
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜು.9): ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರ ತಾರಕಕ್ಕೇರಿದೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಇಂದು ಸುದ್ದಿಗೋಷ್ಟಿ ನಡೆಸಿ, ಜುಲೈ 12 ರಂದು ಚಾಮರಾಜಪೇಟೆ ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂದು ಬೆಳಗ್ಗೆ 8 ಗಂಟೆ ಇಂದ ಸಂಜೆ 5 ಗಂಟೆಯ ತನಕ ಬಂದ್ ಮಾಡುವಂತೆ ನಾಗರೀಕರಿಗೆ ಮನವಿ ಮಾಡಲಾಗಿದೆ. ನಾಗರೀಕ ವೇದಿಕೆ ಸಂಚಾಲಕರ ರುಕ್ಮಾಂಗದ ಮಾತನಾಡಿ, ನಿನ್ನೆ ಜಮೀರ್ ಅಹಮದ್ ನೇತೃತ್ವದಲ್ಲಿ ಸಭೆ ಕರೆದಿದ್ರು, ಆದರೆ ನಮಗೆ ಯಾರೂ ಈ ಸಭೆಗೆ ಕರೆದಿಲ್ಲ. ಹಾಗಾಗಿ ನಾವೂ ಯಾರೂ ಸಭೆಗೆ ಹೋಗಿಲ್ಲ. ಜಮೀರ್ ಮಾತನ್ನ ಯಾರೂ ಕೇಳಬೇಡಿ, ಅವರು ಭರವಸೆ ನೀಡಿ ಸುಮ್ಮನಾಗ್ತಾರೆ ಎಂದು ರುಕ್ಮಾಂಗದ ಕಿಡಿಕಾರಿದ್ರು.
ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮೆನ್ ಆಗ್ತಿನಿ ಅಂದಿದ್ರು ಆಗಿದ್ರಾ ಇಲ್ಲ. ಈ ಹಿಂದೆ ಕೂಡ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡೋದಾಗಿ ಹೇಳಿದ್ರು. ಆದರೆ ಯಾವುದೇ ಕಾರ್ಯಕ್ರಮ ಮಾಡಿಲ್ಲ ಅಂತ ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಗಣಪತಿ ಕೂರಿಸಬಹುದಾ? ಜಮೀರ್ ಉತ್ತರಿಸಿದ್ದು ಹೀಗೆ
ಈ ಹಿಂದೆ ಚಾಮರಾಜಪೇಟೆಯಲ್ಲಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಇದ್ರು. ನಂತರ ಜಮೀರ್ ಶಾಸಕರಾದ ಮೇಲೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳ್ಳ ಕಾಕರು, ಸರಗಳ್ಳರು, ಪಿಕ್ ಪಾಕೆಟ್ ಮಾಡೋರು, ಭೂಗಳ್ಳರು ಹೆಚ್ಚಾಗಿದ್ದಾರೆ ಅಂತ ರುಕ್ಮಾಂಗದ ಕಿಡಿಕಾರಿದ್ರು. ಚಾಮರಾಜಪೇಟೆ ಕ್ಷೇತ್ರದಲ್ಲಿ ಆಟದ ಮೈದಾನಗಳೂ ಇಲ್ಲ. ಹೀಗಾಗಿ ಇದು ಸರ್ಕಾರದ ಸ್ವತ್ತಾಗೇ ಉಳಿಯಬೇಕು, ಇದಕ್ಕಾಗಿ ಚಾಮರಾಜಪೇಟೆ ಕ್ಷೇತ್ರ ಬಂದ್ ಆಗಲಿದೆ. ಸರ್ಕಾರಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಬಂದ್ ಆಗಲಿದೆ ಎಂದು ರುಕ್ಮಾಂಗದ ತಿಳಿಸಿದ್ರು.
ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಸದಸ್ಯ ರಾಮೇಗೌಡ, IAS ಅಧಿಕಾರಿಗಳು ಚಾಮರಾಜಪೇಟೆಗೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ ಅಂತ ಸಿಟ್ಟಾದರು. ಚಾಮರಾಜಪೇಟೆ ಮೈದಾನ ವಕ್ಫ್ ಬೋರ್ಡ್ ದು ಅಂತ ಹೇಳಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಬಂದ್ ಆದ ಬಳಿಕ ಕಮಿಷನರ್ ಅವ್ರನ್ನ ಭೇಟಿ ಮಾಡ್ತಿವಿ, ಬೈಕ್ ರ್ಯಾಲಿ ಮೂಲಕ ತೆರಳಿ ನಮ್ಮ ದಾಖಲೆಗಳನ್ನ ಅವರಿಗೆ ಒದಗಿಸ್ತೀವಿ ಎಂದು ರಾಮೇಗೌಡ ಹೇಳಿದ್ರು.
