
ನವದೆಹಲಿ (ಆ.12): ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೈಲ್ವೆ ಜಾಲದ ಸಾಮರ್ಥ್ಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು 'ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್' (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ವಿಲೀನ ಪ್ರಕ್ರಿಯೆಗೆ ಪಾಲುದಾರ ರಾಜ್ಯಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ (ಆಗಸ್ಟ್ 12) ಲೋಕಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕೊಂಕಣ ರೈಲ್ವೆಯಲ್ಲಿ ಪಾಲುದಾರಿಕೆ ಹೊಂದಿರುವ ರಾಜ್ಯಗಳ ಪೈಕಿ ಗೋವಾ ಸರ್ಕಾರ ಮಾತ್ರವೇ ತನ್ನ ಶೇರುಗಳನ್ನು ಉಚಿತವಾಗಿ ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.
ಆದರೆ, ಮಹಾರಾಷ್ಟ್ರ ಸರ್ಕಾರವು ತಾವು ಹೂಡಿಕೆ ಮಾಡಿರುವ ಬಂಡವಾಳವನ್ನು (Share Capital) ಮರಳಿಸುವಂತೆ ಪಟ್ಟು ಹಿಡಿದಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ಎಕ್ಸಿಟ್ (ಹೊರನಡೆಯುವ) ಆಯ್ಕೆಗಳನ್ನು ನೀಡುವಂತೆ ಕೋರಿದೆ.
ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರ್‌ವರೆಗೆ ಮುಂಬೈ ಮತ್ತು ಮಂಗಳೂರನ್ನು ಸಂಪರ್ಕಿಸುವ 739 ಕಿಲೋಮೀಟರ್ ಉದ್ದದ ಕರಾವಳಿ ರೈಲು ಮಾರ್ಗದ ನಿರ್ಮಾಣಕ್ಕಾಗಿ 1990ರಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ಅನ್ನು ಸ್ಥಾಪಿಸಲಾಯಿತು. ಪ್ರಸ್ತುತ ಈ ಸಂಸ್ಥೆಯಲ್ಲಿ ಐದು ಪ್ರಮುಖ ಪಾಲುದಾರರಿದ್ದಾರೆ. ರೈಲ್ವೆ ಸಚಿವಾಲಯ (ಕೇಂದ್ರ): ಶೇ. 66.79 ಪಾಲು ಹೊಂದಿದ್ದರೆ, ಮಹಾರಾಷ್ಟ್ರ ಸರ್ಕಾರ ಶೇ. 14.91, ಕರ್ನಾಟಕ ಸರ್ಕಾರ ಶೇ. 10.17, ಗೋವಾ ಸರ್ಕಾರ ಶೇ. 4.07 ಹಾಗೂ ಕೇರಳ ಸರ್ಕಾರ ಶೇ. 4.07 ಪಾಲು ಹೊಂದಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, "ಕೊಂಕಣ ರೈಲ್ವೆಯ ಮೂಲಸೌಕರ್ಯಗಳಿಗೆ ಸುಮಾರು 30 ವರ್ಷಗಳಾಗಿದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲುಗಳ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಪ್ರಮಾಣದ ಬಂಡವಾಳದ ಅಗತ್ಯವಿದೆ. ಸುರಂಗಗಳ ನವೀಕರಣ, ಹಳೆಯ ಆಸ್ತಿಗಳ ಬದಲಿ ವ್ಯವಸ್ಥೆ ಸೇರಿದಂತೆ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಣದ ಅಗತ್ಯವಿದೆ" ಎಂದಿದ್ದಾರೆ.
ಈ ಹಣಕಾಸಿನ ಅಗತ್ಯವನ್ನು ಪೂರೈಸಲು ರೈಲ್ವೆ ಸಚಿವಾಲಯವು ಎಲ್ಲ ಪಾಲುದಾರ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ತಮಗೆ ಇರುವ ಶೇರುಗಳಿಗೆ ಅನುಗುಣವಾಗಿ ಅಗತ್ಯವಿರುವ ಬಂಡವಾಳ ವೆಚ್ಚವನ್ನು (Capex) ಭರಿಸುವುದು ಅಥವಾ ತಮ್ಮ ಶೇರುಗಳನ್ನು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಬಿಟ್ಟುಕೊಡುವುದು. ಆದರೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ (Indian Railways) ಸಂಪೂರ್ಣವಾಗಿ ವಿಲೀನಗೊಳಿಸಬೇಕಾದರೆ, ಅದು ಶೇ. 100ರಷ್ಟು ಕೇಂದ್ರ ಸರ್ಕಾರದ ಮಾಲೀಕತ್ವದ ಸಂಸ್ಥೆಯಾಗುವುದು ಕಡ್ಡಾಯವಾಗಿದೆ. ಕಾನೂನಾತ್ಮಕ, ಕಾರ್ಪೊರೇಟ್ ಮತ್ತು ಆಡಳಿತಾತ್ಮಕ ಅನುಮೋದನೆಗಳೊಂದಿಗೆ ಪಾಲುದಾರ ಶೇರುದಾರರ ಒಪ್ಪಂದಕ್ಕೆ ಬದ್ಧವಾಗಿ ಈ ಪ್ರಕ್ರಿಯೆ ನಡೆಯಬೇಕಿದೆ.
ಕೊಂಕಣ ರೈಲ್ವೆಯ 739 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೋಹಾ-ವೀರ್ ಹಾಗೂ ಮಡಗಾಂವ್-ಮಜೋರ್ಡಾ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗದ ದ್ವಿಪಥ (Doubling) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಿಸಲು ಗುರುತಿಸಲಾದ 263 ಕಿಲೋಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲು ಅಗತ್ಯವಿರುವ ಸಾಧ್ಯತಾ ಸಮೀಕ್ಷೆಗೆ (Feasibility Survey) ಅನುಮೋದನೆ ನೀಡಲಾಗಿದೆ. ಅಲ್ಲದೆ, ಪ್ರಯಾಣಿಕರ ಸೌಲಭ್ಯಗಳು, ಆಸ್ತಿಗಳ ನವೀಕರಣ, ಸುರಕ್ಷತೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ KRCLನ ಮೂರನೇ ಆರ್ಥಿಕ ಪುನರ್ರಚನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.