ಕುಶಾಲತೋಪು ಶಬ್ದಕ್ಕೆ ಜಗ್ಗದೇ ನಿಂತ ದಸರಾ ಗಜಪಡೆ...

By Kannadaprabha News  |  First Published Oct 14, 2023, 9:01 AM IST

ಕುಶಾಲತೋಪು ಸಿಡಿತದ ಶಬ್ದಕ್ಕೆ ಜಗ್ಗದೇ ನಿಲ್ಲುವ ಮೂಲಕ ಗಜಪಡೆಯು ಧೈರ್ಯ ಪ್ರದರ್ಶಿಸುವ ಮೂಲಕ ದಸರಾ ಜಂಬೂಸವಾರಿಗೆ ಸಿದ್ಧವಾಗಿರುವ ಸಂದೇಶ ರವಾನಿಸಿದವು


  ಮೈಸೂರು :  ಕುಶಾಲತೋಪು ಸಿಡಿತದ ಶಬ್ದಕ್ಕೆ ಜಗ್ಗದೇ ನಿಲ್ಲುವ ಮೂಲಕ ಗಜಪಡೆಯು ಧೈರ್ಯ ಪ್ರದರ್ಶಿಸುವ ಮೂಲಕ ದಸರಾ ಜಂಬೂಸವಾರಿಗೆ ಸಿದ್ಧವಾಗಿರುವ ಸಂದೇಶ ರವಾನಿಸಿದವು.

ಸಿಡಿಸಿ ಭಯಭೀತವಾಗಿ ಓಡದಿರುವ 2ನೇ ಹಂತದ ತಾಲೀಮನ್ನು ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ಶುಕ್ರವಾರ ಸಂಜೆ ನಡೆಸಲಾಯಿತು. ಬಾರಿ ಶಬ್ದದ ಪರಿಚಯ ಮಾಡಿಸುವ ಈ ತಾಲೀಮಿನಲ್ಲಿ ಪಾಲ್ಗೊಂಡಿದ್ದ 9 ಆನೆಗಳು ಜಗ್ಗದೇ ಧೈರ್ಯ ಪ್ರದರ್ಶಿಸಿದರೆ, ಅಶ್ವದಳದ ಕೆಲವು ಕುದುರೆಗಳು ಬೆಚ್ಚಿ ಓಡಾಡಿದವು.

Latest Videos

undefined

ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆಗಳು, 27 ಆಶ್ವಗಳಿಗೆ 7 ಪಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸುವ ಮೂಲಕ ಶಬ್ದದ ಪರಿಚಯ ಮಾಡಿಸಲಾಯಿತು. ಈ ವೇಳೆ ಎಲ್ಲಾ 9 ಆನೆಗಳು ಪಿರಂಗಿಯ ಎದೆ ಝಲ್ ಎನಿಸುವ ಶಬ್ದಕ್ಕೆ ಬೆಚ್ಚದೆ, ಸೊಂಡಿಲು ಎತ್ತಿ ಮುಂದೆ ಸಾಗುವ ಮೂಲಕ ಧೈರ್ಯ ತೋರಿದವು. ಆದರೆ, ಅಶ್ವದಳದ ಕೆಲವು ಕುದುರೆಗಳು ಬೆದರಿ ಅತ್ತಿಂದಿತ್ತ ಓಡಾಡಿದಾಗ ಅಶ್ವದಳದ ಸಿಬ್ಬಂದಿ ಕುದುರೆಗಳನ್ನು ನಿಯಂತ್ರಿಸಿದರು.

ಪಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿಯನ್ನು ಹಾಕಲಾಯಿತು. ಬೆಂಕಿಯನ್ನು ಸಿಬ್ಬಂದಿ ಹಚ್ಚಿದೊಡನೇ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನ ನಾರಿನಲ್ಲಿ ಮಾಡಿರುವ ಸಿಂಬವನ್ನು ಬ್ಯಾರಲ್‌ ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿಯೂ ಪಿರಂಗಿ ದಳದ ಸಿಬ್ಬಂದಿ ನಿರ್ವಹಿಸಿದರು.

ಮೊದಲ ತಂಡ 9 ಆನೆಗಳಿಂದ ಧೈರ್ಯ ಪ್ರದರ್ಶನ

ಆನೆಗಳು, ಕುದುರೆಗಳನ್ನು ಸಾಲಾಗಿ ನಿಲ್ಲಿಸಲಾಯಿತು. ಸಿಬ್ಬಂದಿ ವಿಷಲ್ ಊದಿದ ತಕ್ಷಣ ಬೆಂಕಿ ಹಚ್ಚಿದೊಡದೆ ಪಿರಂಗಿಯಿಂದ ಬೆಂಕಿಯೊಡನೆ ಕಿವಿಗಡಚ್ಚಿಕ್ಕುವ ಶಬ್ದ ಹೊರಹೊಮ್ಮಿತು.

