ಉಡುಪಿಯಲ್ಲಿ ನಿರಂತರ ಮಳೆ, 25 ಕೋಟಿ ರುಪಾಯಿಗೂ ಅಧಿಕ ನಷ್ಟ

By Suvarna News  |  First Published Jul 9, 2022, 4:49 PM IST

* ಒಂದು ವಾರದಿಂದ ನಿರಂತರ ಮಳೆ
* 25 ಕೋಟಿ ರುಪಾಯಿಗೂ ಅಧಿಕ ನಷ್ಟ
* ನಿರಂತರ ಮಳೆಯಿಂದಾಗಿ 5 ಮನೆಗಳು ಸಂಪೂರ್ಣ ಹಾನಿ


ವರದಿ- ಶಶಿಧರ ಮಾಸ್ತಿ ಬೈಲು ಏಷ್ಯಾನೆಟ್  ಸುವರ್ಣ ನ್ಯೂಸ್

ಉಡುಪಿ, (ಜುಲೈ.09): ಜಿಲ್ಲೆಯಾದ್ಯಂತ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಇಂದು(ಶನಿವಾರ)‌ ಕೂಡಾ  ಧಾರಾಕಾರ ಮಳೆ ಮುಂದುವರಿದಿದೆ. ನದಿ ತೀರಗಳಲ್ಲಿ ಮತ್ತೆ ನೀರು ಉಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು, ನಾಳೆ  ಕೂಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿಸಲಾಗಿದೆ.
  
ಶುಕ್ರವಾರ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ಬೆಳಿಗ್ಗೆ ಕೆಲವು ಗಂಟೆಗಳ ಕಾಲ ಮಳೆ ಕಡಿಮೆಯಾಗಿತ್ತು. ಆದರೆ ಮಧ್ಯಾಹ್ನದ ನಂತರ ಬಿಡದೆ ಸುರಿದ ಮಳೆ, ಇನ್ನೂ ಒಂದೆರಡು ದಿನ ಭಾರೀ ಮಳೆ ಮತ್ತು ಪ್ರವಾಹದ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿ, ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ಇದನ್ನು  ಇಂದು ಕೂಡ ಮುಂದುವರಿಸಲಾಗಿದೆ. ಕಾಪು ಮತ್ತು ಉಡುಪಿ ತಾಲೂಕಿನ ನದಿಹೊಳೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ, ಮುಖ್ಯವಾಗಿ ಕುಂದಾಪುರ ಮತ್ತು ಬೈಂದೂರು ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ಈ ಭಾಗದಲ್ಲಿ ಅಗತ್ಯವಿದ್ದಲ್ಲಿ ಜನರನ್ನು ಸ್ಥಳಾಂತರಿಸಲು ಮತ್ತು ಕಾಳಜಿ ಕೇಂದ್ರಗಳನ್ನು ತೆರೆಯಲು ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ, ದಾಖಲೆ ಮಳೆ ಎಲ್ಲೆಲ್ಲಿ ಎಷ್ಟೆಷ್ಟು..?

Latest Videos

undefined

ಶುಕ್ರವಾರ ರಾಜ್ಯದಲ್ಲಿಯೇ ಅತೀಹೆಚ್ಚು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದಲ್ಲಿ 278 ಮಿ.ಮೀ.ನಷ್ಟು ಸುರಿದಿದೆ.
ಗುರುವಾರ ಮುಂಜಾನೆಯಿಂದ ಶುಕ್ರವಾರ ಮುಂಜಾನೆವರೆಗೆ ಜಿಲ್ಲೆಯಲ್ಲಿ ಸರಾಸರಿ 112 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 100, ಬ್ರಹ್ಮಾವರ 86, ಕಾಪು 130,  ಕುಂದಾಪುರ 91, ಬೈಂದೂರು  101,  ಕಾರ್ಕಳ 163, ಹೆಬ್ರಿ 130.20 ಮಿ.ಮೀ. ಮಳೆ ದಾಖಲಾಗಿದೆ.
 
