3 ತಿಂಗಳಿಂದ ಜನರನ್ನು ಬೆಚ್ಚಿ ಬೀಳಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಬಡೇಸಾಬರ ಪಾಳ್ಯದಲ್ಲಿ ನಡೆದಿದೆ.
ತುಮಕೂರು(ಫೆ.14): 3 ತಿಂಗಳಿಂದ ಜನರನ್ನು ಬೆಚ್ಚಿ ಬೀಳಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಬಡೇಸಾಬರ ಪಾಳ್ಯದಲ್ಲಿ ನಡೆದಿದೆ.
ತಾಲೂಕಿನ ಬಡೇಸಾಬರಪಾಳ್ಯ, ನರುಗನಹಳ್ಳಿ, ಮಾಯಣ್ಣಗೌಡನಪಾಳ್ಯ, ಎ.ಕೆ.ಕಾವಲ…, ಬಾಣಾವರ ಗೇಟ್ ಸೇರಿದಂತೆ ಈ ಭಾಗದ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ತೀವ್ರ ಭಯ ಮೂಡಿಸಿತ್ತು. ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದ ಈ ಭಾಗದ ಜನತೆ ರಸ್ತೆಯಲ್ಲಿ ಅಡ್ಡಲಾಗಿ ಬಂದ ಚಿರತೆಯನ್ನು ಕಂಡು ಭಯ ಭೀತರಾಗಿ ಊರಿಗೆ ತೆರಳದೆ ಮತ್ತೆ ವಾಪಸ್ಸಾಗಿದ್ದ ನಿದರ್ಶನಗಳೂ ಇವೆ.
undefined
ಮಾಂಸ ತಿನ್ನಲು ಬಂದ ನರಭಕ್ಷಕ:
ಈ ಭಾಗದಲ್ಲಿ ಚಿರತೆ ಹಾವಳಿ ಮಿತಿ ಮೀರಿತ್ತು. ಪ್ರತಿ ದಿನವೂ ಒಂದಿಲ್ಲೊಂದು ಅವಾಂತರ ನಡೆಯುತ್ತಲೇ ಇತ್ತು. ಇಂದು ಮೇಕೆ ತಿಂದರೆ, ಮತ್ತೊಂದು ಹಸು ಬಲಿ ಪಡೆಯುತ್ತಿತ್ತು. ನಾಯಿಗಳ ಸಂತತಿಯೂ ನೋಡು ನೋಡುತ್ತಲೇ ಕಡಿಮೆಯಾಗಿ ಬಿಟ್ಟಿತ್ತು. ಇನ್ನು ರಾತ್ರಿ ವೇಳೆ ಜನಸಾಮಾನ್ಯರೂ ಮನೆಯಿಂದ ಹೊರಗೆ ಬರಲು ಹೆದರುವಂತಾಗಿತ್ತು. ಈ ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜನತೆ ಶೀಘ್ರ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಜನಾಗ್ರಹದ ಮೇರೆಗೆ ಬಾಡೇಸಾಬರಪಾಳ್ಯದ ಬಳಿ ಅರಣ್ಯ ಅಧಿಕಾರಿಗಳು ಬೋನ್ ಇಟ್ಟು ಅದರೊಳಗೆ ಮಾಂಸವನ್ನು ಕಟ್ಟಿದ್ದರು. ರಾತ್ರಿ ಆಹಾರ ಅರಸಿ ಬಂದಿರುವ ಚಿರತೆ ಬೋನ್ ಒಳಗೆ ಹೋಗಿ ಸೆರೆ ಸಿಕ್ಕಿದೆ. ಬೋನ್‌ಗೆ ಚಿರತೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ಜನತೆ ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿ ಕುತೂಹಲದಿಂದ ಚಿರತೆಯನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.
ನರಹಂತಕ ಚಿರತೆಯ ಹೈಡ್ರಾಮಕ್ಕೆ ಹೈರಾಣಾಗಿದೆ ಅರಣ್ಯ ಇಲಾಖೆ..!
ಗ್ರಾಮಾಂತರ ಪ್ರದೇಶದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿರುವ ಕುರಿತು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ಶಾಸಕ ಗೌರಿಶಂಕರ್ ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ, ಬೋನಿಗೆ ಬಿದ್ದಿರುವ ಚಿರತೆಯನ್ನು ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಚಿರತೆಯನ್ನು ಬಿಡುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದ ಇಬ್ಬರು ತೆರಳಿ ಖಚಿತಪಡಿಸಿಕೊಳ್ಳಿ. ಇದಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಚಿರತೆ ಬಿಡಲು ಅರಣ್ಯಾಧಿಕಾರಿಗಳ ಜತೆ ಗ್ರಾಮಸ್ಥರು ಹೋಗಿ ಖಚಿತಪಡಿಸಿಕೊಳ್ಳಿ, ಇನ್ನೊಂದೆಡೆ ಕಳೆದ ಹದಿನೈದು ದಿನದಿಂದ ಈ ಭಾಗದಲ್ಲಿ ಚಿರತೆಗಳು ನಿತ್ಯ ಕುರಿ ಹಾಗೂ ಜಾನುವಾರುಗಳನ್ನು ಕೊಂದು ಹಾಕಿದ್ದು, ಅರಣ್ಯ ಇಲಾಖೆ ವತಿಯಿಂದ ಪೂರಕವಾದ ಪರಿಹಾರದ ವ್ಯವಸ್ಥೆಯನ್ನು ಮಾಡುವುದಾಗಿಯೂ ಗ್ರಾಮಸ್ಥರಿಗೆ ಭರವಸೆ ನೀಡಿದರು.