ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಕೊಬರಿ ಖರೀದಿ ಕೇಂದ್ರಕ್ಕೆ ಕೊಬರಿ ಬಿಡುವ ಸಲುವಾಗಿ ಕಳೆದ ಎಂಟತ್ತು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ರೈತಾಪಿಗಳು ನೂರಾರು ವಾಹನಗಳಲ್ಲಿ ಕೊಬರಿ ತಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ತುರುವೇಕೆರೆ : ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಕೊಬರಿ ಖರೀದಿ ಕೇಂದ್ರಕ್ಕೆ ಕೊಬರಿ ಬಿಡುವ ಸಲುವಾಗಿ ಕಳೆದ ಎಂಟತ್ತು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ರೈತಾಪಿಗಳು ನೂರಾರು ವಾಹನಗಳಲ್ಲಿ ಕೊಬರಿ ತಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಕಳೆದ ಎಂಟತ್ತು ದಿನಗಳಿಂದ ಆವರಣದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಟ್ಯ್ರಾಕ್ಟರ್ ನಲ್ಲಿ ಕೊಬರಿ ತಂದಿರುವ ರೈತರು ಖರೀದಿ ಕೇಂದ್ರಕ್ಕೆ ಬಿಡಲು ಹರಸಾಹಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ತೊಂದರೆಗೆ ಸಿಲುಕಿದ್ದಾರೆ. ಕುಡಿಯಲು ನೀರಿಲ್ಲ, ನೆರಳಿಲ್ಲ, ಗೃಹದ ವ್ಯವಸ್ಥೆ ಇಲ್ಲ. ಉಳಿದುಕೊಳ್ಳಲು ಕಟ್ಟಡಗಳಿಲ್ಲ. ವಿಶ್ರಾಂತಿ ಗೃಹಗಳಿಲ್ಲ. ರಾತ್ರಿಯಾದರೆ ವಿಷಜಂತುಗಳ ಕಾಟ, ಕಳ್ಳರ ಕಾಟ, ಮಳೆ ಬಂದರೆ ಕೊಬರಿಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಕೊಬರಿ ಒಡೆದು ಚೀಲಕ್ಕೆ ತುಂಬಿರುವುದರಿಂದ ಕೊಬರಿ ಬೇಗನೆ ಕೆಡುವ ಸಾಧ್ಯತೆ ಇದೆ ಎಂದು ರೈತಾಪಿಗಳು ಗೋಳಾಡುತ್ತಿದ್ದಾರೆ.
ತಾಲೂಕು ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಜಯರಾಮ್ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ಹೆಚ್ಚುವರಿ ಕೌಂಟರ್‌ನ್ನು ಕೂಡಲೇ ತೆರೆಯಬೇಕು. ಕೊಬರಿಯ ಅಳತೆಯಲ್ಲಿ ಇಂತಿಷ್ಟೆಗಾತ್ರ ಇರಬೇಕೆಂದು ನ್ಯಾಫೆಡ್ ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಆದರೆ ಇದು ಸರಿಯಲ್ಲ. ಗಾತ್ರದಲ್ಲಿ ಕಡಿಮೆ ಇರಬಹುದೇ ಹೊರೆತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಬರದು. ಹಾಗಾಗಿ ಎಲ್ಲಾ ಬಗೆಯ ಕೊಬರಿಗಳನ್ನು ಖರೀದಿ ಮಾಡಬೇಕೆಂದು ಆಗ್ರಹಿಸಿದರು.
ಎಪಿಎಂಸಿ ಆವರಣದಲ್ಲಿರುವ ಹಲವಾರು ವ್ಯಾಪಾರಸ್ಥರ ಕೊಬರಿಗಳನ್ನು ಜೇಷ್ಠತೆ ಆಧಾರ ಎಂದು ನ್ಯಾಫೆಡ್ ನ ಅಧಿಕಾರಿಗಳು ಕೊಳ್ಳುತ್ತಿದ್ದಾರೆ. ಆದರೆ ಹತ್ತಾರು ದಿನಗಳಿಂದ ರೈತಾಪಿಗಳು ಕಾಯುತ್ತಿದ್ದರೂ ಸಹ ಕೊಳ್ಳುತ್ತಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ಕೊಬರಿ ಬೆಳೆದಿರುವ ರೈತರು ಇಲ್ಲಿ ಮಾರಾಟ ಮಾಡಲು ತಂದರೆ ಇಲ್ಲಿಯ ಅಧಿಕಾರಿಗಳಿಗೆ ಲಂಚ ನೀಡಬೇಕು. ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ರೈತರ ಗೋಳನ್ನು ಕೇಳುವವರೇ ಇಲ್ಲದಾಗಿದ್ದಾರೆಂದು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿ ಕಾಂತರಾಜು, ಖಜಾಂಚಿ ಮೆಡಿಕಲ್ ಮಲ್ಲಿಕಾರ್ಜುನ್, ಕೆಂಪರಾಜ್, ಸಹ ಕಾರ್ಯದರ್ಶಿ ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಂಬಲ ಬೆಲೆ ನೀಡಿ
ತಿಪಟೂರು: ಕಲ್ಪತರು ನಾಡಿನ ರೈತರ ಪ್ರಮುಖ ಜೀವನಾಧಾರ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಲೆÜ ತೀವ್ರ ಕುಸಿತವಾಗಿದ್ದು ತೆಂಗು ಬೆಳೆಗಾರರು ಆತಂಕದ ಜೀವನ ನಡೆಸುತ್ತಿರುವುದರಿಂದ ಕೇಂದ್ರ ಸರ್ಕಾರ ಕೂಡಲೇ ಹಾಲಿ ಇರುವ 11750 ರು. ಬೆಂಬಲ ಬೆಲೆಯನ್ನು 15 ರು. ಸಾವಿರಕ್ಕಾದರೂ ಏರಿಸುವ ಮೂಲಕ ತೆಂಗು ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕೆಂದು ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ ಒತ್ತಾಯ ಮಾಡಿದ್ದಾರೆ.
