ಚಾಮರಾಜನಗರ ಕ್ಷೇತ್ರ : ತಂದೆ ಸೋತಿದ್ದ ಕ್ಷೇತ್ರದಲ್ಲಿ ಗೆಲುವಿಗಾಗಿ ಪುತ್ರನ ಹೋರಾಟ

By Kannadaprabha News  |  First Published Apr 18, 2024, 2:42 PM IST

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಇದೇ ಮೊದಲ ಚುನಾವಣೆ. ಅವರು ನೇರವಾಗಿ ಲೋಕಸಭೆಗೆ ಹೋಗುವ ಯತ್ನ ಮಾಡುತ್ತಿದ್ದಾರೆ.


 ಅಂಶಿ ಪ್ರಸನ್ನಕುಮಾರ್

  ಮೈಸೂರು :  ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಇದೇ ಮೊದಲ ಚುನಾವಣೆ. ಅವರು ನೇರವಾಗಿ ಲೋಕಸಭೆಗೆ ಹೋಗುವ ಯತ್ನ ಮಾಡುತ್ತಿದ್ದಾರೆ.

Tap to resize

Latest Videos

undefined

ಇವರು ಟಿ. ನರಸೀಪುರ ಕ್ಷೇತ್ರದಿಂದಗೆ ಆರು ಬಾರಿ ಆಯ್ಕೆಯಾಗಿ, ಮೂರು ಬಾರಿ ಸೋತಿರುವ ಹಾಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹಿರಿಯ ಪುತ್ರ. ತಾಲೂಕಿನ ಕೆಡಿಪಿ ಸದಸ್ಯ. ಮುಖ್ಯಮಂತ್ರಿ ಅವರ ಹಿರಿಯ ಪುತ್ರ ರಾಕೇಶ್ ಅವರ ಪರಮಾಪ್ತ ಸ್ನೇಹಿತರು. 2008 ರಿಂದಲೂ ಈ ಇಬ್ಬರು ಕ್ರಮವಾಗಿ ಟಿ. ನರಸೀಪುರ ಹಾಗೂ ವರುಣ ಕ್ಷೇತ್ರದಲ್ಲಿ ತಂದೆಯವರ ಪರ ಪ್ರಚಾರ ಮಾಡುತ್ತಿದ್ದರಲ್ಲದೇ ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ರಾಕೇಶ್ ಅವರನ್ನು ತಮ್ಮ ಉತ್ತರಾಧಿಕಾರಿ ಮಾಡಬೇಕು ಎಂದು ಸಿದ್ದರಾಮಯ್ಯ ಕೂಡ ಬಯಸಿದ್ದರು. ಆದರೆ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ನಿಧನರಾದರು. ಹೀಗಾಗಿ ಕಿರಿಯ ಪುತ್ರ ಡಾ.ಎಸ್. ಯತೀಂದ್ರ 2018 ರಲ್ಲಿ ವರುಣ ಕ್ಷೇತ್ರದ ಶಾಸಕರಾದರು. 2023 ರಲ್ಲಿ ಯತೀಂದ್ರ ಅವರ ಬದಲು ಸಿದ್ದರಾಮಯ್ಯ ಅವರೇ ವರುಣದಿಂದ ಸ್ಪರ್ಧಿಸಿ, ಆಯ್ಕೆಯಾದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಲು ಬಯಸಿದ್ದ ಅವರು ಸುರಕ್ಷಿತ ಕ್ಷೇತ್ರ ಎಂದು ವರುಣ ಆಯ್ಕೆ ಮಾಡಿಕೊಂಡಿದ್ದರಿಂದ ಯತೀಂದ್ರ ಅವರು ಈಗ ಮಾಜಿ ಶಾಸಕರು. ಕ್ಷೇತ್ರ ಆಶ್ರಯ ಯೋಜನೆ ಸಮಿತಿ ಅಧ್ಯಕ್ಷರು.

