದಲ್ಲಿ ಅಡಗಿಸಿಟ್ಟ 1.65 ಕೆಜಿ ಚಿನ್ನದ ಪೇಸ್ಟ್ ಪತ್ತೆ!
ಒಬ್ಬರು ಕಸಬ್‌ನನ್ನು ಜೀವಂತ ಹಿಡಿದರು, ಇನ್ನೊಬ್ಬರು ಸಾಕ್ಷಿ ಸೆರೆಹಿಡಿದರು; 26/11ರಲ್ಲಿ ನಾಗಪ್ಪ, ಪ್ರಭು ಸಾಹಸ!