ಶ್ರೀಶೈಲ ಯಾತ್ರೆ ಸ್ಥಗಿತಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಮನವಿ|ಕೊರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಎಚ್ಚರಿಕೆ ಬಹುಮುಖ್ಯ|
ಬೆಳಗಾವಿ(ಮಾ.16): ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ಕೈಗೊಂಡಿರುವ ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ವಿನಂತಿಸಿದ್ದಾರೆ.
ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಎಚ್ಚರಿಕೆ ಬಹುಮುಖ್ಯ ಎಂದಿದ್ದಾರೆ.
ಇದೇ ಮೊದಲ ಬಾರಿ ತಿಮ್ಮಪ್ಪನ ಪೂಜೆ ಸ್ಥಗಿತ!
ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರನ್ನು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು ಸೀನಿದರೆ ಅಥವಾ ಕೆಮ್ಮಿದರೆ ಅವನಿಂದ ಇನ್ನೊಬ್ಬರಿಗೆ, ಅವನಿಂದ ಮತ್ತೊಬ್ಬನಿಗೆ ಹೀಗೆ ಕ್ರಮೇಣ ಆ ಸಾವಿರ ಜನರಿಗೂ ತಗಲುವ ಸಾಧ್ಯತೆ ಇದೆ. ಈ ಸೋಂಕು ತಗುಲಿದ ನಂತರ ಇದನ್ನು ತಡೆಗಟ್ಟಲು ಯಾವುದೇ ಔಷಧ ಇಲ್ಲದ ಕಾರಣ ಇದು ಎಲ್ಲಿಯೂ ಹರಡದಂತೆ ಇದರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯ ಎಂದರು.
ದೇವಸ್ಥಾನಗಳು ಭಾರತದ ಮನುಕುಲದ ಕಲ್ಯಾಣ ಕೇಂದ್ರಗಳಾಗಿದ್ದು, ಇವು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಬಾರದು. ಆದ್ದರಿಂದ ಭಾವಾವೇಶಕ್ಕೆ ಒಳಗಾಗಿ ವಾಸ್ತವ ಪರಿಸ್ಥಿತಿಯನ್ನು ಅಲಕ್ಷಿಸಿ ಭಕ್ತಿಯ ಹೆಸರಿನಲ್ಲಿ ಹುಚ್ಚು ಧೈರ್ಯವನ್ನು ಪ್ರದರ್ಶಿಸದೆ ಭಕ್ತರು ಶ್ರೀಶೈಲ ಪಾದಯಾತ್ರೆಯನ್ನು ಸ್ಥಗೀತಗೊಳಿಸುವುದು ಸೂಕ್ತ ಎಂದರು.