ಆದರೆ ಸುನಿಲ್ ಬೋಸ್‌ ಗೆ ಈವರೆಗೂ ಟಿಕೆಟ್ ಸಿಕ್ಕಿರಲಿಲ್ಲ. ಸುನಿಲ್ 2017ರ ಏಪ್ರಿಲ್‌ನಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್‌ಗೆ ಯತ್ನಿಸಿದ್ದರು. ಆದರೆ ಟಿಕೆಟ್ ಜೆಡಿಸ್‌ನಿಂದ ಬಂದ ಕಳಲೆ ಕೇಶವಮೂರ್ತಿ ಅವರ ಪಾಲಾಗಿತ್ತು. 2018 ರಲ್ಲೂ ಎರಡೂ ಕಡೆಯೂ ಟಿಕೆಟ್‌ಗೆ ಯತ್ನಿಸಿದ್ದರು. ಆದರೆ ಸಿಗಲಿಲ್ಲ. 2023ರ ಚುನಾವಣೆಯಲ್ಲಿ ಮಹದೇವಪ್ಪ ಅವರು ನಂಜನಗೂಡಿನಿಂದ, ಸುನಿಲ್ ಬೋಸ್ ಟಿ. ನರಸೀಪುರದಿಂದ ಟಿಕೆಟ್ ಬಯಸಿದ್ದರು. ನಂಜನಗೂಡಿನ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರು ಹಠಾತ್ ನಿಧನರಾಗಿದ್ದರಿಂದ ಅವರ ಪುತ್ರ ದರ್ಶನ್‌ ಗೆ ಟಿಕೆಟ್ ನೀಡಲಾಯಿತು. ಇದರಿಂದ ಮಹದೇವಪ್ಪ ಅನಿವಾರ್ಯವಾಗಿ ಟಿ. ನರಸೀಪುರದಿಂದಲೇ ಸ್ಪರ್ಧಿಸಬೇಕಾಯಿತು. ಸುನಿಲ್ ಕ್ಷೇತ್ರವಿಲ್ಲದೇ ನಿರಾಶರಾಗಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಸುನಿಲ್ ಬೋಸ್ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗ, ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಿದ್ದರು.

ಈ ಕ್ಷೇತ್ರದಿಂದ ಡಾ.ಮಹದೇವಪ್ಪ ಅವರೇ ಕಣಕ್ಕಿಳಿಯಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ರವರ ಆಶಯವಾಗಿತ್ತು. ಇಲ್ಲದಿದ್ದರೆ ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರ ಪುತ್ರ, ಹಾಲಿ ನಂಜನಗೂಡು ಶಾಸಕ ದರ್ಶನ್ ಅವರಿಗೆ ಟಿಕೆಟ್ ನೀಡುವ ಉದ್ದೇಶವಿತ್ತು. ಆದರೆ ದರ್ಶನ್ ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ. ಇದಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟು ಕಡೆ ಕಾಂಗ್ರೆಸ್ ಸಚಿವರು, ಶಾಸಕರ ಸಂಬಂಧಿಕರಿಗೆ ಟಿಕೆಟ್ ನೀಡಿದೆ. ಹೀಗಾಗಿ ಇಲ್ಲಿ ಕೂಡ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಮಹದೇವಪ್ಪ ಪಟ್ಟು ಹಿಡಿದಿದ್ದರು. ಇದರಿಂದಾಗಿ ಕೊನೆಯ ಕ್ಷಣದವರೆಗೂ ಟಿಕೆಟ್ ಕಗ್ಗಂಟಾಗಿತ್ತು. ಅಳೆದು ಸುರಿದು ಹೈಕಮಾಂಡ್ ಸುನಿಲ್‌ಗೆ ಟಿಕೆಟ್ ನೀಡಿತು.

1991 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಹದೇವಪ್ಪ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಇದೀಗ 33 ವರ್ಷಗಳ ನಂತರ ಅವರ ಪುತ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಪ್ಪ ಗೆಲ್ಲದ ಕ್ಷೇತ್ರದಲ್ಲಿ ಮಗ ಗೆದ್ದು ದಾಖಲೆ ನಿರ್ಮಿಸುವರೇ ಎಂಬ ಕುತೂಹಲ ಇದೀಗ ಉಂಟಾಗಿದೆ.

click me!