ಚಾಣಕ್ಯ ಹೆಸರಿನಲ್ಲಿ ಹಾಗೂ ಆದಿಗುರು ಶಂಕರಾಚಾರ್ಯರ ನೆನಪಿನಲ್ಲಿ ಗೋಕರ್ಣ ಬಳಿಯ ‘ಅಶೋಕೆ’ಯಲ್ಲಿ ರಾಮಚಂದ್ರಾಪುರ ಮಠದ ವತಿಯಿಂದ ವಿಶ್ವವಿದ್ಯಾಪೀಠದ ನಿರ್ಮಾಣ ಮಾಡಲಾಗುತ್ತಿದೆ.
ಬೆಂಗಳೂರು : ವಿಷ್ಣುಗುಪ್ತ (ಚಾಣಕ್ಯ) ಹೆಸರಿನಲ್ಲಿ ಹಾಗೂ ಆದಿಗುರು ಶಂಕರಾಚಾರ್ಯರ ನೆನಪಿನಲ್ಲಿ ಗೋಕರ್ಣ ಬಳಿಯ ‘ಅಶೋಕೆ’ಯಲ್ಲಿ ರಾಮಚಂದ್ರಾಪುರ ಮಠದ ವತಿಯಿಂದ ವಿಶ್ವವಿದ್ಯಾಪೀಠದ ನಿರ್ಮಾಣ ಮಾಡಲಾಗುತ್ತಿದೆ. ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪೀಠಾರೋಹಣ ಮಾಡಿ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ವಿದ್ಯಾಪೀಠಕ್ಕೆ ನಿರ್ಮಾಣಕ್ಕೆ ಮುಂದಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿ ವಾಸವಿದ್ದ ‘ಅಶೋಕೆ’ ಎಂಬಲ್ಲಿ ವಿದ್ಯಾಪೀಠ ಸ್ಥಾಪಿಸಲಾಗುತ್ತಿದೆ. ತಕ್ಷಶಿಲೆ ವಿಶ್ವವಿದ್ಯಾಲಯದ ಮಾದರಿಯಲ್ಲಿ ಧರ್ಮಯೋಧರ ಸೃಷ್ಟಿಸುವುದು, ದೇಸೀ ವಿದ್ಯೆಗಳ ಪುನರುತ್ಥಾನಕ್ಕಾಗಿ ವಿಶ್ವ ವಿದ್ಯಾಪೀಠ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
undefined
ನಮ್ಮ ಪೂರ್ವಜರ ಹಲವಾರು ವಿದ್ಯೆಗಳು ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ಅರ್ಥ ಕಳೆದುಕೊಂಡಿವೆ. ಕೆಲವು ವಿದ್ಯೆಗಳು ಅಳಿವಿನಂಚಿನಲ್ಲಿವೆ. ಅಂತಹ ಎಲ್ಲ ವಿದ್ಯೆಗಳ ಪುನರುಜ್ಜೀವನ, ಭಾರತೀಯ ವಿದ್ಯೆಗಳನ್ನು ಉಳಿಸಿ ಬೆಳೆಸುವುದು ಹಾಗೂ ದೇಶರಕ್ಷಣೆ- ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕೃತಿ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಶಂಕರರ ಥೀಮ್ ಪಾರ್ಕ್:
ಶಂಕರಾಚಾರ್ಯರ ಜೀವನ ಸಾಧನೆಗಳನ್ನು ಬಿಂಬಿಸುವ ‘ಥೀಮ್ ಪಾರ್ಕ್’ ನಿರ್ಮಾಣ ಮಾಡಲಾಗುತ್ತದೆ. ಶಂಕರರ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಸಂಶೋಧನಾಲಯ, ಆಡಿಯೋ-ವಿಡಿಯೋ ಪ್ರದರ್ಶಿನಿ, ವಸ್ತುಸಂಗ್ರಹಾಲಯ, ಬೃಹತ್ ಶಾಂಕರ ಗ್ರಂಥ ಸಂಗ್ರಹಾಗಾರ ತಲೆ ಎತ್ತಲಿವೆ ಎಂದರು. ಇದೇ ವೇಳೆ ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ 5 ಲಕ್ಷ ರು. ದೇಣಿಗೆ ಸಮರ್ಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ. ಭಟ್, ಧಾರಾ ರಾಮಾಯಣ ಕ್ರಿಯಾ ಸಮಿತಿ ಅಧ್ಯಕ್ಷೆ ಡಾ. ಶಾರದಾ ಜಯಗೋವಿಂದ್ ಉಪಸ್ಥಿತರಿದ್ದರು.
ವಿದ್ಯಾಪೀಠದ ಸಂಕಲ್ಪಕ್ಕಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಜೂ.20ರಿಂದ ಆರು ತಿಂಗಳ ಕಾಲ ಸಮಗ್ರ ರಾಮಾಯಣ ಪ್ರವಚನ ಆರಂಭಿಸುತ್ತಿದ್ದಾರೆ. ‘ಬಾಳದಾರಿಗೆ ರಾಮದೀವಿಗೆ’ ಎಂಬ ಘೋಷವಾಕ್ಯದಡಿ ಗಿರಿನಗರದ ಶಾಖಾಮಠ ರಾಮಾಶ್ರಮಯದಲ್ಲಿ ಪ್ರತಿ ದಿನ ಸಂಜೆ 6.45ರಿಂದ ರಾತ್ರಿ 8.15ರ ವರೆಗೆ ನಿರಂತರವಾಗಿ ರಾಮಾಯಣ ಪ್ರವಚನ ಮಾಡಲಿದ್ದಾರೆ.