ಶೌಚಾಲಯ ಕಾಮಗಾರಿ ತಂದ ಆಪತ್ತು| ಕೋಟೆಗೋಡೆ ಮರು ನಿರ್ಮಾಣಕ್ಕೆ ಆಗ್ರಹ| ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಹಂಪಿ| ಹಂಪಿಯಲ್ಲಿ ದೇಗುಲ ಹಾಗೂ ಸ್ಮಾರಕಗಳು ಕುಸಿಯುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡಬೇಕು ಎಂಬುದು ಚರಿತ್ರೆಪ್ರಿಯರ ಆಗ್ರಹ|
ಹೊಸಪೇಟೆ(ಮಾ.13): ಐತಿಹಾಸಿಕ ಹಂಪಿಯ ಕಮಲ ಮಹಲ್ ಬಳಿಯ ಕೋಟೆ ಗೋಡೆ ಶುಕ್ರವಾರ ಬೆಳಗ್ಗೆ ಕುಸಿದಿದೆ. ಇದನ್ನು ಅಳಿಯ ರಾಮರಾಯನ ಕೋಟೆ ಎಂದು ಕರೆಯಲಾಗುತ್ತಿದ್ದ, ಸೂಕ್ತ ಸಂರಕ್ಷಣೆ ಇಲ್ಲದ್ದರಿಂದ ಕುಸಿದಿದೆ. ಈ ಕೋಟೆ ಗೋಡೆ ಹೊರ ಭಾಗ ಕುಸಿದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಒಳಭಾಗದಲ್ಲಿ ಕುಸಿದಿದ್ದರೆ ಮತ್ತಷ್ಟು ಸ್ಮಾರಕಗಳಿಗೆ ಹಾನಿಯಾಗುತ್ತಿತ್ತು. ರಾಜ ಖಜಾನೆಗೂ ಧಕ್ಕೆಯಾಗುತ್ತಿತ್ತು. ಶೀಘ್ರವೇ ಕೋಟೆ ಗೋಡೆ ಮರು ನಿರ್ಮಿಸುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಮಗಾರಿ ತಂದ ಆಪತ್ತು:
ಕಮಲ್ ಮಹಲ್ ಬಳಿ ಶೌಚಾಲಯ ಕಾಮಗಾರಿ ನಡೆಯುತ್ತಿತ್ತು. ಇಲ್ಲಿಗೆ ಬಂದ ಭಾರಿ ವಾಹನ ಮತ್ತು ಕಾಮಗಾರಿ ಕಂಪನ (ವೈಬ್ರೇಟ್) ನಿಂದ ಕುಸಿದಿದೆ ಎನ್ನಲಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್ ಮಾದರಿ ಮಿನಿ ಬಸ್..!
ಹಂಪಿಯಲ್ಲಿ ಈ ಹಿಂದೆ ಕೂಡ 2008ರಲ್ಲಿ ಕಮಲ್ ಮಹಲ್ ಸುತ್ತಲಿನ ಗೋಡೆ ಕುಸಿದಿತ್ತು. ಇತ್ತೀಚೆಗೆ ವಿಜಯ ವಿಠ್ಠಲ ದೇಗುಲದ ಬಳಿಯ ಸ್ಮಾರಕ ಕುಸಿದಿತ್ತು. ಹಂಪಿಯಲ್ಲಿ ದೇಗುಲ ಹಾಗೂ ಸ್ಮಾರಕಗಳು ಕುಸಿಯುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಾಡಬೇಕು ಎಂಬುದು ಚರಿತ್ರೆಪ್ರಿಯರ ಆಗ್ರಹವಾಗಿದೆ.
ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸಬೇಕು. ಕೋಟೆಗೋಡೆ ಬಳಿಯೇ ಶೌಚಾಲಯ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ವೇಳೆ ಭಾರೀ ವಾಹನಗಳು ಸಂಚರಿಸಿವೆ. ಜತೆಗೆ ಕಾಮಗಾರಿ ವೈಬ್ರೇಟ್‌ನಿಂದ ಗೋಡೆ ಬಿದ್ದಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ, ಗೋಡೆ ಮರು ನಿರ್ಮಿಸಬೇಕು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ತಿಳಿಸಿದ್ದಾರೆ.