ಬಿಜೆಪಿಯೊಂದಿಗೆ ನಡೆಯಿತು ಮಹಾ ಮೈತ್ರಿ : ಸಿರೀಶ-ರಮ್ಯಾಗೆ ಒಲಿದ ಮಹತ್ವದ ಪಟ್ಟ

By Kannadaprabha NewsFirst Published Oct 29, 2020, 1:39 PM IST
Highlights

ಬಿಜೆಪಿಯೊಂದಿಗೆ ಮಹಾ ಮೈತ್ರಿ ನಡೆದಿದ್ದು ಈ ವೇಳೆ ಮಹತ್ವದ ಪಟ್ಟಗಳು ಹಮಚಿಕೆಯಾಗಿವೆ. 

ಚಾಮರಾಜನಗರ (ಅ.29):  ಇಂದು ನಡೆಯುತ್ತಿರುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಾಸಕ ಎನ್‌.ಮಹೇಶ್‌ ಬೆಂಬಲಿತ ಸದಸ್ಯರು ಮೈತ್ರಿಯಾಗಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಮೂರು ಅವಧಿಗೆ ಅಧಿಕಾರ ಹಂಚಿಕೊಳ್ಳುವ ಮಾತುಕತೆಯಾಗಿದೆ ಎಂದು ತಿಳಿದು ಬಂದಿದ್ದು, ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಬಿಜೆಪಿ ಪಾಲಾಗಲಿವೆ ಎನ್ನಲಾಗಿದೆ. 

ಅಧ್ಯಕ್ಷ ಸ್ಥಾನಕ್ಕೆ ಸಿರೀಶ ಸತೀಶ್‌ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಮ್ಯ ಮಹೇಶ್‌ ಅವರನ್ನು ಆಯ್ಕೆ ಮಾಡುವ ಮಾತುಕತೆಯಾಗಿದೆ ಎನ್ನಲಾಗುತ್ತಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎನ್‌. ಮಹೇಶ್‌ ಬೆಂಬಲಿತ ಸದಸ್ಯ ಶಂಕನಪುರ ಪ್ರಕಾಶ್‌ ನೇಮಕಗೊಳ್ಳಲಿದ್ದಾರೆ.

ಎರಡನೇ ಅವಧಿಗೆ ಶಾಸಕರ ಬೆಂಬಲಿತ ಸದಸ್ಯೆ ಗಂಗಮ್ಮ ವರದರಾಜು ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಕವಿತಾ ಆಯ್ಕೆಯಾಗಲಿದ್ದಾರೆ. ಮೂರನೇ ಅವಧಿಗೆ ಶಂಕನಪುರ ವಾರ್ಡ್‌ ಸದಸ್ಯೆ ನಾಗಸುಂದ್ರಮ್ಮ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಕವಿತಾ ಮುಂದುವರೆಯುವ ಸಾಧ್ಯತೆಗಳಿವೆ.

ಬಿಎಸ್ಪಿಯಿಂದ ಅಭ್ಯರ್ಥಿ ಘೋಷಣೆ, ವಿಪ್‌ ಜಾರಿ:

ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಧಾನಕ್ಕೆ ಗುರುವಾರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಪಿ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸಿ ಪಕ್ಷದ ಒಂಭತ್ತು ಸದಸ್ಯರೂ ಸಹ ಅವರ ಪರ ಮತ ಚಲಾಯಿಸುವಂತೆ ವಿಪ್‌ ಜಾರಿ ಮಾಡಿದೆ. ಪಕ್ಷದ ಜಿಲ್ಲಾಧ್ಯಕ್ಷ ನಾಗಯ್ಯ ಅವರ ನೇತೃತ್ವದಲ್ಲಿ ಬಿಎಸ್ಪಿಯ ಇತರ ಮುಖಂಡರು ಪಕ್ಷದ ಎಲ್ಲಾ ಸದಸ್ಯರು ಮನೆಮನೆಗೆ ತೆರಳಿ ವಿಪ್‌ ಕುರಿತ ನೋಟಿಸ್‌ ಅಂಟಿಸಿದ್ದಾರೆ.