ಕಳೆದ ವರ್ಷ ಒಂದು ಕ್ವಿಂಟಲ್ ಕೊಬ್ಬರಿ ಬೆಲೆ 18 ರು. ಸಾವಿರದ ತನಕ ಇದ್ದು ಇತ್ತೀಚಿನ 5-6 ತಿಂಗಳುಗಳಿಂದ ಗಣನೀಯವಾಗಿ ಇಳಿಕೆಯಾಗುವ ಮೂಲಕ ಹಾಲಿ 8500 ರು. ಗೆ ಕುಸಿದಿದ್ದು ತೆಂಗು ಬೆಳೆಗಾರರಿಗೆ ದೊಡ್ಡಮಟ್ಟದ ನಷ್ಟಉಂಟಾಗುತ್ತಿದೆ. ಬೆಲೆ ತೀವ್ರ ಕುಸಿತವಾಗಿರುವುದರಿಂದ ದಿನನಿತ್ಯದ ಜೀವನ ನಡೆಸುವುದು ಕಷ್ಟಕರವಾಗಿದೆ. ಕಳೆದ 4-5 ದಿನಗಳ ಹಿಂದೆ ಕೇಂದ್ರ ಸರ್ಕಾರ ರಾಗಿ ಸೇರಿದಂತೆ 10ಕ್ಕೂ ಹೆಚ್ಚು ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಸ್ವಾಗತವಾಗಿದ್ದು, ಕೊಬ್ಬರಿ ಬೆಂಬಲ ಬೆಲೆ ಮಾತ್ರ ಹೆಚ್ಚಿಸಿಲ್ಲದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಕಲ್ಪತರು ನಾಡು ತಿಪಟೂರಿನ ಕೊಬ್ಬರಿಗೆ ದೇಶಾದ್ಯಂತ ಬೇಡಿಕೆ ಇದ್ದು, ಈ ಭಾಗದ ಕೊಬ್ಬರಿಯು ರುಚಿ ಮತ್ತು ಗುಣಮಟ್ಟದಲ್ಲಿ ಅತ್ಯುತ್ತಮ ದರ್ಜೆಯಾಗಿದ್ದು ಕೊಬ್ಬರಿ ಬೆಲೆ ಪ್ರಸ್ತುತ 8500 ರು.ಕ್ಕೆ ಕುಸಿದಿರುವುದು ತೆಂಗು ಬೆಳೆಗಾರರಲ್ಲಿ ಆಘಾತವುಂಟುಮಾಡಿದೆ. 1 ಕ್ವಿಂಟಲ್ ಕೊಬ್ಬರಿ ಬೆಳೆಯಲು 15 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಬೆಳೆಗಾರರಿಗೆ ಕನಿಷ್ಠವೆಂದರೂ 15 ಸಾವಿರವಾದರೂ ಬೆಂಬಲ ಬೆಲೆ ಸಿಕ್ಕರೆ ಮಾತ್ರ ತುಸು ವೈಜ್ಞಾನಿಕ ಬೆಲೆ ಸಿಕ್ಕಿದಂತಾಗುತ್ತದೆ. ಆದರೆ ಸದ್ಯದ ಮಾರುಕಟ್ಟೆಹರಾಜು ಧಾರಣೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಮುಂದೆ ಮತ್ತಷ್ಟುದರ ಕುಸಿಯುವ ಸಾಧ್ಯತೆಯೇ ಹೆಚ್ಚು ಇರುವಂತೆ ಕಾಣುತ್ತಿದೆ. ಕಳೆದ 6 ತಿಂಗಳುಗಳಿಂದ ತೆಂಗು ಬೆಳೆಗಾರರು ಸೇರಿದಂತೆ ಕಾಂಗ್ರೆಸ್ ಹಾಗೂ ವಿವಿಧ ರೈತ ಸಂಘಟನೆಗಳು ಬೆಂಬಲ ಬೆಲೆ ಹೆಚ್ಚಿಸುವಂತೆ ಸಾಕಷ್ಟುಹೋರಾಟಗಳ ಮೂಲಕ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಬೆಂಬಲ ಬೆಲೆ ಸಿಗಲೇ ಇಲ್ಲ.