
ಬೆಂಗಳೂರು ನಗರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ TCS World 10K Bengaluru ಓಟದ ಪ್ರಯುಕ್ತ, ಭಾನುವಾರ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತಿದೆ. ಸಾಮಾನ್ಯವಾಗಿ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಮೆಟ್ರೋ ಸೇವೆಯನ್ನು ಈ ಬಾರಿ ಮುಂಜಾನೆಲೇ ಪ್ರಾರಂಭಿಸಲು ಬೆಂಗಳೂರು ಮೆಟ್ರೋ ನಿಗಮ (Bangalore Metro Rail Corporation Limited) ನಿರ್ಧರಿಸಿದೆ.
ನಗರದ ಹೃದಯಭಾಗವಾದ ಫೀಲ್ಡ್ ಮಾರ್ಷೆಲ್ ಮಾಣಿಕ್ ಶಾ ಪೆರೇಡ್ ಗ್ರೌಂಡ್ ನಲ್ಲಿ ಆರಂಭವಾಗಲಿರುವ ಈ ಮ್ಯಾರಥಾನ್ ಓಟದಲ್ಲಿ ಸಾವಿರಾರು ಓಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಅವರ ಅನುಕೂಲಕ್ಕಾಗಿ ನಾಲ್ಕೂ ದಿಕ್ಕುಗಳಿಂದ ಮೆಟ್ರೋ ರೈಲುಗಳ ಸಂಚಾರವನ್ನು ಮುಂಜಾನೆ 3 ಗಂಟೆಯಿಂದಲೇ ಆರಂಭಿಸಲಾಗುತ್ತಿದೆ.
ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿಯ ಪ್ರಕಾರ, ಬೊಮ್ಮಸಂದ್ರ ನಿಲ್ದಾಣದಿಂದ ಮೊದಲ ರೈಲು ಮುಂಜಾನೆ 3 ಗಂಟೆಗೆ ಹೊರಡಲಿದ್ದು, ಮಾದಾವರದಿಂದ 3.20ಕ್ಕೆ ಸೇವೆ ಪ್ರಾರಂಭವಾಗುತ್ತದೆ. ಇದೇ ವೇಳೆ ರೇಷ್ಮೆ ಸಂಸ್ಥೆ (ಸಿಲ್ಕ್ ಇನ್‌ಸ್ಟಿಟ್ಯೂಟ್) ಹಾಗೂ ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ 3.30ಕ್ಕೆ ರೈಲುಗಳು ಸಂಚರಿಸಲಿವೆ. ಚಲ್ಲಘಟ್ಟ ನಿಲ್ದಾಣದಿಂದ 3.35ಕ್ಕೆ ಮೊದಲ ಮೆಟ್ರೋ ರೈಲು ಹೊರಡುವಂತೆ ವೇಳಾಪಟ್ಟಿ ರೂಪಿಸಲಾಗಿದೆ.
ಪ್ರಯಾಣಿಕರ ಹೆಚ್ಚಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಸೇವೆ ಆರಂಭವಾದ ಮೊದಲ ಒಂದು ಗಂಟೆಯಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳನ್ನು ಓಡಿಸಲಾಗುತ್ತದೆ. ನಂತರ ಬೆಳಗ್ಗೆ 7 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದ್ದು, 7 ಗಂಟೆಯ ನಂತರ ಸಾಮಾನ್ಯ ವೇಳಾಪಟ್ಟಿಯಂತೆ ಮೆಟ್ರೋ ಸೇವೆ ಮುಂದುವರಿಯುತ್ತದೆ.
ಈ ವಿಶೇಷ ವ್ಯವಸ್ಥೆಯಿಂದ ಓಟದಲ್ಲಿ ಭಾಗವಹಿಸುವವರು ಮಾತ್ರವಲ್ಲದೆ, ನಗರದಲ್ಲಿನ ಇತರ ಪ್ರಯಾಣಿಕರೂ ಸಹ ಸುಗಮವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ. ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸೇವೆ, ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.