
ಚಾಮರಾಜನಗರ (ಸೆ.23): ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸೋಗಿನಲ್ಲಿ ಬಂದಿದ್ದ ಶ್ರೀಗಂಧ ಕಳ್ಳಸಾಗಣೆ ಗ್ಯಾಂಗ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ತಮಿಳುನಾಡು ಮೂಲದವರಾಗಿದ್ದು, ಅವರಿಂದ ಅಪಾರ ಪ್ರಮಾಣದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಲೆ ಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಹನೂರು ತಾಲ್ಲೂಕಿನ ಕೊಕ್ಕಬೋರೆ ಗಸ್ತು ಪ್ರದೇಶದ ದೊಡ್ಡ ಬರೇಹಳ್ಳದ ಬಳಿ, ಮೂವರು ವ್ಯಕ್ತಿಗಳು ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದು, ಒಬ್ಬ ಬಾಲಕ ಸಿಕ್ಕಿಬಿದ್ದಿದ್ದಾನೆ. ಆತನ ಸಹಚರರಾದ ಪೆರುಮಾಳ್ ಮತ್ತು ಮುರುಗನ್ ಎಂಬುವರು ಪರಾರಿಯಾಗಿದ್ದಾರೆ. ಈ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮಹದೇಶ್ವರ ಬೆಟ್ಟದ ಆನೆತಲೆದಿಂಬು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ, ಸೆಡೆಯಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನಿಂದ ಒಟ್ಟು 33 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನು ತಮಿಳುನಾಡಿನಿಂದ ಬಂದಿದ್ದ ಕಳ್ಳಸಾಗಣೆದಾರನಾಗಿದ್ದಾನೆ.
ಅರಣ್ಯ ಇಲಾಖೆಯು ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕಳ್ಳರು ಭಕ್ತರ ವೇಷದಲ್ಲಿ ಬೆಟ್ಟಕ್ಕೆ ಬಂದು, ಸಂಜೆ ಮತ್ತು ರಾತ್ರಿ ವೇಳೆ ಶ್ರೀಗಂಧದ ಮರಗಳನ್ನು ಕತ್ತರಿಸಿ ಕದ್ದು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.