
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜೂ.17): ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಎಲ್ಲಾ 243 ವಾರ್ಡ್‌ಗೆ ವಿಸ್ತರಣೆ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಆದರೆ, ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಜಾಗ ಹುಡುಕುವುದೇ ಬಿಬಿಎಂಪಿ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ.
ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಹೊಸ ವಾರ್ಡ್‌ಗಳಲ್ಲಿಯೂ ಕ್ಯಾಂಟೀನ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಪುನಶ್ಚೇತನದೊಂದಿಗೆ ಹೊಸ ಕ್ಯಾಂಟೀನ್ ಸ್ಥಾಪನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇಂದಿರಾ ಕ್ಯಾಂಟೀನಲ್ಲಿ ಚಪಾತಿ, ಮುದ್ದೆ ಭಾಗ್ಯ?: ಹೊಸ ಆಹಾರದ ಮೆನು ಸಿದ್ಧಪಡಿಸುವಂತೆ ಸಿದ್ದು ಸೂಚನೆ
ಈಗಾಗಲೇ ಹೊಸ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ .20 ಕೋಟಿ ಬೇಕಾಗಲಿದೆ ಎಂದು ಪ್ರಸ್ತಾವನೆಯನ್ನೂ ಪಾಲಿಕೆ ಸಲ್ಲಿಸಿದೆ. ಆದರೀಗ ಹೊಸ ಕ್ಯಾಂಟೀನ್ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸೂಕ್ತ ಜಾಗ ಹುಡುಕಾಟ ಬಿಬಿಎಂಪಿ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.
ಉದ್ಯಾನವನದಲ್ಲಿ ಜನರಿಗೆ ಉಪಯೋಗವಿದ್ದರೂ ಕಟ್ಟಡ ನಿರ್ಮಾಣ ಮಾಡದಂತೆ ಕೋರ್ಚ್ ಆದೇಶಿಸಿದೆ. ಇನ್ನು ಜನ ದಟ್ಟಣೆ ಇರುವ ಸ್ಥಳಗಳಲ್ಲಿ ಕ್ಯಾಂಟೀನ್ ನಿರ್ಮಿಸಬೇಕಿದೆ. ಮೆಟ್ರೋ ನಿಲ್ದಾಣಗಳು, ನಮ್ಮ ಕ್ಲಿನಿಕ್, ಆಸ್ಪತ್ರೆ, ಶಾಲಾ-ಕಾಲೇಜು, ಮೈದಾನ ಸೇರಿದಂತೆ ಹಲವು ಕಾರ್ಯಗಳಿಗೆ ಬಿಬಿಎಂಪಿ ಜಾಗವನ್ನು ಮೀಸಲಿಡಲಾಗಿದೆ. ಹೀಗಾಗಿ, ಜಾಗ ಗುರುತಿಸುವುದು ದೊಡ್ಡ ಸಮಸ್ಯೆಯಾಗಿದೆ.
45 ವಾರ್ಡ್‌ನಲ್ಲಿ ಹೊಸ ಕ್ಯಾಂಟೀನ್:
ಸದ್ಯ ಬಿಬಿಎಂಪಿಯಲ್ಲಿ 175 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳಿಗಾಗಿ ಕಟ್ಟಡ ನಿರ್ಮಿಸಲಾಗಿದೆ. ಉಳಿದ 24 ವಾರ್ಡ್‌ಗಳಲ್ಲಿ ಜಾಗ ಸಿಗದ ಹಿನ್ನೆಲೆಯಲ್ಲಿ 2017ರಲ್ಲಿಯೇ ಮೊಬೈಲ್ ಕ್ಯಾಂಟೀನ್ ನಡೆಸುವುದಕ್ಕೆ ತೀರ್ಮಾನಿಸಲಾಗಿತ್ತು. ಇದೀಗ, ಮತ್ತೆ ಹೊಸದಾಗಿ 45 ಇಂದಿರಾ ಕ್ಯಾಂಟೀನ್ ಆರಂಭಿಸಬೇಕಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಾದರೂ ವಿಸ್ತೀರ್ಣ ಮಾತ್ರ ಹೆಚ್ಚಾಗಿಲ್ಲ. ಹೀಗಾಗಿ, ಹೊಸ ಇಂದಿರಾ ಕ್ಯಾಂಟೀನ್‌ಗಳ ಕಟ್ಟಡ ನಿರ್ಮಾಣ ಬಿಬಿಎಂಪಿಗೆ ಸವಾಲಿನ ಕೆಲಸವಾಗಿದೆ.
