ರಾಜ್ಯದಲ್ಲಿ ಜನ ನೆರೆ, ಪ್ರವಾಹದಿಂದ ಕಂಗೆಟ್ಟಿದ್ದರೂ ಕೇಂದ್ರ ಮಾತ್ರ ಯಾವುದೇ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಯೋಚಿಸ್ತಿಲ್ಲ. ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಇಂಥ ಸಮಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಸ್ಪಂದಿಸದ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ದಾವಣಗೆರೆ(ಸೆ.13): ರಾಜ್ಯ ಅತಿವೃಷ್ಟಿ, ಪ್ರವಾಹದಿಂದ ತತ್ತರಿಸಿದ್ದು, ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಇಂಥ ಸಮಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಸ್ಪಂದಿಸದ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆ ಆವರಣದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ರಾಜ್ಯದ ಬಹುತೇಕ ಜಿಲ್ಲೆಗಳು ಅತಿವೃಷ್ಟಿ, ಪ್ರವಾಹಕ್ಕೆ ಸಿಲುಕಿವೆ. ಮತ್ತೆ ಕೆಲ ಜಿಲ್ಲೆಗಳು ಅನಾವೃಷ್ಟಿಯಿಂದ ತತ್ತರಿಸಿದ್ದರೂ ಪ್ರಕೃತಿ ವಿಕೋಪ ಪರಿಹಾರದಡಿ ಅನುದಾನ ನೀಡಿ ಸ್ಪಂದಿಸಬೇಕಿದ್ದ ಕೇಂದ್ರ ಈವರೆಗೂ ರಾಜ್ಯದತ್ತ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಹಿಂಭಾರ ಹೆಚ್ಚಾಗಿ ಟ್ರಾಕ್ಟರ್ ಟ್ರೈಲರ್‌ನಿಂದ ಬಿದ್ದ ಗಣೇಶ!
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ರಾಜ್ಯ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಭೂ ಕುಸಿತಕ್ಕೆ ಸಿಲುಕಿ ನಲುಗುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ನೆರವಿಗೆ ಧಾವಿಸಬೇಕಿದ್ದ ಕೇಂದ್ರ ಅಸಡ್ಡೆ ತೋರುತ್ತಿದೆ. ದೇಶದ ಸಮೃದ್ಧ ರಾಜ್ಯಗಳಲ್ಲೊಂದಾದ ಕರ್ನಾಟಕವು ಐಟಿ, ಬಿಟಿ, ವಿಜ್ಞಾನ, ತಂತ್ರಜ್ಞಾನ, ಗುಣಮಟ್ಟದ ಶಿಕ್ಷಣ, ತಾಂತ್ರಿಕ ಶಿಕ್ಷಣ, ಕೃಷಿ, ತೋಟಗಾರಿಕೆಯಲ್ಲೂ ಮುಂದಿದೆ. ದುರಾದೃಷ್ಟವೆಂದರೆ ರಾಜಸ್ಥಾನ ನಂತರ 2ನೇ ಅತೀ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ನಮ್ಮದು ಎಂದರು.
ಭಾರೀ ಪ್ರವಾಹ, ಅತಿವೃಷ್ಟಿ, ಭೂ ಕುಸಿತ, ಅನಾವೃಷ್ಟಿಹೀಗೆ ನಾನಾ ಪ್ರಕೃತಿ ವಿಕೋಪಕ್ಕೆ ನಮ್ಮ ರಾಜ್ಯ ತುತ್ತಾಗುತ್ತಿದೆ. ಇಂತಹ ಸಂಗತಿ, ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಕೇಂದ್ರ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿರುವುದು ದುರಂತ. ಒಂದು ಕಡೆ ಅತಿವೃಷ್ಟಿ, ಪ್ರವಾಹ, ಭೂ ಕುಸಿತ, ಮತ್ತೊಂದು ಕಡೆ ತೀವ್ರ ಬರ, ಆರ್ಥಿಕ ಸಂಕಷ್ಟಕ್ಕೆ ಪದೇಪದೇ ಸಿಲುಕುತ್ತಿರುವ ರೈತರ ನೆರವಿಗೂ ಧಾವಿಸಿಲ್ಲ. ಬರ, ಪ್ರವಾಹದಂತಹ ರಾಜ್ಯದ ಧೀರ್ಘ ಕಾಲಿನ ಸಮಸ್ಯೆಗೆ ಸ್ಪಂದಿಸುವ ವ್ಯವಧಾನವೂ ಕೇಂದ್ರಕ್ಕಿಲ್ಲ ಎಂದು ಅವರು ಕಿಡಿಕಾರಿದರು.