ಸ್ವಾತಂತ್ರ್ಯ ದಿನ ಆಚರಿಸ್ತೀವಿ ಎಂಬ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ರಾಮೇಗೌಡ, ಭಾವುಟ ಹಾರಿಸೋದಕ್ಕೆ ಪರ್ಮಿಷನ್ ಕೊಟ್ಟರೆ ನಾವು ಅವನ ಅಪ್ಪನಂಗೆ ಮಾಡ್ತೇವೆ. ಬಾವುಟ ಹಾರಿಸೋದು ಬೇಡ ಅಂತ ನಾವು ಹೇಳ್ತಿಲ್ಲ, ಯಾರೇ ಆದರೂ ಅನುಮತಿ ತೆಗೆದುಕೊಳ್ಳಬೇಕು. ಈ ಹಿಂದೆ ನಾವು ಆಚರಣೆಗೆ ಹೋದಾಗ ನಮ್ಮ ಮೇಲೆ ಮೂರು ಕೇಸ್ ಹಾಕಿದ್ದಾರೆ. ಪೊಲೀಸರು ಜಮೀರನ ಕೈ ಗೊಂಬೆಯಾಗಿದ್ದಾರೆ. ಅವರು ಹೇಳಿದ ಹಾಗೇ ಪೊಲೀಸರು ನಡೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ವರ್ಕ್ಫ್ ಬೋರ್ಡ್ ನಿಂದ ಸ್ವಾತಂತ್ರ್ಯ ದಿನ ಆಚರಣೆಗೆ ಅವಕಾಶ ನೀಡಬಾರದು. ಅದಕ್ಕೆ ನಮ್ಮ ವಿರೋಧವಿದೆ.
ಶಾಸಕ ಜಮೀರ್ ಅಹಮದ್ ಗೆ ಸವಾಲು
ಜಮೀರ್ ಅಹಮದ್ ಗೆ ಸವಾಲು ಹಾಕಿದ ರಾಮೇಗೌಡ, ಜಮೀರ್ ಅವ್ರು ಈ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಲಿ, ಜಯಚಾಮರಾಜೇಂದ್ರ ಆಟದ ಮೈದಾನ ಎಂದು ಬೋರ್ಡ್ ಹಾಕಲಿ ಈಗಲೇ ಬಂದ್ ಕೈಬಿಡ್ತೀವಿ ಎಂದು ಸವಾಲು ಹಾಕಿದ್ದಾರೆ. ಶಾಸಕರು ಮೈದಾನದಲ್ಲಿ ತ್ರಿವರ್ಣ ದ್ವಜ ಹಾರಿಸುತ್ತೇವೆ ಎಂದ್ರು. ಆದ್ರೆ ಗಣೇಶ ಹಬ್ಬಕ್ಕೆ , ಹಿಂದೂ ಕಾರ್ಯಕ್ರಮಗಳಿಗೆ ಅವಕಾಶ ಕೊಡಲ್ಲ ಅಂತಾರೆ ಎಂದು ಕಿಡಿಕಾರಿದ್ರು. ಜಮೀರ್, ರಿಜ್ವಾನ್ ಹರ್ಷದ್ ಸೇರಿದಂತೆ ಹಲವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಒತ್ತಡ ಹೇಳಿದ್ದಾರೆ. ಹೀಗಾಗಿ ದಾಖಲೆ ಸಲ್ಲಿಕೆಯಾಗಿದ್ರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಂದು ಕಿಡಿಕಾರಿದ್ರು.
ಜಮೀರ್ ಅಹಮದ್ ನಮ್ಮ ಏರಿಯಾದವರಲ್ಲ
ಪ್ರತಿಭಟನೆಗೆ ಕರೆ ಕೊಟ್ಟವರು ನಮ್ಮ ಕ್ಷೇತ್ರದವರಲ್ಲ ಜಮೀರ್ ಹೇಳಿಕೆ ವಿಚಾರಕ್ಕೆ ಸಿಡಿಮಿಡಿಗೊಂಡ ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ. ನಾವೆಲ್ಲ ಇದೇ ಏರಿಯಾದವರು, ಸ್ಥಳೀಯ ನಿವಾಸಿಗಳೇ. ಜಮೀರ್ ಅಹಮದ್ ನಮ್ಮ ಏರಿಯಾದವರಲ್ಲ. ಬೇರೆ ಕಡೆಯಿಂದ ಬಂದು ಇಲ್ಲಿ ಸೇರಿಕೊಂಡಿರುವವರು. ಅವರು ಸೇರಿಕೊಂಡ ಮೇಲೆ ಈ ಸಮಸ್ಯೆಗಳು ಶುರುವಾಗಿರೋದು. ನಮ್ಮ ಹತ್ತಿರ ನಾವು ಇದೇ ಕ್ಷೇತ್ರವರು ಎನ್ನೋದಕ್ಕೆ ಪ್ರೂಫ್ ಇದೆ. ಹಲವು ವರ್ಷಗಳಿಂದ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜಮೀರ್ ಶಾಸಕರಾದ ಮೇಲೆ ಇವೆಲ್ಲ ಬಂದ್ ಆಗಿದೆ ಎಂದು ಕಿಡಿಕಾರಿದ್ರು.