ಚಿಕ್ಕಮಗಳೂರು: ಅಪಘಾತಕ್ಕೀಡಾದ ಯುವಕನಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು. 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಟ!

Published : May 20, 2026, 12:49 PM IST
Chikkamagaluru Accident Victim Denied Treatment by Hospitals Suffers in Ambulance for 24 Hours

ಸಾರಾಂಶ

ಚಿಕ್ಕಮಗಳೂರಿನಲ್ಲಿ ಅಪಘಾತಕ್ಕೀಡಾದ ಯುವಕನೊಬ್ಬನಿಗೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಚಿಕಿತ್ಸೆ ಸಿಗದೆ 24 ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ನರಳಬೇಕಾಯಿತು. ಚಿಕ್ಕಮಗಳೂರು ಮತ್ತು ಮಂಗಳೂರಿನ ಹಲವು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ ಈ ಘಟನೆ, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆದಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು(ಮೇ.20): ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬನಿಗೆ ಆಸ್ಪತ್ರೆಯಲ್ಲಿ ಬೆಡ್ ಹಾಗೂ ತುರ್ತು ಚಿಕಿತ್ಸೆಗೆ ವೈದ್ಯರು ಸಿಗದ ಹಿನ್ನೆಲೆ ಸುಮಾರು 24 ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ನರಳಾಡಬೇಕಾದ ಆಘಾತಕಾರಿ ಘಟನೆ ಕಾಫಿನಾಡಿನಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಮೇಲೂ ಗಂಭೀರ ಪ್ರಶ್ನೆಗಳು ಎದ್ದಿವೆ.

ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ

ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪ ರವಿ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಆತನನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿ ಮಂಗಳೂರಿನ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಮಂಗಳೂರಿಗೆ ತೆರಳಿದ್ದಾರೆ.

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ

ಮಂಗಳೂರಿಗೆ ತೆರಳಿದ ಕುಟುಂಬ ಅಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಪರಿಸ್ಥಿತಿ ಮತ್ತಷ್ಟು ದುರ್ಭಾಗ್ಯಕರವಾಗಿತ್ತು. ವೆನ್ಲಕ್ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಸರ್ಜನ್ ಲಭ್ಯವಿಲ್ಲ ಎಂದು ಹೇಳಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿಲ್ಲ ಎನ್ನಲಾಗಿದೆ. ಬಳಿಕ ಕುಟುಂಬಸ್ಥರು ಫಾದರ್ ಮುಲ್ಲಾ ಗೆ ತೆರಳಿದರೂ ಅಲ್ಲಿಯೂ ಬೆಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರ ನಂತರ ಮುಕ್ಕಾದಲ್ಲಿರುವ ಶ್ರೀನಿವಾಸ್ ಆಸ್ಪತ್ರೆಗೆ ತೆರಳಿದಾಗ, ಚಿಕಿತ್ಸೆಗಾಗಿ ಮುಂಗಡವಾಗಿ ₹80 ಸಾವಿರ ಹಣ ಠೇವಣಿ ಇಡಬೇಕೆಂದು ಆಸ್ಪತ್ರೆ ಆಡಳಿತ ತಿಳಿಸಿದೆ ಎನ್ನಲಾಗಿದೆ.

ಗಾರೆ ಕೆಲಸ ಮಾಡಿ ಜೀವನ ಸಾಗಿಸುವ ಬಡ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತ ಒದಗಿಸುವುದು ಅಸಾಧ್ಯವಾಗಿದ್ದು, ಕೊನೆಗೆ ಅವರು ಮತ್ತೆ ಆಂಬುಲೆನ್ಸ್‌ನಲ್ಲೇ ಮಗನನ್ನು ಕರೆತಂದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಗ್ರಾಮ ಸಮೀಪ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ಆಂಬುಲೆನ್ಸ್‌ನಲ್ಲೇ ನರಳುತ್ತಿದ್ದ ಯುವಕನನ್ನು ಕಂಡ ಸ್ಥಳೀಯ ಗ್ರಾಮಸ್ಥರು ಕುಟುಂಬಕ್ಕೆ ಧೈರ್ಯ ತುಂಬಿ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಬಳಿಕ ಕುಟುಂಬಸ್ಥರು ಅಲ್ಲಿಗೆ ತೆರಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೆಡಿಕಲ್ ಕಾಲೇಜು ಹೆಸರಿಗಷ್ಟೇನಾ ?

ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ರೋಗಿಗೆ ಬೆಡ್ ಇಲ್ಲ, ಡಾಕ್ಟರ್ ಇಲ್ಲ, ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳು ಇರೋದಾದರೆ ಯಾಕೆ? ಇಂಥ ಪರಿಸ್ಹಿತಿಯಲ್ಲಿ ಬಡವರು, ಸಾಮಾನ್ಯ ಜನರು ಏನು ಮಾಡಬೇಕು? ಇದೇ ವೇಳೆ, ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಇದ್ದರೂ ಗಂಭೀರ ರೋಗಿಗಳನ್ನು ಇನ್ನೂ ಹೊರ ಜಿಲ್ಲೆಗಳ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿರುವುದು ಆರೋಗ್ಯ ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿತೋರಿಸಿದೆ. ಮೆಡಿಕಲ್ ಕಾಲೇಜು ಹೆಸರಿಗಷ್ಟೇನಾ? ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಜನರು ಯಾರನ್ನು ನಂಬಬೇಕು?ಎಂಬ ಆಕ್ರೋಶವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.ಘಟನೆ ಕುರಿತು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಇಂತಹ ದುಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಎಂಎಲ್‌ಸಿ ವಿಶ್ವನಾಥ ವಿರುದ್ಧ ಎಫ್‌ಐಆರ್ ಪ್ರಕರಣ: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಹೇಳಿಕೆ
'Obbru obbru 100 kg edare thuu..' ಲಿಫ್ಟ್‌ ನಲ್ಲಿ ಸಿಲುಕಿದ ಮುಸ್ಲಿಂ ಮಹಿಳೆಗೆ ಅವಮಾನಕಾರಿ ಕಾಮೆಂಟ್‌: KPTCL ನೌಕರಳ ವಿರುದ್ಧ ಕ್ರಮಕ್ಕೆ ಆಗ್ರಹ