ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರ: 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

By Govindaraj S  |  First Published Jul 5, 2022, 9:34 PM IST

ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.05): ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.

Tap to resize

Latest Videos

ಮುಂದುವರೆದ ಮಳೆ ಅಬ್ಬರ: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಮಲೆನಾಡು ಭಾಗದಲ್ಲಿ ಹರಿಯುವ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ. ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ. ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಪದೇ ಪದೇ ಭದ್ರಾನದಿ ನೀರಿನಲ್ಲಿ ಮುಳುಗುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಶೃಂಗೇರಿ ಶಾರದಾ ದೇವಸ್ಥಾನ ಬಳಿ ಹರಿಯುವ ತುಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಡ ರಾತ್ರಿಯಿಡಿ ಸುರಿದ ಬಾರೀ ಮಳೆಗೆ ನದಿ ನೀರು ಶಾರದಾ ದೇವಸ್ಥಾನಕ್ಕೆ ತೆರಳುವ ಸಿಮೆಂಟ್ ರಸ್ತೆವರೆಗೂ ನೀರು ನಿಂತಿತ್ತು. 

ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

ಮಧ್ಯಾಹ್ನದ ವೇಳೆಗೆ ನೀರು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಹೇಮಾವತಿ ಮತ್ತು ಸೋಮಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು, ತರೀಕೆರೆ ಭಾಗದಲ್ಲೂ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾದ್ಯಂತ ಮೋಡಕವಿದ ವಾತವರಣ ಮುಂದುವರೆದಿದೆ. ಭಾರೀ ಗಾಳಿ ಮಳೆಯಿಂದ ಕಳಸ ತಾಲ್ಲೂಕು ಹೆಮ್ಮಕ್ಕಿ ಗ್ರಾಮದ ಕೂಲಿ ಕಾರ್ಮಿಕ ಕ್ಲೆಮೆಂಟ್ ಡಿಸೋಜ ಅವರ ಮನೆಮೇಲೆ ಬೆಳಗಿನ ಜಾವ ಮರಬಿದ್ದು ಮನೆ ಜಖಂಗೊಂಡಿದೆ. ಮನೆಯಲ್ಲಿ ಮಲಗಿದ್ದ ದಂಪತಿಗಳು ಮತ್ತು ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಮಲೆನಾಡಿನ ಶಾಲೆಗಳಿಗೆ ರಜೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಇಂದು ಕೂಡ ಜೋರಾಗಿದೆ. ಬೆಳಿಗ್ಗೆನಿಂದಲೂ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಮಲೆನಾಡಿನ ಆರು ತಾಲ್ಲೂಕಿಗಳ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಚಿಕ್ಕಮಗಳೂರು (ಅಂಬಳೆ ಹಾಗೂ ಲಕ್ಯಾ ಹೋಬಳಿ ಹೊರತು ಪಡಿಸಿ), ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಹಾಗೂ ಎನ್.ಆರ್ ಪುರ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ಜುಲೈ 6 ರಿಂದ 9ರವರೆಗೆ ರಜೆ ಘೊಷಿಸಲಾಗಿದೆ.

ಬಾಲಕಿ ಪತ್ತೆಗೆ ಮುಂದುವರಿದ ಶೋಧ: ತಾಲ್ಲೂಕಿನ ತೊಗರಿಹಂಕಲ್ ಸುತ್ತಮುತ್ತ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಬಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಸುಪ್ರಿತಾಳ ಪತ್ತೆಗಾಗಿ ಇಂದು ಕೂಡ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕದಳ ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು 6 ತಂಡಗಳಲ್ಲಿ ಹಾಗೂ ಸ್ಥಳೀಯ ಗ್ರಾಮಸ್ಥರು ಸಹಕಾರದಲ್ಲಿ ಬಾಲಕಿ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೊಳೆ ಹಾದಿಯ ಕೆಲವು ಪ್ರದೇಶದಲ್ಲಿ ಹಗ್ಗದ ಸಹಾಯದಿಂದ ಹರಸಾಹಸ ಪಟ್ಟು ಶೋಧ ಕಾರ್ಯ ನಡೆಸಿದರೂ ಬಾಲಕಿಯ ಕುರುಹು ಸಿಗಿಲ್ಲ. ಬಾಲಕಿ ಪತ್ತೆಯಾಗದ ಕಾರಣ ಪಾಲಕರಾದ ವರದ ಎಸ್ಟೇಟ್ ರೈಟರ್ ಆಂಡ್ರೀವ್ ತಾಯಿ ಗೌರಿಯವರಲ್ಲಿ ಆತಂಕ ಎದುರಾಗಿ ಕಣ್ಣೀರಿಡುತ್ತಿದ್ದು, ಗ್ರಾಮಸ್ಥರು ಸಮಾದಾನ ಹೇಳುವ ದೃಶ್ಯ ಮನಕಲಕುವಂತಿತ್ತು.