10ರಿಂದ 15 ವಾರ್ಡ್‌ನಲ್ಲಿ ಸ್ಥಳ
ಪ್ರಾಥಮಿಕ ಪರಿಶೀಲನೆ ಪ್ರಕಾರ ಹೊಸದಾಗಿ ರಚನೆಯಾದ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವುದಕ್ಕೆ ಸುಮಾರು 10ರಿಂದ 15 ವಾರ್ಡ್‌ಗಳಲ್ಲಿ ಮಾತ್ರ ಜಾಗ ದೊರೆಯಬಹುದು. ಉಳಿದ ಕಡೆ ಮೊಬೈಲ್ ಕ್ಯಾಂಟೀನ್ ಆರಂಭಿಸಬೇಕಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಹಿಂದೆ ಆರಂಭಿಸಿದ 24 ಮೊಬೈಲ್ ಕ್ಯಾಂಟೀನ್‌ಗಳು ಕೆಲವೇ ವರ್ಷದಲ್ಲಿ ಕೆಲಸ ಸ್ಥಗಿತಗೊಳಿಸಿದ್ದವು. ರಸ್ತೆ ಪಕ್ಕ, ಜನದಟ್ಟಣೆ ಇರುವ ಬಸ್ ನಿಲ್ದಾಣ, ಮಾರುಕಟ್ಟೆ, ಪಾರ್ಕ್ ಸೇರಿದಂತೆ ಮೊದಲಾದ ಕಡೆ ಮೊಬೈಲ್ ಕ್ಯಾಂಟೀನ್ ವಾಹನ ನಿಲ್ಲಿಸುವುದರಿಂದ ಸಂಚಾರಿ ದಟ್ಟಣೆ ಉಂಟಾಗಲಿದೆ ಎಂದು ಪೊಲೀಸರು ಅವಕಾಶ ನೀಡಿರಲಿಲ್ಲ. ಇದೀಗ ಮತ್ತಷ್ಟುಸಂಖ್ಯೆಯ ಮೊಬೈಲ್ ಕ್ಯಾಂಟೀನ್ ಆರಂಭಿಸಿದರೆ ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳಿಗೆ ಕಾಡುತ್ತಿದೆ.
ಹಾವೇರಿ: ಮೊದಲಿನಷ್ಟು ರುಚಿ ಇಲ್ಲಾರೀ', ಇಂದಿರಾ ಕ್ಯಾಂಟಿನ್ ಶುರುವಿದ್ದರೂ ಅತ್ತ ಸುಳಿಯುತ್ತಿಲ್ಲ ಮಂದಿ!
ಬಾಡಿಗೆ ಕಟ್ಟಡದಲ್ಲಿ ಕ್ಯಾಂಟೀನ್?
ಈ ಹಿಂದೆ ಸ್ಥಿರ ಇಂದಿರಾ ಕ್ಯಾಂಟೀನ್‌ಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ, ಸರ್ಕಾರಿ ಜಾಗಗಳನ್ನು ಹುಡುಕಾಟ ನಡೆಸಿ ಹರ ಸಾಹಸ ಪಟ್ಟು 175 ಕಡೆ ಸ್ಥಿರ ಕಟ್ಟಡ ನಿರ್ಮಿಸಲಾಗಿತ್ತು. ಜಾಗದ ಸಮಸ್ಯೆ ಇರುವುದರಿಂದ ಈ ಬಾರಿ ಜನರಿಗೆ ಅನುಕೂಲವಾಗುವುದಾದರೆ ನಮ್ಮ ಕ್ಲಿನಿಕ್ ಮಾದರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಇಂದಿರಾ ಕ್ಯಾಂಟೀನ್ ನಡೆಸುವುದಕ್ಕೆ ಅವಕಾಶ ಕೇಳುವ ಚಿಂತನೆಯನ್ನು ಬಿಬಿಎಂಪಿ ಅಧಿಕಾರಿಗಳು ನಡೆಸಿದ್ದಾರೆ.
ಒಂದು ಸಂಸ್ಥೆಗೆ 2 ವಲಯ ಮಾತ್ರ
ಬಿಬಿಎಂಪಿಯು ಹೊಸದಾಗಿ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಟೆಂಡರ್ ಆಹ್ವಾನಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ .67 ದರ ನಿಗದಿ ಪಡಿಸಿದೆ. ಇದರಲ್ಲಿ ಜನರಿಂದ 25 ಹಾಗೂ ಬಿಬಿಎಂಪಿ ಮತ್ತು ಸರ್ಕಾರದಿಂದ .42 ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಈ ಹಿಂದೆ ಎರಡೇ ಸಂಸ್ಥೆಗಳಿಗೆ ಎಲ್ಲಾ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಅನುಮತಿ ನೀಡಲಾಗಿತ್ತು. ಈ ಬಾರಿ ಒಂದು ಸಂಸ್ಥೆಗೆ ಎರಡು ವಲಯದ ಕ್ಯಾಂಟೀನ್‌ಗಳಿಗೆ ಮಾತ್ರ ಅಹಾರ ಪೂರೈಕೆಯ ಗುತ್ತಿಗೆ ನೀಡಲು ನಿರ್ಧರಿಸಿದೆ.