
ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ನಗರದ ಕೋಟೆಕೆರೆಯೊಳಗೆ ಬಿದ್ದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ನಗರದ ಕೋಟೆಕೆರೆ ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಏಕಾಏಕಿ ಟೈರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ವಿದ್ಯುತ್ ದೀಪದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ರಸ್ತೆಯ ಮೇಲೆ ಬಿದ್ದಿದ್ದು, ಬಳಿಕ ಕಾರು ಕೆರೆಯ ಸುರಕ್ಷತೆಗೆ ಅಳವಡಿಸಿದ್ದ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ಅದನ್ನು ಮುರಿದುಕೊಂಡು ಕೋಟೆಕೆರೆಯೊಳಗೆ ಬಿದ್ದಿದೆ.
ಕಾರು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಕಾರಿನಲ್ಲಿದ್ದ ಮೂವರನ್ನು ಸುರಕ್ಷಿತ ವಾಗಿ ಹೊರಕ್ಕೆ ಕರೆತರಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡಿರುವವರನ್ನು ಸ್ಥಳೀಯರು ವಿಚಾರಿಸಿ ನೆರವು ನೀಡಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಿಂದ ಕೆರೆಯೊಳಗೆ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದರು. ಅಪಘಾತದ ಪರಿಣಾಮ ರಸ್ತೆ ಮೇಲೆ ವಿದ್ಯುತ್ ಕಂಬ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಇದೇ ಮಾರ್ಗದಲ್ಲಿ ತೆರಳುತ್ತಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಘಟನೆ ಗಮನಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಪೊಲೀಸರು ಹಾಗೂ ಸ್ಥಳೀಯರಿಂದ ಘಟನೆಯ ವಿವರ ಪಡೆದರು.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.