ನಮ್ಮ ಸರ್ಕಾರವನ್ನು ಯಾರೂ ಪರ್ಸಂಟೇಜ್‌ ಸರ್ಕಾರ ಎಂದಿಲ್ಲ: ಎಚ್‌.ಡಿ.ಕುಮಾರಸ್ವಾಮಿ ... 

ಕಳೆದ ರಾತ್ರಿ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರೊಂದಿಗೆ ಕಾಂಗ್ರೆಸ್‌ನ ಮಾಜಿ ಶಾಸಕ ಎಸ್‌. ಜಯಣ್ಣ ಮತ್ತು ಎಸ್‌. ಬಾಲರಾಜು ಅವರು ಐಬಿಯಲ್ಲಿ ಗೌಪ್ಯ ಸಭೆ ನಡೆಸಿದ್ದರು. ಈ ವೇಳೆ ನಗರಸಭೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಅದರ ಮುಂದುವರಿದ ಭಾಗವಾಗಿ ಬಿಎಸ್ಪಿ ಮುಖಂಡರು ನೋಟಿಸ್‌ ಅಂಟಿಸುವ ಕಾರ್ಯ ಕೈಗೊಂಡಿದ್ದರು ಎನ್ನಲಾಗಿದೆ.

ಇನ್ನು ಅಧ್ಯಕ್ಷ ಗಾದಿಗೆ ಬಿಎಸ್ಪಿ ಅಭ್ಯರ್ಥಿಯಾಗಿ 23ನೇ ವಾರ್ಡ್‌ ನೂರ್‌ ಮೊಹಲ್ಲಾ ಸದಸ್ಯೆ ಜಯಮರಿ ಕಣಕ್ಕಿಳಿಯಲಿದ್ದಾರೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ ತಿಳಿಸಿದ್ದಾರೆ.

ಈ ಬಗ್ಗೆ ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಜಯಮರಿ ಅವರ ಪರ ಎಲ್ಲಾ ಸದಸ್ಯರು ಮತ ಚಲಾಯಿಸುವ ಭರವಸೆ ಇದೆ ಎಂದಿದ್ದಾರೆ. ಯಾರಾದರೂ ಅಡ್ಡ ಮತದಾನ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಎಸ್ಪಿಯ ವಿಪ್‌ ಜಾರಿಯಿಂದಾಗಿ ಅನರ್ಹತೆ ಭಯಕ್ಕೆ ಶಾಸಕ ಎನ್‌. ಮಹೇಶ್‌ ಬೆಂಬಲಿತ ಸದಸ್ಯರು ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಧ್ಯಕ್ಷೆ ಚುನಾವಣೆಯಲ್ಲಿ ನಮ್ಮ ಪಕ್ಷದ ಒಂಬತ್ತು ಮತ ಬರುವ ಭರವಸೆ ಇದೆ. ಇದರೊಂದಿಗೆ ಪಕ್ಷೇತರ ನಾಲ್ವರು ಸದಸ್ಯರಿಗೆ ಹಾಗೂ ಬೇರೆ ಪಕ್ಷದ ಸದಸ್ಯರಿಗೆ ನಮ್ಮ ಅಭ್ಯರ್ಥಿ ಪರ ಮತ ನೀಡಲು ಮನವಿ ಮಾಡಿಕೊಂಡಿದ್ದೇವೆ. ಹೀಗಾಗಿ ಮ್ಯಾಜಿಕ್‌ ನಂಬರ್‌ 17ಕ್ಕೆ ತಲುಪುತ್ತೇವೆ ಎಂದು ಬಿಎಸ್ಪಿ ಜಿಲ್ಲಾ ಉಸ್ತುವಾರಿ ಹಾಗೂ ವಕೀಲ ಬೂದಿತಿಟ್ಟು ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!