
ನಾಗಮಂಗಲ (ಅ.02): ನಾಗಮಂಗಲ ಕ್ಷೇತ್ರದಲ್ಲಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿಯವರ ಅಧಿಪತ್ಯ ಸ್ಥಾಪಿಸಲು ಕೈ ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದೇವೆ. ಇದಕ್ಕೆ ಟಿಎಪಿಸಿಎಂಎಸ್ ಚುನಾವಣೆಯೇ ಸಾಕ್ಷಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ ಗುರುವಾರ ಹೇಳಿದರು.
ಟಿಎಪಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಬೆಂಬಲಿತ 12ಮಂದಿಯನ್ನು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಿ, ಸಹಕಾರಿ ಧುರೀಣ ಹಾಗೂ ಮಾಜಿ ಶಾಸಕ ಟಿ.ಎನ್. ಮಾದಪ್ಪಗೌಡರು ಸ್ಥಾಪಿಸಿರುವ ಟಿಎಪಿಸಿಎಂಎಸ್ ಅಂದಿನಿಂದಲೂ ಸಹ ಬಹಳಷ್ಟುಒಳ್ಳೆಯ ಕೆಲಸಗಳನ್ನೇ ಮಾಡಿಕೊಂಡು ಬರುತ್ತಿದ್ದೇವೆ. ಕ್ಷೇತ್ರದ ಶಾಸಕರಿಂದ ಈ ಸಂಸ್ಥೆ ಯಾವುದೇ ಸರ್ಟಿಫಿಕೇಟ್ ಪಡೆಯಬೇಕಿಲ್ಲ ಎಂದು ಶಾಸಕ ಸುರೇಶ್‌ಗೌಡರನ್ನು ಕುಟುಕಿದರು.
RR ನಗರಕ್ಕೆ ಡಿ.ಕೆ. ರವಿ ಪತ್ನಿ ಬದಲು ಅಚ್ಚರಿ ಹೆಸ್ರು: ಕುತೂಹಲ ಕೆರಳಿಸಿದ ಹಿರಿಯ ನಾಯಕರ ಸಭೆ ..
ಟಿಎಪಿಸಿಎಂಎಸ್ ಆಡಳಿತ ಚುಕ್ಕಾಣಿ ಹಿಡಿಯಲು ತಾವು ಏನೆಲ್ಲ ಕಸರತ್ತು ನಡೆಸಿದ್ದೀರಿ, ಸಂಸ್ಥೆಯ ಕಾರ್ಯದರ್ಶಿ ಸೇರಿದಂತೆ ಇಲಾಖೆಯ ಅಧಿಕಾರಿಗಳಿಗೆ ಯಾವ ರೀತಿ ಒತ್ತಡ ಹಾಕಿದ್ದೀರೆಂಬುದು ಗೊತ್ತಿದೆ. ಆದರೆ, ಷೇರುದಾರರು ಕಾಂಗ್ರೆಸ್ ಬೆಂಬಲಿತ ಎಲ್ಲ ಅಭ್ಯರ್ಥಿಗಳ ಪರವಾಗಿ ಮತ ನೀಡುವ ಮೂಲಕ ಚಲುವರಾಯಸ್ವಾಮಿ ಅವರಿಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಚಲುವರಾಯಸ್ವಾಮಿ ಅಧಿಪತ್ಯ ಸ್ಥಾಪಿಸುತ್ತೇವೆ ಎಂದರು.
ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ರಾಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮರಾಯಿ ಗೌಡ, ಮುಖಂಡ ಎಸ್.ಎಂ. ಯದುರಾಜ್, ತಟ್ಟಹಳ್ಳಿ ನರಸಿಂಹಮೂರ್ತಿ, ಕೊಣನೂರು ಹನುಮಂತು, ಎಸ್.ಬಿ. ರಮೇಶ್, ರಾಮಕೃಷ್ಣ, ರವಿಕಾಂತೇಗೌಡ ಸೇರಿದಂತೆ ಹಲವರು ಇದ್ದರು.