ಕಂಠಪೂರ್ತಿ ಎಣ್ಣೆ ಹಾಕಿ KSRTC ಬಸ್ ಅಡ್ಡಗಟ್ಟಿದ ರೌಡಿಗಳು; ಕಥೆ ಮುಗೀತು ಅನ್ಕೊಂಡ್ರೆ ಸೆಲ್ಫಿ ಕ್ಲಿಕ್ಕಿಸಿ ಎಸ್ಕೇಪ್!

Published : Apr 24, 2026, 03:22 PM IST
Chikkamagaluru KSRTC Bus selfie

ಸಾರಾಂಶ

ಚಿಕ್ಕಮಗಳೂರಿನಲ್ಲಿ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿದ್ದ ಕಿಡಿಗೇಡಿಗಳು ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ ಚಾಲಕನಿಗೆ ಧಮಕಿ ಹಾಕಿದ್ದಾರೆ. ಬಸ್ಸಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ ಮೆರೆದಿದ್ದು,  ಪ್ರಯಾಣಿಕರು ಭಯಭೀತರಾಗಿದ್ದಾರೆ. ಈ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು (ಏ.24): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಿಡಿಗೇಡಿಗಳ ದಾಂಧಲೆ ಮಿತಿಮೀರಿದೆ. ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇವೆಂಬ ಪ್ರಜ್ಞೆಯೂ ಇಲ್ಲದ ಕೆಲವು ಪುಂಡರು, ಮಧ್ಯರಾತ್ರಿ ರಸ್ತೆ ಮಧ್ಯೆಯೇ ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ, ಚಾಲಕನಿಗೆ ಧಮಕಿ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಅಸಹ್ಯಕರ ಘಟನೆ ನಡೆದಿದೆ. ಈ ಕಿಡಿಗೇಡಿಗಳ ವರ್ತನೆಯಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಆತಂಕದಲ್ಲೇ ಕಾಲ ಕಳೆದಿದ್ದಾರೆ.

ಘಟನೆಯ ವಿವರ:

ಕಳೆದ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಈ ಹೈಡ್ರಾಮಾ ನಡೆದಿದೆ. ಕಡೂರಿನಿಂದ ಚಿಕ್ಕಮಗಳೂರು ನಗರದ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ಸನ್ನು ನಗರದ ದಂಟರಮಕ್ಕಿ ಸರ್ಕಲ್ ಸಮೀಪದ 'ಟೆಂಡರ್ ಚಿಕನ್' ಮಳಿಗೆಯ ಬಳಿ ಆಟೋದಲ್ಲಿ ಬಂದ ಕುಡುಕರು ತಡೆದಿದ್ದಾರೆ. ತಮ್ಮ ಆಟೋವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಈ ಕಿಡಿಗೇಡಿಗಳು, ಬಸ್ ಸಂಚಾರಕ್ಕೆ ಸಂಪೂರ್ಣ ಅಡ್ಡಿಪಡಿಸಿದ್ದಾರೆ.

ಚಾಲಕನಿಗೆ ದರ್ಪ, ಸೆಲ್ಫಿ ವಿಕೃತಿ:

ರಸ್ತೆ ಬಿಡುವಂತೆ ಬಸ್ ಚಾಲಕ ವಿನಂತಿಸಿದರೂ ಕಿವಿಗೊಡದ ಈ ಕುಡುಕರು, ಚಾಲಕನ ಮೇಲೆಯೇ ದರ್ಪ ತೋರಿದ್ದಾರೆ. ಅಷ್ಟಕ್ಕೇ ನಿಲ್ಲದ ಇವರ ವಿಕೃತಿ, ಬಸ್ಸಿನ ಮುಂಭಾಗದಲ್ಲಿ ನಿಂತು ಫೋಸು ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿದ್ದಾರೆ. ಬಸ್ಸು ಅಡ್ಡಗಟ್ಟಿ ಗೂಂಡಾಗಿರಿ ನಡೆಸುತ್ತಾ, ಅದನ್ನು ಸಂಭ್ರಮದಂತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇವರ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತಂಕಕ್ಕೊಳಗಾದ ಪ್ರಯಾಣಿಕರು:

ಮಧ್ಯರಾತ್ರಿ ನಿರ್ಜನ ಪ್ರದೇಶದಂತಿದ್ದ ರಸ್ತೆಯಲ್ಲಿ ಕಿಡಿಗೇಡಿಗಳ ಅಬ್ಬರ ಕಂಡು ಬಸ್ಸಿನಲ್ಲಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಕಿಡಿಗೇಡಿಗಳ ಈ ಗೂಂಡಾಗಿರಿಯನ್ನು ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಪೊಲೀಸರ ವಿರುದ್ಧವೂ ಕಿಡಿಕಾರುತ್ತಿದ್ದಾರೆ. "ನಗರದ ಮಧ್ಯಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಸಾಮಾನ್ಯ ಜನರ ಸುರಕ್ಷತೆಯ ಗತಿಯೇನು?" ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಪೊಲೀಸ್ ಕ್ರಮಕ್ಕೆ ಒತ್ತಾಯ:

ಈ ಘಟನೆಯು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಮಾತ್ರವಲ್ಲದೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಈ ಕಿಡಿಗೇಡಿಗಳನ್ನು ಕೂಡಲೇ ಪತ್ತೆಹಚ್ಚಿ ಕಾನೂನಿನ ಪಾಠ ಕಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಧ್ಯರಾತ್ರಿ ಗಸ್ತು ತಿರುಗುವ ಪೊಲೀಸರು ಇಂತಹ ಪುಂಡರ ಮೇಲೆ ಹದ್ದಿನ ಕಣ್ಣಿಡಬೇಕು ಮತ್ತು ದಂಟರಮಕ್ಕಿ ಸರ್ಕಲ್ ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.

PREV
Read more Articles on
click me!

Recommended Stories

TCS 10K ಓಟ: ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ, ಭಾನುವಾರ ಬೆಳಗ್ಗೆ 3 ಗಂಟೆಯಿಂದಲೇ ರೈಲು ಸಂಚಾರ
ಚಿಕ್ಕಮಗಳೂರು 9 ಎಕರೆ ಸರ್ಕಾರಿ ಜಮೀನು ಅಕ್ರಮ ಮಂಜೂರು; ಮೃತ ನಿವೃತ್ತ ತಹಶೀಲ್ದಾರ್ ಸೇರಿ ನಾಲ್ವರ ವಿರುದ್ಧ FIR!