5 ಮನೆಗಳಿಗೆ ಸಂಪೂರ್ಣ ಹಾನಿ
 ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಲ್ಲಿ 5 ಮನೆಗಳು ಸಂಪೂರ್ಣ ಕುಸಿದಿದ್ದು, 18 ಮನೆಗಳಿಗೆ ಹಾನಿಯಾಗಿದೆ.ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ನಾಗರತ್ನ ಎಂಬವರ ಮನೆಗೆ 2 ಲಕ್ಷ ರು., ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸಾಕು ಎಂಬವರ ಮನೆಗೆ 1 ಲಕ್ಷ ರು., ನಾವುಂದ ಗ್ರಾಮದ ಖತೀಜಾ ಯುಸೂಫ್ ಮನೆಗೆ 3 ಲಕ್ಷ ರು., ಕಿರಿಮಂಜೇಶ್ವರ ಗ್ರಾಮದ ನಾರಾಯಣ ಎಂಬವರ ಮನೆಗೆ 1.50 ಲಕ್ಷ ರು. ಬಿಜೂರು ಗ್ರಾಮದ ಸುಶೀಲ ಎಂಬವರ ಮನೆಗೆ 1.50 ಲಕ್ಷ ರು.ಗಳಷ್ಟು ಹಾನಿಯಾಗಿದೆ.

ಉಳಿದಂತೆ ಉಡುಪಿ ತಾಲೂಕಿನಲ್ಲಿ 3 ಮನೆಗಳಿಗೆ 1.15 ಲಕ್ಷ ರು., ಬ್ರಹ್ಮಾವರ ತಾಲೂಕಿನಲ್ಲಿ 3 ಮನೆಗಳಿಗೆ 80 ಸಾವಿರ ರು., ಕಾಪು ತಾಲೂಕಿನಲ್ಲಿ 2 ಮನೆಗಳಿಗೆ 1.25 ಲಕ್ಷ ರು., ಕುಂದಾಪುರ ತಾಲೂಕಿನಲ್ಲಿ 10 ಮನೆಗಳಿಗೆ 4.50 ಲಕ್ಷ ರು. ಮತ್ತು ಬೈಂದೂರು ತಾಲೂಕಿನಲ್ಲಿ 5 ಮನೆಗಳಿಗೆ 7.50 ಲತ್ರ ರು. ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಜುಲೈ 1 ರಿಂದ ಇದುವರೆಗಿನ ವಾಡಿಕೆ ಮಳೆ 367 ಮಿಮಿ ಆಗುವುದು ಪರಿಪಾಠ ಆದರೆ, ಈ ಬಾರಿ  832 ಮಿಮಿ ಮಳೆಯಾಗಿದೆ. 250 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಲೋಮೀಟರ್, ಗ್ರಾಮೀಣ ಭಾಗದ 685 ಕಿಲೋಮೀಟರ್  ನಷ್ಟು  ರಸ್ತೆ ,  ಜಿಲ್ಲಾ ಹಾಗೂ ರಾಜ್ಯಮಟ್ಟದ 7.5 ಕಿಮೀ ಮುಖ್ಯ ರಸ್ತೆ ಹಾಳಾಗಿದೆ.

13 ಸೇತುವೆಗಳು ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ  1515 ವಿದ್ಯುಚ್ಛಕ್ತಿ ಕಂಬಗಳು ಬಿದ್ದುಹೋಗಿವೆ , 47 ಕಿಲೋಮೀಟರ್ ರಷ್ಟು ವಿದ್ಯುತ್ ತಂತಿಗಳು ಹಾಳಾಗಿದ್ದು , 64 ಮನೆಗಳಿಗೆ ಭಾಗಶಃ  ಹಾನಿಯಾಗಿ ಒಟ್ಟು  ಅಂದಾಜು 24.73 ಕೋಟಿಯಷ್ಟು  ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ ಕೂಡ ನಿರಂತರವಾಗಿ ಮಳೆ ಮುಂದುವರೆದಿದ್ದು, ನಷ್ಟದ ನಿಖರ ಮೊತ್ತ ಮೌಲ್ಯ ಮಾಪನ ಮಾಡಲು ಅಸಾಧ್ಯ ವಾಗಿದ್ದು,  ನಷ್ಟದ ಪ್ರಮಾಣ ಇನ್ನೂ ಹೆಚ್ಹುವ ಸಾಧ್ಯತೆಗಳಿವೆ.

click me!