
ಚಾಮರಾಜನಗರ: ಹುಲಿಯ ಹಲ್ಲುಗಳು ಹಾಗೂ ಉಗುರನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ವನ್ಯಜೀವಿ ಅಂಗಾಂಗಗಳು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-948ರ ಹರದನಹಳ್ಳಿ ಗ್ರಾಮದ ಕೆರೆ ಸಮೀಪ ಆ.11ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ, ಬಂಡೀಪುರ-ನಾಗರಹೊಳೆ ಹಾಗೂ ಜಿ.ಎಸ್ ಬೆಟ್ಟ ವಲಯದ ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಬಂಧಿತರನ್ನು ಹೊಸಪೋಡು ಗ್ರಾಮದ ಮಹದೇವ ಬಿನ್ ಜಡಿಯ, ಮಾವತ್ತೂರು ಗ್ರಾಮದ ರಮೇಶ ಬಿನ್ ಆಲುವಯ್ಯ ಹಾಗೂ ವಡೆಯರಪಾಳ್ಯ ಗ್ರಾಮದ ಮಣಿ ಬಿನ್ ರಾಮು ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಹುಲಿ ಹಲ್ಲುಗಳು ಹಾಗೂ ಉಗುರನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶದಲ್ಲಿರಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವರ್ ಅವರ ನಿರ್ದೇಶನದ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಎಂ, ಜಿ.ಎಸ್.ಬೆಟ್ಟ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ ಎಂ, ಕಾರ್ತಿಕ್ ಯಾದವ್, ಶ್ರೀಕಾಂತ್ ಹಾಗೂ ಜಿ.ಎಸ್ ಬೆಟ್ಟ ವಲಯದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ವರದಿ: ಪುಟ್ಟರಾಜು ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)