ಸಾಕಷ್ಟು ಗ್ರಾಹಕರಿಗೆ ಗೃಹಜ್ಯೋತಿ ಭಾಗ್ಯ ನೀಡಿ ಒಂದು ಕೈಯಿಂದ ನೀಡಿ ಮತ್ತೊಂದು ಕೈಯಿಂದ ಕಿತ್ತುಕೊಂಡ ಅನುಭವವಾಗಿರುವ ಬೆನ್ನಲ್ಲೆ ಗ್ರಾಹಕರಿಗೆ ಸೆಸ್ಕ್ ಮತ್ತೊಂದು ಶಾಕ್ ನೀಡಿದೆ.
ತಲಕಾಡು : ಸಾಕಷ್ಟು ಗ್ರಾಹಕರಿಗೆ ಗೃಹಜ್ಯೋತಿ ಭಾಗ್ಯ ನೀಡಿ ಒಂದು ಕೈಯಿಂದ ನೀಡಿ ಮತ್ತೊಂದು ಕೈಯಿಂದ ಕಿತ್ತುಕೊಂಡ ಅನುಭವವಾಗಿರುವ ಬೆನ್ನಲ್ಲೆ ಗ್ರಾಹಕರಿಗೆ ಸೆಸ್ಕ್ ಮತ್ತೊಂದು ಶಾಕ್ ನೀಡಿದೆ.
ಮೇನ್ ಮೀಟರ್ ನಿಂದ ಸಬ್ ಮೀಟರ್ ಅಳವಡಿಸಿಕೊಳ್ಳುವ ಗ್ರಾಹಕರಿಗೆ ಬಾಕಿ ಎಎಸ್ ಡಿ (ಅಡಿಷನಲ್ ಸೆಕ್ಯೂರಿಟಿ ಡಿಪಾಸಿಟ್) ಮೊತ್ತವನ್ನು ಪೂರ್ತಿ ಪಾವತಿಸುವಂತೆ ತಾಲೂಕು ಸೆಸ್ಕ್ ಬಿಗಿಪಟ್ಟು ಹಿಡಿದಿದೆ. ಇದರಿಂದ ನೂತನ ಸಬ್ ಮೀಟರ್ ಸಂಪರ್ಕ ಪಡೆಯುವ ಗ್ರಾಹಕರು ಬರದ ದಿನಗಳಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಐಎಸ್ ಡಿ ಮೊತ್ತವೆಂದರೆ ಗ್ರಾಹಕ ಪ್ರತಿ ತಿಂಗಳು ಬಳಸುವ ಯೂನಿಟ್ ಅನುಸಾರ ಎರಡು ತಿಂಗಳ ಬಿಲ್ ಮೊತ್ತವನ್ನು ಸೆಸ್ಕ್ ಖಾತೆಯಲ್ಲಿ ಡಿಪಾಸಿಟ್ ಇಡಬೇಕೆಂಬ ನಿಯಮ, ಈ ನಿಯಮ ವರ್ಷಗಳಿಂದ ಜಾರಿಯಲ್ಲಿದ್ದರು ಬಹುತೇಕ ಗ್ರಾಹಕರು ನಿರ್ಲಕ್ಷಿಸಿದ್ದರು. ಗೃಹಜ್ಯೊತಿ ಜಾರಿಗೆ ಬಂದ ನಂತರ ಐಎಸ್ ಡಿ ಡೆಪಾಸಿಟ್ ಕಟ್ಟಲೇಬೇಕೆಂಬ ಒತ್ತಡ ಕೂಡ ಸೆಸ್ಕ್ ನವರಿಂದ ತಗ್ಗಿತ್ತು. ಆದರೆ ಈಗ ಸಬ್ ಮೀಟರ್ ಸಂಪರ್ಕ ಪಡೆದುಕೊಳ್ಳುವ ಗ್ರಾಹಕರಿಗೆ ಬಾಕಿ ಉಳಿಸಿಕೊಂಡಿರುವ ಐಎಸ್ ಡಿ ಮೊತ್ತವನ್ನು ಪೂರ್ತಿ ಚುಕ್ತಾ ಮಾಡುವಂತೆ ಒತ್ತಡ ಹೇರಿದೆ.