PSI ಹಾಗೂ 6 ಪೊಲೀಸರಿಗೆ ಬಿತ್ತು ಭಾರೀ ದಂಡ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿಮಾತನಾಡಿ, ರಾಜ್ಯ ಪ್ರಕೃತಿ ವಿಕೋಪದ ಹೊಡೆತಕ್ಕೆ ತತ್ತರಿಸಿದೆ. ಲಕ್ಷಾಂತರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಪ್ರವಾಹದಿಂದಾಗಿ ಲಕ್ಷಾಂತರ ಕುಟುಂಬ ಬೀದಿ ಪಾಲಾಗಿವೆ. ಜನ ಜೀವನ ಅಸ್ತವ್ಯಸ್ತವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಇತರೆ ಮಂತ್ರಿಗಳು, ಕೇಂದ್ರ ತಂಡ ರಾಜ್ಯದ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರೂ ಇನ್ನೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯ ಸರ್ಕಾರ ಈವರೆಗೆ ಕೇವಲ 374 ಕೋಟಿ ರು.ಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದು, ಅದರಲ್ಲಿ 203 ಕೋಟಿ ರು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಡಿ ಬಂದಿದ್ದು. ಪ್ರಕೃತಿ ವಿಕೋಪ ಪರಿಹಾರ ಕಾರ್ಯ ಅಸಮರ್ಪಕವಾಗಿದ್ದು, ಲಕ್ಷಾಂತರ ಜನರು ಅನ್ನಾಹಾರ, ಉಡಲು ಬಟ್ಟೆ, ಮಲಗಲು ಹಾಸಿಗೆ, ಹೊದಿಕೆ ಇಲ್ಲದೇ ಬೀದಿ ಪಾಲಾಗಿದ್ದಾರೆ. ಅಂತಹವರಿಗೆ ಮನೆ ಕಟ್ಟಿಕೊಡುವ ಕೆಲಸವೂ ಆಗುತ್ತಿಲ್ಲ. ಲಕ್ಷಾಂತರ ರಾಸುಗಳಿಗೆ ಮೇವು ಇತ್ಯಾದಿ ಸೌಲಭ್ಯವಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರ ಕುತಂತ್ರದಿಂದ ಡಿಕೆಶಿಗೆ ಉರುಳು: ರೇಣುಕಾಚಾರ್ಯ
ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ, ಮುಖಂಡರಾದ ಮುದೇಗೌಡ್ರ ಗಿರೀಶ, ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ ಕೆಂಗಲಹಳ್ಳಿ, ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಕುಂದುವಾಡ ತಿಪ್ಪಣ್ಣ, ಸೋಮಲಾಪುರ ಹನುಮಂತಪ್ಪ, ಕೇರಂ ವಿ.ಗಣೇಶ, ಎಲ್.ಎಚ್.ಸಾಗರ್, ಶ್ರೀಕಾಂತ ಬಗರೆ, ಮುಜಾಹಿದ್ ಪಾಷಾ, ಯುವರಾಜ, ಮಂಜಮ್ಮ, ದಾಕ್ಷಾಯಣಮ್ಮ, ಸರ್ವಮಂಗಳ, ಮುಮ್ತಾಜ್ ಬೇಗಂ, ಜಯಣ್ಣ, ಲಿಂಗರಾಜು, ಡೋಲಿ ಚಂದ್ರು, ನಲ್ಕುಂದ ಹಾಲೇಶ, ಚೈತನ್ಯಕುಮಾರ ಮೇಸ್ತ್ರಿ, ಕೆಟಿಜೆ ನಗರ ಮನು ಮೇಸ್ತ್ರಿ, ಎಸ್.ಮಲ್ಲಿಕಾರ್ಜುನ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.