ಮೊದಲ ತಾಲೀಮಿನಲ್ಲಿ ಬೆದರಿದ್ದ ಧನಂಜಯ ಆನೆಯು ಈ ಬಾರಿ ಅಲುಗಾಡದೆ ನಿಂತಿದ್ದ. ಅಂಬಾರಿ ಆನೆ ಅಭಿಮನ್ಯು, ಮಾಜಿ ಅಂಬಾರಿ ಆನೆ ಅರ್ಜುನ ಎಂದಿನಂತೆ ಧೈರ್ಯ ಪ್ರದರ್ಶಿಸಿದರೆ, ಗೋಪಿ, ಭೀಮ, ಮಹೇಂದ್ರ, ಕಂಜನ್, ವರಲಕ್ಷ್ಮಿ ಮತ್ತು ವಿಜಯ ಆನೆ ಸಿಡಿಮದ್ದು ಸಿಡಿಯುತ್ತಿದ್ದಂತೆ ಮುಂದಡಿ ಇಡುತ್ತಿದ್ದವು. 104 ಡೆಸಿಬಲ್ ಶಬ್ದ ಹೊರಹೊಮ್ಮಿದರೂ ಕೊಂಚವೂ ಬೆದರದೆ ತಾಲೀಮನ್ನು ಯಶಸ್ವಿಗೊಳಿಸಿದವು.

2ನೇ ತಂಡದ 5 ಆನೆಗಳು ಗೈರು

ಕುಶಾಲತೋಪು 2ನೇ ತಾಲೀಮಿಗೆ ಎರಡನೇ ತಂಡದಲ್ಲಿ ಆಗಮಿಸಿದ್ದ ಗಜಪಡೆಯ 5 ಆನೆಗಳು ಗೈರಾಗಿದ್ದವು. ಪ್ರಶಾಂತ, ಸುಗ್ರೀವ, ರೋಹಿತ್, ಲಕ್ಷ್ಮೀ ಮತ್ತು ಹಿರಣ್ಯಾ ಆನೆಗಳು ಕುಶಾಲತೋಪು ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ.

ಮೊದಲ ತಾಲೀಮಿನಲ್ಲಿ ಮೊದಲ ಬಾರಿಗೆ ದಸರೆಗೆ ಬಂದಿರುವ ರೋಹಿತ್ ಆನೆ ಕುಶಾಲತೋಪು ಶಬ್ದಕ್ಕೆ ವಿಚಲಿತನಾಗಿತ್ತು. ಹಾಗೆಯೇ, ಸುಗ್ರೀವ, ಲಕ್ಷ್ಮೀ, ಹಿರಣ್ಯಾ ಆನೆಗಳೂ ಬೆಚ್ಚಿದ್ದರಿಂದ ಮುಂಜಾಗ್ರತಾ ಕ್ರಮವಾಗಿ 2ನೇ ತಂಡದ 5 ಆನೆಗಳನ್ನು ತಾಲೀಮಿಗೆ ಕರೆ ತಂದಿರಲಿಲ್ಲ.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ. ಮುತ್ತುರಾಜು, ಅಶ್ವರೋಹಿದಳದ ಕಮಾಂಡೆಂಟ್ ಶೈಲೇಂದ್ರ, ಎಸಿಪಿಗಳಾದ ಅಶೋಕ್ ಕುಮಾರ್, ಚಂದ್ರಶೇಖರ್, ಶಾಂತಮಲ್ಲಪ್ಪ, ಡಿಸಿಎಫ್ ಗಳಾದ ಡಾ. ಬಸವರಾಜು, ಸೌರಭಕುಮಾರ್ ಮೊದಲಾದವರು ಇದ್ದರು.

ಕುಶಾಲತೋಪು ಸಿಡಿಸುವ 2ನೇ ಸುತ್ತಿನ ತಾಲೀಮು ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿವೆ. ತಾಲೀಮಿನಲ್ಲಿ ಮೊದಲ ತಂಡದಲ್ಲಿ ಆಗಮಿಸಿದ್ದ 9 ಆನೆಗಳು ಭಾಗವಹಿಸಿವೆ. ಮೊದಲ ಕುಶಾಲತೋಪು ತಾಲೀಮಿನಲ್ಲಿ ಬೆದರಿದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಎರಡನೇ ತಂಡದ 5 ಆನೆಗಳನ್ನು ಕರೆತಂದಿಲ್ಲ. ಮೂರನೇ ತಾಲೀಮಿನಲ್ಲಿ ಎಲ್ಲಾ ಆನೆಗಳು ಭಾಗವಹಿಸಲಿವೆ.

- ಸೌರಭಕುಮಾರ್, ಡಿಸಿಎಫ್

ಗಜಪಡೆ, ಅಶ್ವಪಡೆಗೆ ಎರಡನೇ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದೆ. ಅ.17 ರಂದು ಮೂರನೇ ಹಾಗೂ ಅಂತಿಮ ಹಂತದ ತಾಲೀಮು ನಡೆಯಲಿದೆ.

- ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ

click me!