ಒಂದೇ ಮನೆಗೆ ಹೆಚ್ಚುವರಿ ಕಟ್ಟಡ ನಿರ್ಮಿಸಿಕೊಂಡಿದ್ದವರು ಅಥವಾ ಮನೆಯ ಏಕೈಕ ಮೀಟರ್ ನಡಿ ಪ್ರತ್ಯೇಕವಾಗಿ ವಾಸ ಮಾಡುವ ಅವಿಭಕ್ತ ಕುಟುಂಬಗಳು, ಈಗ ಪ್ರತ್ಯೇಕ ಮೀಟರ್ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಏಕೆಂದರೆ ಇಂತಹ ಮನೆಗಳಲ್ಲಿ ತಿಂಗಳ ವಿದ್ಯುತ್ ಬಳಕೆ 200 ಯೂನಿಟ್ ಮೀರಿದ್ದರಿಂದ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಸೇರ್ಪಡೆ ಆಗಿರಲಿಲ್ಲ.
ಗೃಹಜ್ಯೋತಿ ಯೋಜನೆಗೆ ಸೇರ್ಪಡೆಯಾಗದ ಕುಟುಂಬಗಳು, ಮುಂದಿನ ವರ್ಷದ ವಿದ್ಯುತ್ ಬಳಕೆ ಸರಾಸರಿಯಲ್ಲಿ ಕನಿಷ್ಟ 200 ಯೂನಿಟ್ ಒಳಗಡೆ ತಗ್ಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ತಾವು ವಾಸ ಮಾಡುವ ಒಂದೇ ಮನೆಯ ಹೆಚ್ಚುವರಿ ಕಟ್ಟಡಕ್ಕೆ ಅಥವಾ ಒಂದೇ ಮನೆಯ ಏಕೈಕ ಮೀಟರ್ ನಿಂದ ಉಪ ಮೀಟರ್ ಸಂಪರ್ಕ ಪಡೆಯಲು ಈಗ ಮುಂದಾಗಿದ್ದಾರೆ. ಆದರೆ ನೂತನ ಸಬ್ ಮೀಟರ್ ಶುಲ್ಕದ ಜತೆ ಹಳೆಯ ಮೇನ್ ಮೀಟರ್ ಎಎಸ್ ಡಿ ಬಾಕಿ ಮೊತ್ತವನ್ನು ಪೂರ್ಣ ಪಾವತಿಗೆ ಸೆಸ್ಕ್ ಕಡ್ಡಾಯ ಗೊಳಿಸಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಹಕನ ವಾದ ಪ್ರಯೋಜವಾಗಿಲ್ಲ: ಮೇನ್ ಮೀಟರ್ ನಿಂದ ಸಬ್ ಮೀಟರ್ ಸಂಪರ್ಕ ಪಡೆದ ಬಳಿಕ ಮೇನ್ ಮೀಟರ್ ಗೆ ತಿಂಗಳಿಗೆ ಬರುವ ವಿದ್ಯುತ್ ಬಿಲ್ ಎಂದಿನಂತೆ ತಗ್ಗಲಿದೆ, ಹಾಗಾಗಿ ಹೆಚ್ಚುವರಿ ಡಿಪಾಸಿಟ್ ಮೊತ್ತ ಕಟ್ಟಬೇಕಾದ ಅವಶ್ಯಕತೆ ಇಲ್ಲ ಎಂದು ಸೆಸ್ಕ್ ನವರ ಮುಂದೆ ಎಷ್ಟೇ ವಾದಿಸಿದರು ಸುಂಕದವರ ಮುಂದೆ ಸುಖ ದುಖಃ ಹೇಳಿಕೊಂಡಂತಾಗಿದೆ ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಕೂಡಲೆ ಸಮಸ್ಯೆ ಸರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ನೊಂದ ಗ್ರಾಹಕರು ಒತ್ತಾಯಿಸಿದ್ದಾರೆ.