ಲವ್ ಮ್ಯಾರೇಜ್ ಮಾಡಿಕೊಂಡ ಮಗಳು, 3 ವರ್ಷಕ್ಕೆ ಮಸಣ ಸೇರಿದಳು: ಅಳಿಯನ ಕೃತ್ಯ ಬಿಚ್ಚಿಟ್ಟ ಮಾವ!

Published : Mar 10, 2026, 06:10 PM IST
Chikkaballapura young women Varalakshmi

ಸಾರಾಂಶ

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ, ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ವರಲಕ್ಷ್ಮಿ ಎಂಬ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಇದು ಆತ್ಮ*ಹತ್ಯೆಯಲ್ಲ, ಎಂದಿರುವ ಯುವತಿಯ ಅಪ್ಪ, ಅಳಿಯನ ಬಗ್ಗೆ ಸ್ಪೋಟಕವೊಂದನ್ನು ಹೇಳಿದ್ದಾರೆ.

ಚಿಕ್ಕಬಳ್ಳಾಪುರ (ಮಾ.10): ಪ್ರೀತಿಸಿ ಮದುವೆಯಾಗಿ ನೂರು ಕಾಲ ಸುಖವಾಗಿ ಬಾಳಬೇಕಿದ್ದ ಆ ಯುವತಿಯ ಬಾಳು, ಮದುವೆಯಾದ ಮೂರೇ ವರ್ಷಕ್ಕೆ ಮಸಣ ಸೇರಿದೆ. ಮಹಿಳಾ ದಿನಾಚರಣೆಯಂದೇ ಸಂಭವಿಸಿರುವ ಈ ಘಟನೆ, ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪೋಷಕರ ವಿರೋಧವನ್ನೂ ಲೆಕ್ಕಿಸದೆ ಹಸೆಮಣೆ ಏರಿದ್ದ ವರಲಕ್ಷ್ಮಿ (25) ಎಂಬಾಕೆ ಗುಡಿಬಂಡೆಯ ಪಾಪಿನಾಯಕನಹಳ್ಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.

ಘಟನೆಯ ಹಿನ್ನೆಲೆ:

ಮೃತ ವರಲಕ್ಷ್ಮಿ ಮತ್ತು ಆರ್. ಚೊಕ್ಕನಹಳ್ಳಿಯ ಗಂಗರಾಜು ಎಂಬುವವರು ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ತಮ್ಮ ಪ್ರೀತಿ ಗೆಲ್ಲಬೇಕೆಂದು ಇಬ್ಬರೂ ಮದುವೆಯಾಗಿದ್ದರು. ಮೊದಮೊದಲು ಅನ್ಯೋನ್ಯವಾಗಿದ್ದ ದಂಪತಿಯ ಬದುಕಿನಲ್ಲಿ ವರದಕ್ಷಿಣೆ ಎಂಬ ಕರಾಳ ನೆರಳು ಬೀರಿತ್ತು. ವರಲಕ್ಷ್ಮಿ ಮೇಲೆ ಪದೇ ಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಗಂಗರಾಜು, ಆಕೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದನು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಆತ್ಮ*ಹತ್ಯೆಯೋ? ಕೊಲೆಯೋ?:

ನಿನ್ನೆ ರಾತ್ರಿ ಗಂಡನ ಮನೆಯಲ್ಲಿ ವರಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಗಂಡನ ಮನೆಯವರು ಇದು ಆತ್ಮ*ಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದರೂ, ಮೃತಳ ಕುಟುಂಬಸ್ಥರು ಇದನ್ನು ಬಲವಾಗಿ ನಿರಾಕರಿಸಿದ್ದಾರೆ. 'ನಮ್ಮ ಮಗಳನ್ನು ವರದಕ್ಷಿಣೆಗಾಗಿ ಕಿರುಕುಳ ನೀಡಿ ಗಂಡನೇ ಕೊಲೆ ಮಾಡಿದ್ದಾನೆ' ಎಂದು ಪೋಷಕರು ಆರೋಪಿಸುತ್ತಿದ್ದು, ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

ಪೊಲೀಸರ ನಡೆಗೆ ಆಕ್ರೋಶ:

ಈ ಪ್ರಕರಣದಲ್ಲಿ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಶವವನ್ನು ಕುಟುಂಬಸ್ಥರಿಗೆ ತೋರಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಬಂಧಿಕರು, ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಆರೋಪಿ ಗಂಗರಾಜು ಹಾಗೂ ಆತನ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಮೃತಳ ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ನ್ಯಾಯಕ್ಕಾಗಿ ಆಗ್ರಹ:

ಪ್ರೀತಿಯ ನಂಬಿಕೆಯನ್ನು ಹೊತ್ತು ಮದುವೆಯಾದ ಯುವತಿಯ ಸಾವು, ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ವರದಕ್ಷಿಣೆ ಪಿಡುಗಿನ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪೋಷಕರ ವಿರೋಧದ ನಡುವೆಯೂ ಬದುಕು ಕಟ್ಟಿಕೊಳ್ಳಲು ಹೋದ ಯುವತಿಯೊಬ್ಬಳು ಇಂತಹ ದುರಂತ ಅಂತ್ಯ ಕಂಡಿರುವುದು ಮನಕಲಕುವಂತಿದೆ. ಪೊಲೀಸರು ಈ ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

PREV
Read more Articles on
click me!

Recommended Stories

ಬರ್ತ್‌ಡೇ ಪಾರ್ಟಿ ಮಾಡ್ಬೇಕು, ಒಂದು ದಿನಕ್ಕೆ ಕಿಂಗ್‌ಫಿಶರ್‌ ಟವರ್‌ ಬಾಡಿಗೆಗೆ ನೀಡಿ ಎಂದು ಮಲ್ಯಗೆ ಕೇಳಿದ ಉದ್ಯಮಿ!
ನಿಮ್ಮ ಸಲುವಾಗಿ ನಾವು ಪ್ರಾರ್ಥಿಸುತ್ತೇವೆ, ನಮ್ಮೊಂದಿಗೆ ನೀವು ಬನ್ನಿ; ಹಳ್ಳಿಗಳಲ್ಲಿ ಯೇಸು ಕ್ರಿಸ್ತನ ಕರಪತ್ರ ಹಂಚಿಕೆ