10 ಮೀಟರ್ ತೇರು ಎಳೆಯಲು ಅವಕಾಶ| ಜಾತ್ರೆಗೆ ಹಾಗೂ ರಥೋತ್ಸವಕ್ಕೆ ಬರುವ ಭಕ್ತರಿಗೆ ದೇವರ ದರ್ಶನ ಮಾತ್ರ ಅವಕಾಶ| ಯಾವ ಕಡೆಗೂ ಉಳಿದುಕೊಳ್ಳಲು ಅವಕಾಶ ನೀಡಿಲ್ಲ| ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ|
ಹೂವಿನಹಡಗಲಿ(ಮಾ.13): ತಾಲೂಕಿನ ಐತಿಹಾಸಿಕ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವಕ್ಕೆ ಬರುವ ಭಕ್ತರನ್ನು ತಡೆಯಲು 3 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಕೊರೋನಾ ಅಬ್ಬರ ಇರುವ ಹಿನ್ನೆಲೆಯಲ್ಲಿ ಕುರುವತ್ತಿ ರಥೋತ್ಸವಕ್ಕೆ ಮಂಕು ಕವಿದಿದ್ದು, ಜಾತ್ರೆಗೆ ಹಾಗೂ ರಥೋತ್ಸವಕ್ಕೆ ಬರುವ ಭಕ್ತರಿಗೆ ದೇವರ ದರ್ಶನ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವ ಕಡೆಗೂ ಉಳಿದುಕೊಳ್ಳಲು ಅವಕಾಶ ನೀಡಿಲ್ಲ.
ಪ್ರತಿ ವರ್ಷ ಕುರುವತ್ತಿ ಬಸವೇಶ್ವರ ರಥೋತ್ಸವ 250 ಮೀಟರಿಗೂ ಹೆಚ್ಚು ಎಳೆಯುತ್ತಿದ್ದರು. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ 10 ಮೀಟರ್ ಮಾತ್ರ ತೇರು ಎಳೆಯಲು ಅವಕಾಶ ನೀಡಲಾಗಿದೆ. ತೇರಿಗೂ ಮುನ್ನ ಮೆರವಣಿಗೆಯ ಮೂಲಕ ಬರುವ ಉತ್ಸವವು ಬನ್ನಿಕಟ್ಟೆಗೆ ಹೋಗಿ ಬರಲು ರಸ್ತೆ ಮಾಡಲಾಗಿದ್ದು, ಉಳಿದಂತೆ ತೇರು ಬೀದಿಗಳಲ್ಲಿ ಕುರುವತ್ತಿ ಗ್ರಾಮದ ಅಂಗಡಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಅಂಗಡಿಗಳನ್ನು ತೆರೆಯದಂತೆ ತಾಪಂ ಇಒ ಯು.ಎಚ್. ಸೋಮಶೇಖರ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗುತ್ತೆಪ್ಪ ಹಾಗೂ ಸಿಬ್ಬಂದಿ ವರ್ಗ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ಜಾತ್ರೆಗೂ ಮುನ್ನ ಗ್ರಾಮದ ಸ್ವಚ್ಛತೆ, ರಸ್ತೆಯ ತಿಪ್ಪೆ ಗುಂಡಿಗಳ ತೆರವು, ಜಾತ್ರೆಗೆ ಬಂದ ಭಕ್ತರು ದೇವರ ದರ್ಶನ ಪಡೆದ ಬಳಿಕ ತಮ್ಮೂರಿಗೆ ತೆರಳುವಂತೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ದೇವಸ್ಥಾನದ ಯಾತ್ರಾ ನಿವಾಸದಲ್ಲಿ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿಲ್ಲ, ಜತೆಗೆ ಯಾವ ಕಡೆಗೂ ಪ್ರವಾಸದ ವ್ಯವಸ್ಥೆ ಮಾಡಲು ಅವಕಾಶ ನೀಡಿಲ್ಲ.
ಹಂಪಿಯಲ್ಲಿ ಧರೆಗುರುಳಿದ ಐತಿಹಾಸಿಕ ಕೋಟೆ ಗೋಡೆ
ಕುರುವತ್ತಿ ಜಾತ್ರೆಗೆ ಪಾದಯಾತ್ರೆಯ ಮೂಲಕ ಬರುವ ಭಕ್ತರಿಗೆ 2 ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ವಾಹನಗಳಲ್ಲಿ ಬರುವ ಭಕ್ತರಿಗೆ ಯಾವುದೇ ಮೂಲಭೂತ ಸೌಲಭ್ಯಗಳಲ್ಲಿ ಕಲ್ಪಿಸಿಲ್ಲ, ಜತೆಗೆ ಕುರುವತ್ತಿ ಬರುವ ವಾಹನಗಳನ್ನು ಶುಕ್ರವಾರದಿಂದಲೇ ಗ್ರಾಮದ ಒಳಗೆ ಬಿಡದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಕುರುವತ್ತಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೂವಿನಹಡಗಲಿ ತಾಪಂ ಇಒ ಯು.ಎಚ್. ಸೋಮಶೇಖರ ಹೇಳಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಭಕ್ತರನ್ನು ತಡೆಯಲು ಮೈಲಾರ ರಸ್ತೆ, ಕುರುವತ್ತಿ ಪ್ಲಾಟ್ ರಸ್ತೆ ಹಾಗೂ ತುಂಗಭದ್ರಾ ನದಿ ತೀರ ಸೇರಿ 3 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಮಾಡಿದ್ದು, ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ 2 ಕಡೆ ಕುಡಿಯುವ ನೀರಿನ ಸ್ಟಾಂಡ್ ಮಾಡಿದ್ದೇವೆ ಎಂದು ಗ್ರಾಪಂ ಕುರುವತ್ತಿ ಪಿಡಿಒ ಗುತ್ತೆಪ್ಪ ತಿಳಿಸಿದ್ದಾರೆ.
ಮಾ.13 ರಂದು ಸಂಜೆ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಇರುವ ಹಿನ್ನೆಲೆಯಲ್ಲಿ ಈಗಾಗಲೇ ರಥವನ್ನು ಸಂಪೂರ್ಣ ಸಜ್ಜು ಮಾಡಿದ್ದು, ಜಿಲ್ಲಾಡಳಿತದ ನಿರ್ದೇಶನದಂತೆ 10 ಮೀಟರ್ ಮಾತ್ರ ತೇರನ್ನು ಎಳೆಯಲಾಗುತ್ತಿದೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡು ಹೋಗಲು ಸಿದ್ಧತೆ ಮಾಡಲಾಗಿದೆ ಎಂದು ಕುರುವತ್ತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಗಂಗಾಧರಪ್ಪ ಹೇಳಿದ್ದಾರೆ.
ರಥೋತ್ಸವ ಹಾಗೂ ಜಾತ್ರೆಯ ಬಂದೋಬಸ್ತ್‌ಗಾಗಿ 2 ಡಿವೈಎಸ್ಪಿ, 4 ಸಿಪಿಐ, 15 ಪಿಎಸ್‌ಐ ಹಾಗೂ 200 ಪೊಲೀಸ್ ಸಿಬ್ಬಂದಿ ಮತ್ತು 2 ಡಿಆರ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೂವಿನಹಡಗಲಿ ಸಿಪಿಐ ಕೆ. ರಾಮರೆಡ್ಡಿ ತಿಳಿಸಿದ್ದಾರೆ.