ಜೊತೆಗೆ ವಿದ್ಯಾರ್ಥಿನಿ ನೆನೆದು ಶಿಕ್ಷಕಿ ಹೇಮಾಲತಾ ಕಣ್ಣೀರು ಹಾಕಿದರು. ಒಂದು ವಾರ ಅನ್ಯಾರೋಗ್ಯದ ಹಿನ್ನಲೆಯಲ್ಲಿ ಬಾಲಕಿ ರಜೆ ಹಾಕಿದ್ದಳು, ಸೋಮವಾರ ಶಾಲೆ ಬಂದು ಸಂಜೆ ಮನೆಗೆ ಹೋಗುವಾಗ ಘಟನೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಹೊಸಪೇಟೆಯಿಂದ ಐಯ್ಯನಕೆರೆ ಮಾರ್ಗವಾಗಿ ಮದಗದ ಕೆರೆವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದು, ಬಾಲಕಿ ಪತ್ತೆಯಾಗದ ಕಾರಣ ಮಂದಹಾಸ ಹೊಳೆಯ ಒಂದು ಕಿಮೀ ದೂರದಲ್ಲೆ ತೀವ್ರ ಶೋಧ ಕಾರ್ಯಾಚಣೆಗೆ ಮುಂದಾಗಿದ್ದಾರೆ. ತೊಗರಿಹಂಕಲ್ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೆ ತರಗತಿ ಓದುತ್ತಿದ್ದ  ಸುಪ್ರಿತಾ ಶಾಲೆ ಮುಗಿಸಿಕೊಂಡು ಸಂಜೆ ತನ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ಮನೆಗೆ ತೆರಳುವ ವೇಳೆ ಹೊಸಪೇಟೆ ವರದ ಎಸ್ಟೇಟ್ ಬಳಿ ಮಂದಹಾಸ ಹೊಳೆಯಲ್ಲಿ ನೀರಿನ ಸೆಳೆತಕ್ಕೆ ಬಾಲಕಿ ಕೊಚ್ಚಿ ಹೋಗಿದ್ದಳು. 

ಮಲೆನಾಡಲ್ಲಿ ವರುಣಾರ್ಭಟ: ಹಳ್ಳಕ್ಕೆ ಬಿದ್ದ ಛತ್ರಿ ಹಿಡಿಯಲು ಹೋಗಿ ನೀರುಪಾಲಾದ ಕಂದಮ್ಮ

ನಾಳೆ ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ: ಹೊಸಪೇಟೆ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಭೇಟಿ ನೀಡಿ ಶೋಧ ಕಾರ್ಯವನ್ನು ಪರಿಶೀಲಿಸಿದರು. ವಿದ್ಯಾರ್ಥಿನಿಯ ಕುಟುಂಬಸ್ಥರನ್ನು ಭೇಟಿಯಾದ ಅವರು, ಬಾಲಕಿಯ ಶೋಧ ಕಾರ್ಯಾಚರಣೆಗೆ ಜಿಲ್ಲಾಡಳಿತ ಎಲ್ಲಾ ರೀತಿ ಪ್ರಯತ್ನ ನಡೆಸುತ್ತಿದೆ. ಅಗ್ನಿಶಾಮಕದಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಸ್ಥಳೀಯರು ಹಾಗೂ ಮಂಗಳೂರಿನಿಂದ ನುರಿತ ಈಜುಗಾರರು ಕಾಯಾಚರಣೆಯಲ್ಲಿ ತೊಡಗಿದ್ದಾರೆ. ನಾಳೆ ಸುಮಾರು 25  ಸದಸ್ಯರ ರಾಜ್ಯ ವಿಪತ್ತು ನಿರ್ವಹಣಾ ತಂಡವು ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಕೊಚ್ಚಿ ಹೋಗಿರುವ ಬಾಲಕಿ ಶೋಧ ಕಾರ್ಯದಲ್ಲೂ ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಸಾಥ್ ನೀಡಲಿದ್ದಾರೆ.

click me!